ಚಾಮರಾಜನಗರದಲ್ಲಿ ಶೀಘ್ರವೇ ಜವಳಿ ಉದ್ಯಮ ಆರಂಭ

ನವದೆಹಲಿ: ಚಾಮರಾಜನಗರ ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ಜವಳಿ ಕೈಗಾರಿಕೆಯನ್ನು ಸ್ಥಾಪಿಸಲು ಸಟ್ಲೆಜ್ ಟೆಕ್ಸ್‍ಟೈಲ್ಸ್ ಮತ್ತು ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಮುಂದೆ ಬಂದಿದೆ ಎಂದು ಸಂಸದ ಆರ್.ಧ್ರುವ ನಾರಾಯಣ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಗುರುವಾರ ಈ ಸಂಸ್ಥೆಯ ಮುಖ್ಯಸ್ಥರೊಂದಿಗೆ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ. ಸರ್ಕಾರದ ಸಹಕಾರ ನೀಡಿ ದರೆ ಶೀಘ್ರವೇ ಕಂಪೆನಿ ಆರಂಭಿಸುವ ಭರವಸೆ ನೀಡಿದ್ದಾರೆ ಎಂದರು.

ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ಸುಪರ್ದಿಯಲ್ಲಿ ಜಿಲ್ಲೆಯ 1,600 ಎಕರೆ ಕೈಗಾರಿಕಾ ಪ್ರದೇಶಾಭಿವೃದ್ಧಿಗೊಂಡಿದೆ. ಈ ಪ್ರದೇಶದಲ್ಲಿ ಕೈಗಾರಿಕೆಯನ್ನು ಸ್ಥಾಪಿ ಸುವಂತೆ ಕೈಗಾರಿಕೋದ್ಯಮಿಗಳೊಂದಿಗೆ ಈ ಹಿಂದೆ ಸರ್ಕಾರ ಹಲವು ಸುತ್ತಿನ ಮಾತು ಕತೆಗಳನ್ನು ನಡೆಸಿದ್ದರೂ ಯಾವುದೇ ಕಂಪನಿಗಳು ಆಸಕ್ತಿ ತೋರಿರಲಿಲ್ಲ. ಪ್ರಸ್ತುತ ಸಟ್ಲೆಜ್ ಟೆಕ್ಸ್‍ಟೈಲ್ ಮತ್ತು ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಆಸಕ್ತಿ ತೋರಿದೆ ಎಂದು ತಿಳಿಸಿದ್ದಾರೆ.

ಸಟ್ಲೆಜ್ ಟೆಕ್ಸ್‍ಟೈಲ್ಸ್ ಮತ್ತು ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮುಖ್ಯಸ್ಥರು ನವದೆಹಲಿಯಲ್ಲಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ, ಕೈಗಾರಿಕಾ ಸ್ಥಾಪನೆಯ ಪ್ರಾರಂಭಿಕ ವರ್ಷಗಳಲ್ಲಿ ಸರ್ಕಾರದಿಂದ ಕೆಲವೊಂದು ಸಬ್ಸಿಡಿಗಳು ಅವಶ್ಯಕತೆ ಇದ್ದು, ಸರ್ಕಾರ ಇವುಗಳನ್ನು ನೀಡಿದರೆ ಚಾಮರಾಜನಗರ ಜಿಲ್ಲೆಯಲ್ಲಿ ಕೈಗಾರಿಕೆ ಯನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ ಎಂದು ಸಂಸದರು ಹೇಳಿದ್ದಾರೆ.

ಈ ಕೈಗಾರಿಕಾ ಸ್ಥಾಪನೆಯಿಂದ ಪ್ರಾರಂಭಿಕ ಹಂತದಲ್ಲಿ ಜಿಲ್ಲೆಯ 1,500 ಜನರಿಗೆ ಉದ್ಯೋಗ ಲಭಿಸಲಿದೆ. ನಂತರ ಮುಂದಿನ ಹಂತಗಳಲ್ಲಿ 15 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸಲಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.