ಸ್ವರ್ಣಗೌರಿ ಜಾತ್ರಾ ಮಹೋತ್ಸವಕ್ಕೆ ಮಾಡಾಳು ಸನ್ನದ್ಧ

ಅರಸೀಕೆರೆ:  ರಾಜ್ಯದ ಮೂಲೆ ಮೂಲೆಗಳಲ್ಲೂ ಮಾಡಾಳು ಗೌರಮ್ಮನೆಂದು ಖ್ಯಾತಿಯಾಗಿರುವ ತಾಲೂಕು ಮಾಡಾಳು ಗ್ರಾಮದ ಸ್ವರ್ಣ ಗೌರಿ ಅಮ್ಮನವರ ಒಂಭತ್ತು ದಿನಗಳ ಜಾತ್ರಾ ಮಹೋತ್ಸವ ನಾಳೆ (ಸೆ.12) ಆರಂಭವಾಗಲಿದ್ದು. ಈ 9 ದಿನಗಳಲ್ಲಿ ಆಗಮಿಸುವ ಭಕ್ತ ಸಾಗರ ಸತ್ಕರಿಸಲು ಗ್ರಾಮ ಸರ್ವ ಸನ್ನದ್ಧವಾಗಿದೆ.

ಅರಸೀಕೆರೆ ಪ್ರಸನ್ನ ಗಣಪತಿ ರಾಜ್ಯಾದ್ಯಂತ ಹೆಸರುವಾಸಿಯಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಇದೇ ತಾಲೂಕಿನ ಮಾಡಾಳು ಗ್ರಾಮದ ಸ್ವರ್ಣ ಗೌರಿ ಅಮ್ಮನವರು ವಿನಾಯಕ ಚೌತಿ ಹಿಂದಿನ ದಿನ ಸ್ಥಾಪಿತವಾಗಿ ಗಣಪತಿ ಆಗಮನಕ್ಕೆ ಮುನ್ನುಡಿ ಬರೆಯುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ.

ಭಕ್ತರನ್ನು ಸತ್ಕರಿಸಲು ಸಿದ್ಧತೆ: ರಾಜ್ಯ ದಲ್ಲೆಡೆ ಗಣೇಶೋತ್ಸವಕ್ಕೆ ಪ್ರಾಮುಖ್ಯತೆ ಇದ್ದರೆ ತಾಲೂಕಿನ ಮಾಡಾಳು ಗ್ರಾಮ ದಲ್ಲಿ ಮಾತ್ರ ವಿಭಿನ್ನವೆಂಬಂತೆ ಸ್ವರ್ಣಗೌರಿಗೆ ಹೆಚ್ಚು ಮನ್ನಣೆ ಹಾಗೂ ಸ್ವರ್ಣಗೌರಿ ವ್ರತಕ್ಕೆ ಜನಪ್ರಿಯತೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಸ್ವರ್ಣಗೌರಿ ಪ್ರತಿಷ್ಠಾಪನೆಗೆ ಸಿದ್ಧತಾ ಕಾರ್ಯ ಗಳು ಪೂರ್ಣಗೊಂಡಿದೆ. ಗ್ರಾಮದ ಮಧ್ಯ ಭಾಗದಲ್ಲಿರುವ ದೇಗುಲ, ಕಲ್ಯಾಣಿ ಸ್ವಚ್ಛತೆ, ಅನ್ನದಾಸೋಹಕ್ಕೆ ಸಿದ್ಧತೆ ಸೇರಿದಂತೆ ಭಕ್ತರನ್ನು ಸತ್ಕರಿಸಲು ಗ್ರಾಮಸ್ಥರು ಸಂಘ ಟಿತರಾಗಿ ಟೊಂಕ ಕಟ್ಟಿ ಸಿದ್ಧರಾಗಿದ್ದಾರೆ.

ಗೌರಮ್ಮ ಪ್ರತಿಷ್ಠಾಪನೆ: ಗೌರಿ ಹಬ್ಬವಾದ ಬಾದ್ರಪದ ಮಾಸದ ತದಿಗೆ ದಿನ (ಸೆ.12) ಬೆಳಿಗ್ಗೆ ಗೌಡರ ಬಾವಿ ಮೂಲಸನ್ನಿಧಿಯಲ್ಲಿ ನಿಯಮ ನಿಷ್ಠೆಯಿಂದ ಮೃತಿಕೆ(ಮಣ್ಣು) ಗೌರಮ್ಮ ಮೂರ್ತಿ ತಯಾರಿಸಿ ಕಡಲೆ ಇಟ್ಟಿನ ಲೇಪನ ಮಾಡಿ ಗ್ರಾಮದಲ್ಲಿರುವ ಬಸವೇಶ್ವರ ದೇಗುಲಕ್ಕೆ ತಂದು ಪ್ರತಿಷ್ಠಾಪಿಸ ಲಾಗುತ್ತದೆ. ನಂತರ ಹಾರನಹಳ್ಳಿ ಕೋಡಿ ಮಠ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ವರ್ಣಗೌರಿಗೆ ಮೂಗುತಿ ತೊಡಿಸುವ ಮೂಲಕ ಗೌರಿ ಯನ್ನು ಪ್ರಾಣ ಪ್ರತಿಷ್ಠಾಪಿಸುವ ಸಂಪ್ರದಾಯ ಪಾಲಿಸಿಕೊಂಡು ಬರಲಾಗಿದ್ದು, ಅಂದಿನಿಂದ ನಂತರ 9 ದಿನಗಳ ಕಾಲ ಶಾಸ್ತ್ರ ಬದ್ಧವಾಗಿ ಪೂಜಿಸಲಾಗುತ್ತದೆ.

ಚಂದ್ರಮಂಡಲ, ದುಗ್ಗಳೋತ್ಸವ: ಒಂಭತ್ತನೇ ದಿನ(ಸೆ.20) ಮುಂಜಾನೆ ದೇವಾ ಲಯದಲ್ಲಿ ಚಂದ್ರಮಂಡಲೋತ್ಸವ ಹಾಗೂ ದುಗ್ಗಳೋತ್ಸವ, ಮಹಾ ಮಂಗಳಾರತಿ ನಡೆಯಲಿದೆ. ಈ ವೇಳೆ ಮಹಿಳೆಯರು ತಲೆ ಮೇಲೆ ದುಗ್ಗಳ ಹೊತ್ತು ಮಾಡುವ ಕರ್ಪೂರದ ಆರತಿ ಸೇವೆ ಭಕ್ತಿಪೂರ್ವಕ. ಇದನ್ನು ಕಣ್ಣುಂಬಿಕೊಳ್ಳಲು ಸಹಸ್ರ ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಾರೆ.

ಮಡಿಲಕ್ಕಿ ಸೇವೆ: ಹತ್ತನೇ ದಿನವಾದ ಸೆ.21ರಂದು ಸ್ವರ್ಣಗೌರಿ ದೇವಿಗೆ ಗ್ರಾಮಸ್ಥ ರಿಂದ ಮಡಿಲಕ್ಕಿ ಸೇವೆ ನಡೆಯಲಿದೆ. ಅಂದು ಪುಷ್ಪಾಲಂಕೃತ ಮಂಟಪದಲ್ಲಿ ದೇವಿ ಮೂರ್ತಿ ಇರಿಸಿ ಗ್ರಾಮದ ಪ್ರತಿ ಮನೆ ಬಾಗಿಲಿಗೆ ಉತ್ಸವ ತೆರಳಿದೆ. ಈ ವೇಳೆ ಮಹಿಳೆಯರು ದೇವಿಗೆ ಪೂಜೆ ಸಲ್ಲಿಸಿ ಮಡಿಲಕ್ಕಿ ಸಲ್ಲಿಸುವುದು ವಾಡಿಕೆ.

ಮೂರ್ತಿ ವಿಸರ್ಜನೆ: ನಂತರ ಅಂದೇ ಸಂಜೆ 5 ಗಂಟೆಗೆ ಮೂರ್ತಿ ವಿಸರ್ಜಿಸಲಾಗುವುದು. ಗ್ರಾಮದ ಮುಂಭಾಗದಲ್ಲಿ ರುವ ಕಲ್ಯಾಣಿಯಲ್ಲಿ ಹಾರನಹಳ್ಳಿ ಕೋಡಿ ಮಠದ ಸ್ವಾಮೀಜಿ ಸಮ್ಮುಖದಲ್ಲಿ ಕರ್ಪೂರ ಆರತಿಯೊಡನೆ ಅಮ್ಮನ ವರನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ.

ಮಾಡಾಳು ಸ್ವರ್ಣಗೌರಿ ಪ್ರತಿಷ್ಠಾಪನೆ ಹಿನ್ನೆಲೆ: ಕಳೆದ 150 ವರ್ಷಗಳಿಗಿಂತಲೂ ಬಾದ್ರಪದ ಮಾಸದ ತದಿಗೆ ದಿನ (ಸೆ.12) ನಿಯಮ ನಿಷ್ಠೆಯಿಂದ ಮೃತಿಕೆ(ಮಣ್ಣು) ಗೌರಮ್ಮ ಮೂರ್ತಿ ತಯಾರಿಸಿ ಬಸವೇಶ್ವರ ದೇಗುಲದಲ್ಲಿ ಪ್ರತಿಷ್ಠಾಪಿಸಿ, 9 ದಿನ ಪೂಜಿಸಿ ವಿಸರ್ಜಿಸುವುದು ವಾಡಿಕೆ. ಈ 150 ವರ್ಷಗಳ ಹಿಂದೆ ಹಾರನಹಳ್ಳಿ ಕೋಡಿಮಠದ ಪರಮ ತಪಸ್ವಿ ಶಿವಲಿಂಗ ಶ್ರೀಗಳು ಸ್ವರ್ಣಗೌರಿ ದೇವಿಗೆ ವಜ್ರದ ಮೂಗುತಿ ಧರಿಸಿದ್ದರು ಎಂಬ ಇತಿಹಾಸವಿದೆ. ಸ್ವರ್ಣಗೌರ್ಲಿ ಪ್ರತಿ ಷ್ಠಾಪಿಸಿದ ನಂತರ ಮುದ್ದೇಗೌಡರ ವಂಶಸ್ಥರು 10 ದಿನಗಳ ನಿರಂತರ ಪೂಜಾ ಕೈಂಕರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಸ್ವರ್ಣಗೌರಿ ಕೇವಲ ಮೂರ್ತಿಯಲ್ಲ, ಸಾಕ್ಷಾತ್ ಪಾರ್ವತಿ ದೇವಿಯ ಅಪರಾವತಾರವೆಂದೇ ಹೇಳಲಾಗುತ್ತದೆ. ಶತಮಾನಗಳ ಹಿಂದಿನಿಂದಲೂ ಮೂಗುತಿ ಮಹಿಮೆಯಿಂದ ಸ್ವರ್ಣಗೌರಿ ನಾಡಿನಾ ದ್ಯಂತ ಜಗದ್ವಿಖ್ಯಾತಿ ಪಡೆದಿದ್ದಾಳೆ. ರಾಜ್ಯ ಹಾಗೂ ಹೊರರಾಜ್ಯ ಗಳಿಂದ ಲಕ್ಷಾಂತರ ಭಕ್ತರು 9 ದಿನಗಳ ಕಾಲ ಹಗಲಿರುಳೆನ್ನದೆ ಆಗಮಿಸಿ ಹರಕೆ ಸಲ್ಲಿಸುತ್ತಾರೆ. ಇನ್ನೊಂದು ವಿಶೇಷವೆಂದರೆ ಈ ಮಹೋತ್ಸವಕ್ಕೆ ನಾನಾ ಮಠಾಧೀಶರು, ಚಲನಚಿತ್ರ ನಟರು, ವಿವಿಧ ರಾಜಕೀಯ ಮುಖಂಡರು, ಉದ್ಯಮಿಗಳು ಸೇರಿದಂತೆ ಲಕ್ಷಾಂತರ ಭಕ್ತರ ಸಮೂಹವೇ ಈ ಕ್ಷೇತ್ರಕ್ಕೆ ಆಗಮಿಸುತ್ತದೆ.

ಜಾತ್ರಾ ಮಹೋತ್ಸವದ ವೈಶಿಷ್ಟ್ಯ: ಸ್ವರ್ಣಗೌರಿ ತಾಯಿಗೆ ಕರ್ಪೂರ ಅರ್ಪಣೆ ಭಕ್ತಿಯೇ ಪ್ರಧಾನ. ಈಕೆ ಯಾವುದೇ ಆಡಂಬರ ಬಯಸುವವಳಲ್ಲ. ಹಾಗೆಯೇ ಬೆಳ್ಳಿ, ಬಂಗಾರ ಛತ್ರಿ ಚಾಮರಗಳಿಲ್ಲ. ಭಕ್ತರು ತಮ್ಮ ಕಷ್ಟ ಕಾರ್ಪಣ್ಯಗಳಿಗೆ ಹರಕೆ ಮಾಡಿಕೊಳ್ಳುವ ಸೀರೆ, ಅಕ್ಕಿ ಹಾಗೂ ಕರ್ಪೂರ ಸೇವೆಯೇ ಇಲ್ಲಿ ಹೆಚ್ಚು ಮಹತ್ವ ಪಡೆದಿದೆ. ಈ ಆಚರಣೆ ಒಂದು ಕೋಮು ಜನಾಂಗ ಜಾತಿ ಜನರು ನಡೆಸುವ ಜಾತ್ರೆಯಲ್ಲ. ಇಲ್ಲಿ ಸರ್ವಜನಾಂಗದ ಜನರು ಭಾಗಿಯಾಗಿ ತಮ್ಮ ಸೇವೆ ಸಲ್ಲಿಸುತ್ತಾರೆ. ಎಲ್ಲ ವರ್ಗದ ಜನರೂ ನೇರವಾಗಿ ದೇವಿಯ ದರ್ಶನ ಪಡೆದು ಧನ್ಯರಾಗುವ ಸುವರ್ಣಾವಕಾಶ ಈ ಜಾತ್ರಾ ಮಹೋತ್ಸವದ ವೈಶಿಷ್ಟ್ಯ.