ಭಕ್ತ ಸಾಗರದ ನಡುವೆ ತಾಯಿ ಚಾಮುಂಡೇಶ್ವರಿ ರಥೋತ್ಸವ

ಮೈಸೂರು: ವಿಜಯದಶಮಿ ಮೆರವಣಿಗೆ ನಂತರ ಮೈಸೂರಿನ ಚಾಮುಂಡೇಶ್ವರಿ ರಥೋತ್ಸವ ಇಂದು ಅಪಾರ ಭಕ್ತ ಸಮೂಹದ ನಡುವೆ ಭಕ್ತಿ-ಭಾವದಿಂದ ಅದ್ಧೂರಿಯಾಗಿ ನೆರವೇರಿತು.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆದ ಈ ಪ್ರಸಿದ್ಧ ಧಾರ್ಮಿಕ ಕೈಂಕರ್ಯ ವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು ತಾಯಿ ಚಾಮುಂಡೇಶ್ವರಿ ಕೃಪೆಗೆ ಪಾತ್ರರಾದರು. ಯದುವಂಶಸ್ಥರಾದ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಬೆಳಿಗ್ಗೆ 8.10 ಗಂಟೆಗೆ ವೃಶ್ಚಿಕ ಶುಭ ಲಗ್ನದಲ್ಲಿ ವೈಭವದ ಚಾಮುಂಡೇಶ್ವರಿ ಮಹಾರಥೋತ್ಸವ (ರಥಾರೋಹಣ)ಕ್ಕೆ ಚಾಲನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರೊಂದಿಗೆ ಹಗ್ಗ ಹಿಡಿದು ರಥವನ್ನು ಎಳೆಯುವ ಮೂಲಕ ಯದುವೀರ್ ಅವರು ರಥೋತ್ಸವಕ್ಕೆ ಚಾಲನೆ ನೀಡು ತ್ತದ್ದಂತೆಯೇ ನೆರೆದಿದ್ದ ಭಕ್ತ ಸಾಗರ ಕೈಜೋಡಿಸಿ, ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನೊತ್ತ ರಥವು ಯಾವುದೇ ಅಡ್ಡಿ ಆತಂಕವಿಲ್ಲದೆ ಸರಾಗವಾಗಿ ದೇವ ಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿತು.

ಅಲಂಕೃತ ಮಹಾರಥದಲ್ಲಿ ಆಸೀನರಾಗಿದ್ದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯ ದರ್ಶನ ಪಡೆದ ಸುಮಾರು 40 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು, ಭಕ್ತಿ ಪರವಶರಾಗಿ ರಥಕ್ಕೆ ದವನ-ಬಾಳೆ ಹಣ್ಣು, ಹೂ ಸಮರ್ಪಿಸಿ ಈ ಧಾರ್ಮಿಕ ಕೈಂಕರ್ಯಕ್ಕೆ ಸಾಕ್ಷಿಯಾದರು. ಇದಕ್ಕೂ ಮೊದಲು

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಂತೆಯೇ ದೇವಸ್ಥಾನದಿಂದ ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಆಗಮಿಕರು ಮಂಗಳವಾಧ್ಯದೊಂದಿಗೆ ತಂದು ಮಹಾಬಲೇಶ್ವರ ದೇವಸ್ಥಾನದಲ್ಲಿ ಮಂಟಪೋತ್ಸವ ಕೈಂಕರ್ಯ ಹಾಗೂ ನಡುಚಪ್ಪರ ಕಾರ್ಯಗಳನ್ನು ನೆರವೇರಿಸಿದ ನಂತರ ದೇವಸ್ಥಾನದ ಹೊರಗೆ ನಿಂತಿದ್ದ ಅಲಂಕೃತ ರಥದಲ್ಲಿ ಪ್ರತಿಷ್ಟಾಪಿಸಿದರು. ನಂತರ ಚಾಮುಂಡೇಶ್ವರಿ ದೇವಸ್ಥಾನದ ಸುತ್ತ ಒಂದು ಪ್ರದಕ್ಷಿಣೆ ಹಾಕಿದ ಬಳಿಕ ಮೊದಲಿದ್ದ ಸ್ಥಳದಲ್ಲಿ ನಿಲ್ಲಿಸಲಾಯಿತು. ರಥಾರೋಹಣವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಭಕ್ತ ಸಮೂಹ ರಥದಲ್ಲಿ ವಿರಾಜಮಾನಳಾಗಿದ್ದ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಸಂಜೆವರೆಗೂ ದವನ-ಬಾಳೆಹಣ್ನು ಸಮರ್ಪಿಸಿ ಪುನೀತರಾದರು. ನವರಾತ್ರಿ ಮಹೋತ್ಸವದ ನಂತರ ನಡೆದ ಈ ವೈಭವ ನೋಡಲು ಭಕ್ತರು ದೇವಸ್ಥಾನದ ಮೇಲೆ, ಆವರಣದಲ್ಲೂ ಕಿಕ್ಕಿರಿದು ನೆರೆದಿದ್ದರು. ರಥೋತ್ಸವದ ಅಂಗವಾಗಿ ಇಂದು ರಾತ್ರಿವರೆಗೂ ನಿರಂತರವಾಗಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಪಡೆದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್, ಮುಜರಾಯಿ ತಹಶೀಲ್ದಾರ್ ಎನ್.ಎಸ್. ಯತಿರಾಜ್, ಸಂಪತ್ಕುಮಾರನ್, ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಸಾದ್, ವ್ಯವಸ್ಥಾಪಕ ಗೋವಿಂದರಾಜು, ತಹಶೀಲ್ದಾರ್ ಟಿ.ರಮೇಶ್ ಬಾಬು ಸೇರಿದಂತೆ ಹಲವು ಅಧಿಕಾರಿಗಳು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಚಾಮುಂಡಿಬೆಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ರಥೋತ್ಸವದಲ್ಲಿ ಪಾಲ್ಗೊಂಡು ಪೂಜಾ ಕಾರ್ಯಗಳಿಗೆ ಸಕಲ ವ್ಯವಸ್ಥೆ ಮಾಡಿದರು.

ಡಿಸಿಪಿ ಎನ್.ವಿಷ್ಣುವರ್ಧನ್, ಕೆ.ಆರ್.ಉಪವಿಭಾಗದ ಎಸಿಪಿ ಧರ್ಮಪ್ಪ, ಕೆ.ಆರ್.ಠಾಣೆ ಇನ್ಸ್‍ಪೆಕ್ಟರ್ ಪ್ರಕಾಶ್ ಅವರ ನೇತೃತ್ವದಲ್ಲಿ ರಥೋತ್ಸವಕ್ಕೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಸಂಚಾರ ವಿಭಾಗದ ಎಸಿಪಿ ಜಿ.ಎನ್.ಮೋಹನ್ ನೇತೃತ್ವದ ಸಂಚಾರ ಪೊಲೀಸರು, ಭಕ್ತರ ವಾಹನಗಳಿಗೆ ನಿಲುಗಡೆ ಹಾಗೂ ಸುಗಮ ಸಂಚಾರ ವ್ಯವಸ್ಥೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಅಕ್ಟೋಬರ್ 25ರಂದು(ಗುರುವಾರ) ರಾತ್ರಿ 7 ಗಂಟೆಗೆ ದೇವಿಕೆರೆಯಲ್ಲಿ ಚಾಮುಂಡೇಶ್ವರಿ ತೆಪ್ಪೋತ್ಸವವು ನೆರವೇರಲಿದ್ದು, ಆ ಮೂಲಕ ನವರಾತ್ರಿಯ ಧಾರ್ಮಿಕ ಕೈಂಕರ್ಯವು ಮುಕ್ತಾಯವಾದಂತಾಗುತ್ತದೆ.