ತ್ರಿವೇಣ ಸಂಗಮದಲ್ಲಿ ಎರಡನೇ ಕುಂಭಮೇಳಕ್ಕೆ ಸಿದ್ಧತೆ ಶಾಸಕ ಕೆಸಿಎನ್ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ

ಕೆ.ಆರ್.ಪೇಟೆ:  ತಾಲೂಕಿನ ತ್ರಿವೇಣ ಸಂಗಮದಲ್ಲಿ ನನ್ನ ನೇತೃತ್ವದಲ್ಲಿ ಎರಡನೇ ಕುಂಭಮೇಳ ನಡೆಯುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದು ಶಾಸಕ ಕೆ.ಸಿ.ನಾರಾಯಣಗೌಡ ತಿಳಿಸಿದರು.

ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಪುರ, ಸಂಗಾಪುರ, ಅಂಬಿಗರಹಳ್ಳಿ ಗ್ರಾಮ ಗಳ ಸಮೀಪ ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣತೀರ್ಥ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದ ಯಾತ್ರಿ ನಿವಾಸ್ ಆವರಣದಲ್ಲಿ ನಡೆದ ಕುಂಭಮೇಳ ಪೂರ್ವ ಭಾವಿ ಸಭೆ ಮತ್ತು ತ್ರೈಮಾಸಿಕ ಪ್ರಗತಿ ಪರಿ ಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಎರಡನೇ ಕುಂಭಮೇಳದ ಯಶಸ್ಸಿಗೆ ತುರ್ತಾಗಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯ ಗಳನ್ನು ಅಧಿಕಾರಿಗಳು ವಾರದೊಳಗೆ ಪಟ್ಟಿ ಮಾಡಬೇಕು. ಶ್ರೀಕ್ಷೇತ್ರಕ್ಕೆ ಭಕ್ತಾದಿಗಳು ಬಂದು ಹೋಗಲು ಅನುಕೂಲವಾಗುವಂತೆ ರಸ್ತೆಗಳ ದುರಸ್ತಿ, ಬಸ್ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡ ಬೇಕು ಎಂದು ಶಾಸಕರು ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ತಿಳಿಸಿದರು.

ಈ ಕುಂಭಮೇಳದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಸಿಎಂ ಸಿದ್ದ ರಾಮಯ್ಯ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಸೇರಿದಂತೆ ವಿವಿಧ ಜನಪ್ರತಿ ನಿಧಿಗಳು ಹಾಗೂ ಶ್ರೀನಿರ್ಮಲಾ ನಂದನಾಥ ಸ್ವಾಮೀಜಿಗಳು, ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಗಳು, ಕಾಗಿನೆಲೆ ಕನಕ ಗುರು ಪೀಠದ ಸ್ವಾಮೀಜಿಗಳು ಸೇರಿ ದಂತೆ ನಾಡಿನ ವಿವಿಧ ಮಠಗಳ ಹರಚರ ಗುರುಮೂರ್ತಿಗಳು ನೂರಾರು ಸಂಖ್ಯೆ ಯಲ್ಲಿ ಭಾಗವಹಿಸಲಿದ್ದಾರೆ.

ಕುಂಭಮೇಳ ಆಚರಣಾ ಸಮಿತಿ ಸಂಚಾಲಕ ಅಂ.ಚಿ.ಸಣ್ಣಸ್ವಾಮಿಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿ 2013ರಲ್ಲಿ ನಡೆದ ಪ್ರಥಮ ಕುಂಭಮೇಳದಲ್ಲಿ 2.75ಲಕ್ಷ ಭಕ್ತಾದಿಗಳು ಭಾಗವಹಿಸಿದ್ದರು. ಈ ಬಾರಿಯ ಕುಂಭ ಮೇಳಕ್ಕೆ ನಾಡಿನ 5ಲಕ್ಷಕ್ಕೂ ಹೆಚ್ಚಿನ ಭಕ್ತಾದಿಗಳು ಸೇರುವ ನಿರೀಕ್ಷೆ ಇದೆ ಎಂದರು.

ಕುಂಭಮೇಳ ಸಭೆ ಜೊತೆಗೆ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಯಿತು. ಕಾರ್ಯ ಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಜೆ.ಪ್ರೇಮ ಕುಮಾರಿ, ಜಿಪಂ ಉಪಾಧ್ಯಕ್ಷೆ ಗಾಯತ್ರಿ, ತಾಪಂ ಅಧ್ಯಕ್ಷೆ ಜಯಲಕ್ಷ್ಮೀ, ತಾಪಂ ಉಪಾಧ್ಯಕ್ಷ ಜಾನಕೀರಾಂ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ವಿಜಯಕುಮಾರ್, ಜಿಪಂ ಸದಸ್ಯರಾದ ಹೆಚ್.ಟಿ.ಮಂಜು, ರಾಮದಾಸ್, ಬಿ.ಎಲ್.ದೇವರಾಜು, ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ್, ತಾಪಂ ಇಓ ಚಂದ್ರಮೌಳಿ, ಗ್ರಾಪಂ ಅಧ್ಯಕ್ಷೆ ಸುಮತಿ, ಉಪಾಧ್ಯಕ್ಷೆ ಕೆ.ಎಸ್. ಗಂಗೆ, ಪಿಡಿಓ ಮಹೇಶ್, ಸಿಪಿಐ ಹೆಚ್.ಬಿ. ವೆಂಕಟೇಶಯ್ಯ, ಎಸ್‍ಐಗಳಾದ ಹೆಚ್.ಎಸ್. ವೆಂಕಟೇಶ್, ಕೆ.ಎನ್.ಗಿರೀಶ್, ಬಿಇಓ ಬಿ.ನಾಯಕ್, ಡಾ.ರಘು, ಬಿಸಿಎಂ ಅಧಿಕಾರಿ ವೆಂಕಟೇಶ್ ಇನ್ನಿತರರಿದ್ದರು.