ಅಧಿಕಾರಕ್ಕಾಗಿ ನಾವು ಯಾರ ಮನೆ ಬಾಗಿಲಿಗೂ ಹೋಗಲಿಲ್ಲ, ಕಾಂಗ್ರೆಸ್ ಮುಖಂಡರೇ ಸರ್ಕಾರ ರಚನೆ ಪ್ರಸ್ತಾಪ ಮುಂದಿಟ್ಟರು…

ಬೆಂಗಳೂರು: ಸಂದಿಗ್ದ ಸನ್ನಿವೇಶದಲ್ಲಿ ಅಧಿಕಾರ ವಹಿಸಿಕೊಂಡಿದ್ದೇನೆ. ಚುನಾವಣೆಗೂ ಮುನ್ನ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಿ, ರಾಜ್ಯಕ್ಕೆ ಮತ್ತು ನನ್ನ ಮೈತ್ರಿ ಪಕ್ಷವಾದ ಕಾಂಗ್ರೆಸ್‍ಗೆ ಇಡೀ ರಾಜ್ಯದಲ್ಲಿ ಒಳ್ಳೆ ಹೆಸರು ತಂದುಕೊಡುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಬಡವರು ಮತ್ತು ರೈತರ ಕಲ್ಯಾಣಕ್ಕೆ ನನ್ನ ಸರ್ಕಾರ ಸದಾ ಸಿದ್ಧ. ಮೈತ್ರಿ ಕಾಂಗ್ರೆಸ್ ನಾಯಕರೊಟ್ಟಿಗೆ ಚರ್ಚೆ ಮಾಡಿ, ರೈತರ ಸಾಲ ಮನ್ನಾ ಮಾಡುವುದಾಗಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ವೇಳೆ ಮತ್ತೆ ಪುನರುಚ್ಛಾರ ಮಾಡಿದರು.

ಅಧಿಕಾರಕ್ಕೆ ಬರಲು ಕಾರಣಕರ್ತರಾದ ಕಾಂಗ್ರೆಸ್ ಅಧ್ಯಕ್ಷರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ, ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ವೇಣುಗೋಪಾಲ್ ಅವರನ್ನು ಅಭಿನಂದಿಸಿದರು.

2006ರಲ್ಲಿ ಸರ್ಕಾರ ರಚನೆ ಮತ್ತು ಅಂದು ತಮ್ಮ ತಂದೆ ದೇವೇಗೌಡರಿಗಾದ ನೋವನ್ನು ಮತ್ತೆ ಪ್ರಸ್ತಾಪ ಮಾಡಿ, ಅಂದು ಬಿಜೆಪಿಯೊಟ್ಟಿಗೆ ಸೇರಿ ಸರ್ಕಾರ ರಚನೆ ಮಾಡದಿದ್ದರೆ, ದಕ್ಷಿಣ ಭಾರತದಲ್ಲಿ ಬಿಜೆಪಿ ಹೆಬ್ಬಾಗಿಲು ತೆರೆಯುತ್ತಲೇ ಇರಲಿಲ್ಲ ಎಂದರು.

ಅಂದು ನನ್ನ ಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆ ಕೈಜೋಡಿಸಿ, ಅಧಿಕಾರ ಹಂಚಿಕೊಂಡೆ. ಆದರೆ ಅಂದಿನ 20 ತಿಂಗಳ ಆಡಳಿತದಲ್ಲಿ ನನಗೆ ಬೆಂಬಲ ನೀಡಿದ ಪಕ್ಷದವರ ಕಿರುಕುಳ ದಿನನಿತ್ಯ ತಪ್ಪಿದ್ದಲ್ಲದಾಗಿತ್ತು.

ಅಧಿಕಾರ ವಹಿಸಿಕೊಂಡ ಎರಡೇ ತಿಂಗಳಲ್ಲಿ ನನ್ನ ಮೇಲೆ 150 ಕೋಟಿ ರೂ. ಭ್ರಷ್ಟಾಚಾರದ ಆರೋಪ ಹೊರಿಸಿದರು. ಅಷ್ಟೇ ಅಲ್ಲ ಒಬ್ಬ ಸಚಿವರು ನನ್ನ ವಿರುದ್ಧ ಕ್ರಿಮಿನಲ್ ದಾವೆಯನ್ನೂ ಹೂಡಿದ್ದರು.

ನನಗೆ ಅಂಟಿಕೊಂಡಿರುವ ಕಪ್ಪು ಚುಕ್ಕೆ ತೆಗೆಯುವುದೇ ನನ್ನ ಉದ್ದೇಶ. ಅಧಿಕಾರಕ್ಕಾಗಿ ನಾನು ಯಾರ ಮನೆಯ ಬಾಗಿಲಿಗೂ ಹೋಗಲಿಲ್ಲ. ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಕಾಂಗ್ರೆಸ್‍ನ ರಾಜ್ಯಾಧ್ಯಕ್ಷ ಡಾ. ಜಿ.ಪರಮೇಶ್ವರ್ ಹಾಗೂ ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಗುಲಾಮ್ ನಬೀ ಆಜಾದ್ ನನ್ನನ್ನು ಸಂಪರ್ಕಿಸಿ, ಸರ್ಕಾರ ರಚನೆ ಮಾಡುವ ಪ್ರಸ್ತಾಪವಿಟ್ಟರು.

ವಿಷಯ ತಿಳಿಯದೇ ಯಡಿಯೂರಪ್ಪನವರು ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದಾರೆ. 2006ರಲ್ಲೂ ನಿಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನನ್ನ ಮನೆ ಬಾಗಿಲಿಗೆ ಬಂದಿದ್ದೀರಿ. ದೇವೇಗೌಡರ ಕುಟುಂಬ ಎಂದೂ ಕೂಡ ಅಧಿಕಾರಕ್ಕಾಗಿ ಲಾಲಾಸೆಪಡುವುದಿಲ್ಲ.

ಕಾಂಗ್ರೆಸ್ ಅಷ್ಟೇ ಅಲ್ಲ ಬೇರೆ ಪಕ್ಷದ ನಾಯಕರು ಸರ್ಕಾರದ ರಚನೆಗೆ ಮುಂದಾಗಿದ್ದರು. ನಾನು ಎಲ್ಲವನ್ನೂ ಬಹಿರಂಗಪಡಿಸುವುದಿಲ್ಲ. ಫಲಿತಾಂಶ ಬಂದ ದಿನ ನನ್ನ ದೂರವಾಣ ಗೆ ಬಂದ ಸಂಖ್ಯೆಗಳನ್ನು ಹೊರಗೆಡವಿದರೆ, ಎಲ್ಲವೂ ಬಹಿರಂಗಗೊಳ್ಳುತ್ತದೆ.

ಯಡಿಯೂರಪ್ಪನವರು ಭ್ರಮೆಯಲ್ಲಿದ್ದಾರೆ. ಅವರ ಬಗ್ಗೆ ದೆಹಲಿ ನಾಯಕರಿಗೆ ಅವರ ಮೇಲಿರುವ ಭಾವನೆಯನ್ನು ನನ್ನ ಬಳಿ ಬಿಡಿಸಿಟ್ಟಿದ್ದಾರೆ. ಸಮಯ ಬಂದಾಗ ಅದನ್ನೂ ಬಹಿರಂಗಪಡಿಸುತ್ತೇನೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದವರು, ಹೋರಾಟಗಾರ. ಆದರೆ ಅವರು ಬಳಸುವ ಕೆಲ ಪದಗಳು ಸದನಕ್ಕೆ ಗೌರವ ತರುವಂತದ್ದಲ್ಲ ಎಂದರು.

ನಿಮ್ಮ ಜೊತೆ ಸರ್ಕಾರ ನಡೆಸಿದ ಸಂದರ್ಭದಲ್ಲಿ ನಾನು ಯಾವುದೇ ವಚನ ಭ್ರಷ್ಟತೆ ಮಾಡಿಲ್ಲ. ಆ ಆರೋಪ ಮಾತ್ರ ಹೊರಿಸಬೇಡಿ. ರಾಜ್ಯದ ಅಭಿವೃದ್ಧಿಗೆ ನಮ್ಮ ಸಮಯ ನೀಡೋಣ. ನಾನು ಯಾವುದೇ ಜಾತಿ ರಾಜಕೀಯ ಮಾಡುವುದಿಲ್ಲ. ಇದಕ್ಕೆಲ್ಲ ಮಾಧ್ಯಮದವರ ಸಹಕಾರವೂ ಬೇಕು.

ಬಿಎಸ್‍ವೈ ಅವರ ಭಾವನೆಗಳೇನಿವೆಯೋ ಅವುಗಳನ್ನೂ ಈಡೇರಿಸುವ ಪ್ರಯತ್ನ ಮಾಡುತ್ತೇನೆ. ಸಾಲವನ್ನು ಮಾಡದೇ ರಾಜ್ಯದ ಜನರಿಗೆ ಜನಪರ ಕಾರ್ಯಕ್ರಮಗಳನ್ನು ನೀಡುತ್ತೇನೆ, ಅನುಭವದ ಕೊರತೆ ನಡುವೆಯೂ ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ.

ಬಿಜೆಪಿಯ ಹಲವು ಆಮಿಷಗಳನ್ನು ಮೀರಿ ನನ್ನ ಬೆಂಬಲಕ್ಕೆ ನಿಂತ ಜೆಡಿಎಸ್ – ಕಾಂಗ್ರೆಸ್ ಶಾಸಕರಿಗೆ ಅಭಿನಂದನೆ ಸಲ್ಲಿಸಿದ ಕುಮಾರಸ್ವಾಮಿ, ಇದೇ ವೇಳೆ ಅವರು, ಸುಪ್ರೀಂಕೋರ್ಟ್ ತೀರ್ಪನ್ನು ಶ್ಲಾಘಿಸಿದರು.