ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಾ.ರಾ.ಮಹೇಶ್-ಸಂದೇಶ್ ನಾಗರಾಜ್ ಮಾತಿನ ಚಕಮಕಿ

ಬೆಂಗಳೂರು: ವಿಧಾನಸೌಧದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರ ಹಾಜರಾತಿಯನ್ನು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಶಾಸಕಾಂಗ ಪಕ್ಷದ ಅಂತಿಮ ಕ್ಷಣದಲ್ಲಿ ಸಾ.ರಾ. ಮಹೇಶ್ ಮಾತನಾಡುತ್ತಾ, ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಸಂದೇಶ್ ನಾಗರಾಜ್ ಅವರನ್ನು ಸಭೆಯಿಂದ ಹೊರ ಹಾಕುವಂತೆ ಹೇಳಿದರು. ಅವರಿಗೆ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಅವರು ಬೆಂಬಲಿಸಿದರು.

ಈ ವೇಳೆ ಅವರಿಗೆ ಪ್ರತಿಕ್ರಿಯಿಸಿದ ಸಂದೇಶ್ ನಾಗರಾಜ್, ನನ್ನನ್ನು ಸಭೆಯಿಂದ ಹೊರ ಕಳುಹಿಸುವಂತೆ ಹೇಳಲು ಸಾ.ರಾ. ಮಹೇಶ್ ಅವರಿಗೆ ಏನು ಅಧಿಕಾರವಿದೆ? ಅವರೇನು ಪಕ್ಷದ ರಾಜ್ಯಧ್ಯಕ್ಷರೇ ಅಥವಾ ಜಿಲ್ಲಾಧ್ಯಕ್ಷರೇ? ಎಂದು ಪ್ರಶ್ನಿಸಿದರಲ್ಲದೆ, ರಾಜ್ಯಾಧ್ಯಕ್ಷರಾಗಿರುವ ಕುಮಾರಸ್ವಾಮಿಯವರೇ ನಾನು ಸಭೆಯಲ್ಲಿರುವುದನ್ನು ಆಕ್ಷೇಪಿಸದೇ ಮೌನವಹಿಸಿದ್ದಾರೆ. ಒಂದು ವೇಳೆ ನಾನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾದಲ್ಲಿ ಅವರು ಮೌನವಾಗಿ ಇರುತ್ತಿದ್ದೆರೆ? ಎಂದು ಸಾ.ರಾ. ಮಹೇಶ್ ಅವರಿಗೆ ಪ್ರತಿರೋಧ ವ್ಯಕ್ತಪಡಿಸಿದರು. ಈ ವೇಳೆ ಇತರ ಶಾಸಕರು ಈ ವಿಚಾರವನ್ನು ಮುಂದುವರೆಸದಂತೆ ಸಾ.ರಾ. ಮಹೇಶ್ ಅವರಿಗೆ ಹೇಳಿ ಸುಮ್ಮನಾಗಿಸಿದರು ಎಂದು ಮೂಲಗಳು ತಿಳಿಸಿವೆ.

ಈ ಕುರಿತು `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಸಂದೇಶ್ ನಾಗರಾಜ್, ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಘಟನಾವಳಿಗಳು ನಡೆದದ್ದು ನಿಜ ಎಂದರು.