ಗೌತಮ ಕ್ಷೇತ್ರದ ಸ್ವಾಮೀಜಿ ಕರೆತರಲು ಮುಂದಾದ ಎನ್‌ಡಿಆರ್‌ಎಫ್‌ ತಂಡ

ಮಂಡ್ಯ:  ಶ್ರೀರಂಗಪಟ್ಟಣ ತಾಲೂಕಿನ ದೊಡ್ಡೇಗೌಡನ ಗ್ರಾಮದ ಬಳಿ ಇರುವ ಗೌತಮ ಕ್ಷೇತ್ರದಲ್ಲಿ ಉಳಿದಿರುವ ಗಜಾನನ ಸ್ವಾಮೀಜಿ ಮತ್ತು ಮೂವರು ಶಿಷ್ಯರನ್ನು ಹೊರ ತರಲು ಎನ್‌ಡಿಆರ್‌ಎಫ್‌ ಪಡೆ ಬುಧವಾರ ಯತ್ನಿಸಿದೆ.

ಸ್ವಾಮೀಜಿ ಅವರು ಕಾವೇರಿ ನದಿ ಯಲ್ಲಿ ಪ್ರವಾಹ ಬಂದಾಗಿನಿಂದ ಗೌತಮ ಕ್ಷೇತ್ರದಲ್ಲೇ ತಂಗಿದ್ದರು. ಇದೀಗ ಕಾವೇರಿ ಪ್ರವಾಹ ಕೊಂಚ ಕಡಿಮೆ ಯಾದ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರ ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ಕರೆತರಲು ಮುಂದಾಗಿದೆ.

ಎನ್‌ಡಿಆರ್‌ಎಫ್‌ ಪಡೆಯೊಂದಿಗೆ ಶ್ರೀರಂಗಪಟ್ಟಣ ತಹಶೀಲ್ದಾರ್ ನಾಗೇಶ್ ಕೂಡ ಆಗಮಿಸಿದ್ದು, ಅವರ ನೇತೃತ್ವದಲ್ಲಿ ಬೋಟಿಂಗ್ ಮೂಲಕ ನಡುಗಡ್ಡೆಗೆ ತೆರಳಲು ಎನ್‌ಡಿಆರ್‌ಎಫ್‌ ಪಡೆಯಿಂದ ಸ್ಥಳ ಪರಿಶೀಲನೆ ನಡೆಸಲಾಗಿದೆ.

ಆಶ್ರಮ ಬಿಟ್ಟು ಬರುವುದಿಲ್ಲ: ಸುಮಾರು 30 ವರ್ಷಗಳಿಂದ ನಾನಿಲ್ಲಿದ್ದು, ಈಗ ಬಂದಿರೋ ಪ್ರವಾಹದಿಂದ ನನಗಾಗಲೀ, ಆಶ್ರಮಕ್ಕಾಗಲೀ ಯಾವುದೇ ತೊಂದರೆ ಇಲ್ಲ. ಹಾಗಾಗಿ, ನಾನು ಆಶ್ರಮ ಬಿಟ್ಟು ಬರುವ ಪ್ರಮೇಯವೇ ಇಲ್ಲ ಎಂದು ದೊಡ್ಡೇಗೌಡನ ಬಳಿ ಕಾವೇರಿ ನಡುಗಡ್ಡೆಯಲ್ಲಿರುವ ಗೌತಮ ಕ್ಷೇತ್ರದ ಗಜಾನನ ಸ್ವಾಮೀಜಿ ಎನ್‌ಡಿಆರ್‌ಎಫ್‌ ತಂಡಕ್ಕೆ ಹೇಳಿದ್ದಾರೆ.

ನಾನು ಇಲ್ಲಿ ಸುರಕ್ಷಿತವಾಗಿದ್ದೇನೆ ನನಗೆ ಯಾವ ತೊಂದರೆಯೂ ಇಲ್ಲ. ನಾನು ಅಹಂಕಾರದಿಂದ ಆಶ್ರಮ ಬಿಟ್ಟು ಬರುವುದಿಲ್ಲ ಎನ್ನುತ್ತಿಲ್ಲ. ಬದಲಾಗಿ ಇಲ್ಲಿ ನಾಲ್ಕೈದು ರಾಸುಗಳಿವೆ. ಇಲ್ಲಿನ ಶಿವಲಿಂಗಕ್ಕೆ ನಿತ್ಯ ನೈವೇದ್ಯ ಮತ್ತು ನನ್ನ ನಿತ್ಯ ತಪೋ ಕೆಲಸಕ್ಕೆ ಅಡ್ಡಿಯಾಗಬಾರದು ಎಂದು ನಾನು ಬರುತ್ತಿಲ್ಲ ಅಷ್ಟೆ ಎಂದರು. ಈ ಕುರಿತಂತೆ ನಾನು ಜಿಲ್ಲಾಧಿಕಾರಿಗಳಿಗೆ ಮತ್ತು ತಾಲೂಕು ಆಡಳಿತಕ್ಕೆ ಈಗಾಗಲೇ ತಿಳಿಸಿದ್ದೇನೆ. ಜೊತೆಗೆ ನನಗೆ ಒಂದು ವೇಳೆ ಏನಾದರೂ ಸಮಸ್ಯೆಯಾದರೆ ಅದಕ್ಕೆ ನಾನೇ ಜವಾಬ್ದಾರಿ ಎಂದು ಮುಚ್ಚಳಿಕೆ ಪತ್ರ ಕೂಡ ಬರೆದುಕೊಟ್ಟಿದ್ದೇನೆ.

ನನಗೆ ಪ್ರವಾಹದಿಂದ ಅಸುರಕ್ಷತೆಯ ಸೂಕ್ಷ್ಮತೆ ಕಂಡುಬಂದರೆ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರುತ್ತೇನೆ. ನನ್ನಿಂದ ಯಾರಿಗಾದರೂ ತೊಂದರೆಯಾಗಿದ್ದರೆ ಕ್ಷಮಿಸಿ ಎಂದು ಕೋರಿಕೊಂಡಿದ್ದಾರೆ.