ಅರಣ್ಯ ಹಕ್ಕು ಕಾಯ್ದೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಬುಡಕಟ್ಟು ಕೃಷಿಕರ ಪ್ರತಿಭಟನೆ

ಮೈಸೂರು: ಅರಣ್ಯ ವಾಸಿಗಳ ಅರಣ್ಯ ಹಕ್ಕು ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆಗ್ರಹಿಸಿ ವಿಶ್ವ ಆದಿವಾಸಿ ದಿನವೂ ಆದ ಗುರುವಾರ ಹೆಚ್.ಡಿ.ಕೋಟೆ ತಾಲೂಕಿನ ಬುಡಕಟ್ಟು ಕೃಷಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ನ್ಯಾಯಾಲಯದ ಗಾಂಧೀ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾಕಾರರು, ಕೃಷ್ಣರಾಜ-ಬುಲೇವಾರ್ಡ್ ರಸ್ತೆ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಎದುರು ಪ್ರತಿಭಟನೆ ನಡೆಸಿದರು.

ವೈಯಕ್ತಿಕ ಭೂಮಿ ಹಕ್ಕಿಗಾಗಿ ಸಲ್ಲಿಸಿರುವ ಅರ್ಜಿ ನಮೂನೆ(ಎ) ಕುರಿತು ಪುನರ್ ಸರ್ವೇ ನಡೆಸಿ 1ರಿಂದ 3 ಎಕರೆವರೆಗೆ ಭೂಮಿ ಸ್ವಾಧೀನ ಹೊಂದಿರುವ ಕುಟುಂಬಗಳಿಗೆ ಭೂಮಿ ಹಕ್ಕು ಪತ್ರ ನೀಡಬೇಕು. ಸಮುದಾಯದ ಹಕ್ಕು ಪತ್ರ ಕುರಿತಂತೆ 11 ಅರಣ್ಯ ಹಕ್ಕು ಸಮಿತಿಗಳಿಗೆ ಕಡಿಮೆ ಅರಣ್ಯ ಪ್ರದೇಶಕ್ಕೆ ನಕ್ಷೆ ನಮೂದಿಸಿರುವ ಹಕ್ಕು ಪತ್ರ ರದ್ದುಪಡಿಸಿ (ಚಾಮರಾಜನಗರ ಜಿಲ್ಲೆಯಲ್ಲಿ ಸಾಮೂಹಿಕ ಹಕ್ಕು ಪತ್ರ ವಿತರಿಸಿರುವಂತೆ) ಹೊಸ ಸಾಮೂಹಿಕ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಡಿಪಿ ಕುಪ್ಪೆ ಮತ್ತು ಎನ್.ಬೆಳ್ತೂರು ಗ್ರಾಪಂ ವ್ಯಾಪ್ತಿಯ 11 ಅರಣ್ಯ ಹಕ್ಕು ಸಮಿತಿಗಳಿಗೆ ಸಾಮೂಹಿಕ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಅಂತೆಯೇ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಬೇಕು. ಕೇಂದ್ರ ಸರ್ಕಾರ ಕ್ಯಾಂಪ್ ಕಾಯ್ದೆ ಜಾರಿಗೆ ತಂದಿದ್ದು, ಈ ಕಾಯ್ದೆ ಆದಿವಾಸಿಗಳ ಅರಣ್ಯ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಈ ಕಾಯ್ದೆಯಲ್ಲಿರುವ ಅಂಶಗಳನ್ನು ತಿದ್ದುಪಡಿ ಮಾಡಬೇಕು. ಹಾಗೂ ಈ ಕಾಯ್ದೆ ಅನುಷ್ಠಾನಕ್ಕೆ ಮೀಸಲಿಟ್ಟಿರುವ 62 ಕೋಟಿ ರೂ. ಅನುದಾನವನ್ನು ಅರಣ್ಯ ಇಲಾಖೆ ಮತ್ತು ಅರಣ್ಯ ಹಕ್ಕು ಸಮಿತಿಗಳ ಸಹಯೋಗದಲ್ಲಿ ಗ್ರಾಮ ಸಭೆಯಲ್ಲಿ ಚರ್ಚಿಸಿ ಪರಿಸರ ಅಭಿವೃದ್ಧಿ ಮತ್ತು ಆದಿವಾಸಿಗಳ ಕಾರ್ಯಕ್ರಮ ಅನುಷ್ಠಾನಕ್ಕೆ ಪೂರಕವಾಗಿ ಮಾರ್ಪಾಡು ಮಾಡಬೇಕು ಎಂದು ಒತ್ತಾಯಿಸಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಕೆಲವು ಕುಟುಂಬಗಳು ಅರ್ಜಿ ಸಲ್ಲಿಸದೇ ಇದ್ದು ಅವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಅರಣ್ಯ ಆದಿವಾಸಿಗಳು ಅರಣ್ಯದ ಕಿರು ಉತ್ಪನ್ನಗಳನ್ನು ಸಂಗ್ರಹಿಸುವ ವೇಳೆ ಹಾಗೂ ಕೃಷಿ ಮಾಡುವ ವೇಳೆ ಸುಳ್ಳು ಆರೋಪದಡಿ ದಾಖಲಿಸಿರುವ ಮೊಕದ್ದಮೆಗಳನ್ನು ಕೈಬಿಡಬೇಕು. ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕು ಮಾನ್ಯ ಮಾಡುವ ಅಧಿನಿಯಮ-2006 ಮತ್ತು ನಿಯಮಗಳು-2008 ಹಾಗೂ ತಿದ್ದುಪಡಿ-2012ರ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹುಣಸೂರು ಡೀಡ್ ಸಂಸ್ಥೆ ನಿರ್ದೇಶಕ ಶ್ರೀಕಾಂತ್, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೆಂಚಯ್ಯ, ಕಾರ್ಯದರ್ಶಿ ಡಿ.ಎಂ.ಬಸವರಾಜು, ಆದಿವಾಸಿ ಮುಖಂಡರಾದ ವಿಜಯ್‍ಕುಮಾರ್, ರಾಮು, ಹೆಚ್‍ಡಿ ಕೋಟೆ ನಿಸರ್ಗ ಫೌಂಡೇಶನ್‍ನ ಗುರುದೇವ ಆರಾಧ್ಯ ಸೇರಿದಂತೆ ಆದಿವಾಸಿ ಸಮುದಾಯಗಳು 40ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.