ವಿರೋಧ ನಡುವೆಯೂ ತಲಚೇರಿ ರೈಲು ಮಾರ್ಗ; ಖಂಡನೆ

ಮಡಿಕೇರಿ: ಕೊಡಗಿನ ಜನರ ವಿರೋಧದ ನಡುವೆಯೂ ಕೊಡಗು ಜಿಲ್ಲೆಯ ಮೂಲಕ ಸಾಗುವ ಮೈಸೂರು-ತಲಚೇರಿ ರೈಲು ಮಾರ್ಗಕ್ಕೆ ದಕ್ಷಿಣ ಕೊಡಗಿನಲ್ಲಿ ಸರ್ವೆ ಕಾರ್ಯ ನಡೆಸಿ ರುವ ಕ್ರಮವನ್ನು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ತೀವ್ರವಾಗಿ ಖಂಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರುಗಳು, ದಕ್ಷಿಣ ಕೊಡಗಿನಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ತಿಳಿಸಿದ್ದಾರೆ. ಕೊಡಗಿನ ಜನರ ಭಾವನೆಗೆ ವಿರುದ್ಧವಾಗಿ ರೈಲು ಮಾರ್ಗ ನಿರ್ಮಾಣ ಮಾಡಲು ಮುಂದಾ ದರೆ ಕೊಡವ ಸಮಾಜಗಳ ಒಕ್ಕೂಟದ ನೇತೃತ್ವದಲ್ಲಿ ಎಲ್ಲಾ ಕೊಡವ ಸಮಾಜಗಳು ಒಗ್ಗೂಡಿ ತೀವ್ರ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯರ ಗಮನಕ್ಕೆ ತಾರದೆ ದಕ್ಷಿಣ ಕೊಡಗಿನ ವಿವಿಧ ಭಾಗ ಗಳಲ್ಲಿ ಸರ್ವೆ ಕಾರ್ಯ ನಡೆಸಿರುವುದನ್ನು ಒಕ್ಕೂಟ ತೀವ್ರವಾಗಿ ವಿರೋಧಿಸುತ್ತದೆ ಮತ್ತು ಸರ್ವೆಯನ್ನು ತಕ್ಷಣ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲೆಯ ಶಾಸಕರುಗಳು ಮತ್ತು ಸಂಸದರು ರೈಲು ಮಾರ್ಗದಿಂದ ಕೊಡಗು ಜಿಲ್ಲೆಗೆ ಆಗಬಹುದಾದ ಕಷ್ಟ, ನಷ್ಟಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕೆಂದು ವಿಷ್ಣು ಕಾರ್ಯಪ್ಪ ಹಾಗೂ ಶಂಕರಿ ಪೂವಯ್ಯ ಮನವಿ ಮಾಡಿದ್ದಾರೆ.

ಹೆದ್ದಾರಿಯೂ ಬೇಡ: ನಾವು ಹೆದ್ದಾರಿ ನಿರ್ಮಿಸಲು ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ನಾಲ್ಕು ಹಾಗೂ ಆರು ಲೇನ್ ಮಾರ್ಗದ ಅವಶ್ಯಕತೆ ಕೊಡಗು ಜಿಲ್ಲೆಗೆ ಬೇಡ. ರೈಲು ಮಾರ್ಗ, ನಾಲ್ಕು ಅಥವಾ ಆರು ಲೇನ್ ಹೆದ್ದಾರಿ ಮಾರ್ಗ ನಿರ್ಮಾಣವಾದಲ್ಲಿ ಕೊಡಗಿನ ಸ್ವರೂಪವೇ ಬದಲಾಗಲಿದೆ. ಅಲ್ಲದೆ ನದಿ ಮೂಲಕ್ಕೂ ಧಕ್ಕೆಯಾಗಲಿದ್ದು, ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿರುವ ವಿಷ್ಣು ಕಾರ್ಯಪ್ಪ ಹಾಗೂ ಶಂಕರಿ ಪೂವಯ್ಯ, ಕೊಡಗಿನ ಮೂಲಕ ಹಾದು ಹೋಗುವ ರೈಲು ಮಾರ್ಗ ಮತ್ತು ಹೆದ್ದಾರಿ ಯೋಜನೆಗಳನ್ನು ತಕ್ಷಣ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.