ದೇವರಪುರದಲ್ಲಿ ಕಾಡಾನೆಗಳ ಉಪಟಳ; ಸೋಲಾರ್ ಬೇಲಿ ಧ್ವಂಸ

ಗೋಣಿಕೊಪ್ಪಲು: ದೇವರಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆಗಳ ಉಪಟಳದಿಂದಾಗಿ ರೈತರ ಕಾಫಿ ಬೆಳೆಗಾರರ ತೋಟಕ್ಕೆ ಅಳವಡಿಸಿರುವ ಸೋಲರ್ ಬೇಲಿಯನ್ನು ಕಾಡಾನೆಗಳು ಧ್ವಂಸ ಮಾಡುತ್ತಿದ್ದು, ಲಕ್ಷಾಂತರ ರೂಪಾಯಿ ನಷ್ಟಗೊಂಡಿದೆ. ಕಾಡಾನೆಯ ಭಯದಿಂದ, ಭಾರೀ ಮಳೆಯಲ್ಲಿ ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಕಳೆದ ಹಲವು ದಿನಗಳಿಂದ ಸಮೀಪದ ದೇವರ ಕಾಡುವಿನಲ್ಲಿ ಬೀಡು ಬಿಟ್ಟಿರುವ ಕಾಡಾನೆಯ ಹಿಂಡು ಸಂಜೆ ಆಗುತ್ತಿದ್ದಂತೆಯೇ ಸಮೀಪದ ಮನೆಯಪಂಡ, ಕಡೇಮಾಡ, ಕಂಜಿತಂಡ, ಕಳ್ಳಿಚಂಡ ಕುಟುಂಬಸ್ಥರ ಕಾಫಿ ತೋಟಕ್ಕೆ ಲಗ್ಗೆ ಇಡುವ ಈ ಕಾಡಾನೆ ಹಿಂಡು ತೋಟದಲ್ಲಿರುವ ಸೋಲಾರ್ ಬೇಲಿಯ ಮೇಲೆ ಮರಗಳನ್ನು ಬೀಳಿಸುವ ಮೂಲಕ ಬೇರೆ ಬೇರೆ ತೋಟಕ್ಕೆ ತಿರುಗಾಡುತ್ತಿವೆ. ತೋಟದ ಕಾಫಿ ಗಿಡಗಳು, ತೆಂಗಿನ ಗಿಡಗಳನ್ನು ನಷ್ಟಪಡಿಸಿವೆ. ಮುಂಜಾನೆ ಸಮೀಪದ ದೇವರ ಕಾಡಿಗೆ ತೆರಳಿ ವಾಸ್ತವ್ಯ ಮಾಡುತ್ತಿವೆ.

ಈಗಾಗಲೇ ಹಲವು ಬಾರಿ ಅರಣ್ಯ ಅಧಿಕಾರಿಗಳಿಗೆ ಈ ಭಾಗದ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ವೆಂದು ಗೋಣಿಕೊಪ್ಪ ಛೇಂಬರ್ಸ್ ಆಫ್ ಕಾಮರ್ಸ್‍ನ ಅಧ್ಯಕ್ಷ ಗ್ರಾಮದ ನಿವಾಸಿ ಕಡೇಮಾಡ ಸುನೀಲ್ ಮಾದಪ್ಪ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.