ಮೊಹಾಲಿ ಠಾಕೂರ್, ಹನುಮಂತನ ಹಾಡಿಗೆ ಕುಣಿದು ಕುಪ್ಪಳಿಸಿದ ಯುವ ಸಮೂಹ

ಮೈಸೂರು: ನಟಿ, ಗಾಯಕಿ ಮೊಹಾಲಿ ಠಾಕೂರ್ ಸುಮಧುರ ಗಾಯನದ ಮೂಲಕ ಯುವ ದಸರಾದಲ್ಲಿ ನೆರೆದಿದ್ದ ಪ್ರೇಕ್ಷಕರ ಮನರಂಜಿಸಿದರು. `ದಸರಾ ಹಬ್ಬದ ಶುಭಾಶಯಗಳು. ನಮಸ್ಕಾರ ಮೈಸೂರು’ ಎಂದು ಕನ್ನಡದಲ್ಲಿ ಹೇಳುವ ಮೂಲಕ ಪ್ರೇಕ್ಷಕರ ಮನಸ್ಸು ತಟ್ಟಿದ ಮೊಹಾಲಿ, ತಮಗೆ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟ `ದಮ್ ಲಗಾ ಕೆ ಹೈಶಾ’ ಚಿತ್ರದ `ಮೋಹ್ ಮೋಹ್‍ಕೆ ಧಾಗೆ…’ `ರೇಸ್ ಹೈ ಸಾಸೋಂ ಕಿ…’, `ಸವಾರ್ ಲೂನ್…’, `ಖ್ವಾಬ್ ದೇಖೆ ಝೂಟೆ ಮೋಟೆ…’, `ದಮಾ ಧಂ ಮಸ್ತ್ ಖಲಂದರ್…’, `ತುಜುಕೋ ಜೋ ಪಾಯಾ…’, `ಛಮ್ ಛಮ್ ಛಮ್…’, `ಲಂಡನ್ ತುಮಕ್‍ದಾ…’ ಹೀಗೆ ಹತ್ತಾರು ಜನಪ್ರಿಯ ಗೀತೆಗಳ ಮೂಲಕ ಮನಸೂರೆಗೊಂಡರು. ಮೊಹಾಲಿಯ ಮೋಹಕ ಗಾಯನದ ಮೋಡಿಯಲ್ಲಿ ಮಿಂದೆದ್ದ ಪ್ರೇಕ್ಷಕರು, ಶಿಳ್ಳೆ, ಕೇಕೆ ಮೂಲಕ ಸಂತಸ ಅಭಿವ್ಯಕ್ತಗೊಳಿಸಿದರು. ಕಾರ್ಯಕ್ರಮ ಆರಂಭದಲ್ಲಿ ಖಾಲಿಯಾಗಿದ್ದ ಆಸನಗಳು ಮೊಹಾಲಿ ಆಗಮನದ ವೇಳೆಗೆ ಬಹುತೇಕ ಭರ್ತಿಯಾಗಿದ್ದವು. ಯುವ ಜನತೆ ಬೃಹತ್ ಪರದೆಯ ಬಳಿಯೂ ನಿಂತು, ಮೊಹಾಲಿ ಹಾಡಿಗೆ ಕುಣಿದು ಕುಪ್ಪಳಿಸಿದರು.

ಹನುಮಂತನ ಹಾಡು: ಕಿರುತೆರೆ ಸಂಗೀತ ಕಾರ್ಯಕ್ರಮವೊಂದರ ಮೂಲಕ ಕನ್ನಡಿಗರ ಮನಸ್ಸು ತುಂಬಿರುವ ಕುರಿಗಾಹಿ ಹನುಮಂತ, `ಕೇಳ ಜಾಣ ಶಿವ ಧ್ಯಾನ ಮಾಡಣ್ಣ, ನಿನ್ನೊಳಗ ನೀನು ಇಳಿದು ನೋಡಣ್ಣ…’ ಜಾನಪದ ಹಾಡಿನ ಮೂಲಕ ಗಮನ ಸೆಳೆದರಲ್ಲದೆ, ಉದಯೋನ್ಮುಖ ಪ್ರತಿಭೆ ಅಮೂಲ್ಯ ಜೊತೆಯಲ್ಲಿ `ಚುಟು ಚುಟು ಅಂತೈತಿ ನನಗಾ…’ ಎಂದು ಹಾಡಿ, ನೆರೆದಿದ್ದವರ ಕುಣಿಸಿದರು. ಬೆಂಗಳೂರಿನ ಸ್ಟಾರ್ ಸಿಂಗರ್ಸ್ ಹಾಗೂ ಮೈಸೂರಿನ ಮೆಲೋಡಿಯಸ್ ಟ್ರೂಪ್ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮದಲ್ಲಿ ಗಾಯಕ ಅನಿಲ್ ಕುಮಾರ್- `ನೋಡೋ ಕತ್ತು ಎತ್ತಿ… ಬಂದ ಚಕ್ರವರ್ತಿ…’ ಸೇರಿದಂತೆ ಹಲವು ಗೀತೆಗಳನ್ನು ಪ್ರಸ್ತುತಪಡಿಸಿದರು.

ಸಾಂಗ್ಸ್ ಮಿಕ್ಸಿಂಗ್: ಗಾಯಕಿ ಕೀರ್ತನಾ ವಿಜಯ್‍ಕುಮಾರ್ `ಸುತ್ತಮುತ್ತಲೂ ಸಂಜೆಗತ್ತಲು…’, `ದೂರದಿಂದ ಬಂದಂತ ಸುಂದರಾಂಗ ಜಾಣ…’, `ಜೋಕೆ ನಾನು ಬಳ್ಳಿಯ ಮಿಂಚು…’, `ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ…’, `ಹೇ ಮಲ್ನಾಡ್ ಅಡಿಕೆ ಮೈಸೂರ್ ವೀಳ್ಯೆದೆಲೆ ಬೆರೆತರೆ ಕೆಂಪು…’, `ತರಿಕೆರೆ ಏರಿ ಮೇಲೆ ಮೂರು ಕರಿ ಕುರಿ ಮರಿ ಮೇಯ್ತಿತ್ತು…’ ಹೀಗೆ ಹಲವು ಗೀತೆಗಳ ತುಣುಕನ್ನು ಸುಶ್ರಾವ್ಯವಾಗಿ ಹಾಡಿ, ರಂಜಿಸಿದರು. ಈ ವೇಳೆ ಹಾಡಿಗೆ ತಕ್ಕಂತೆ ಕಲಾವಿದರು ಆಕರ್ಷಕ ನೃತ್ಯ ಪ್ರದರ್ಶಿಸಿದರು. ಡಾ.ಅನೂಪ್ ದಯಾನಂದ್ ಸಾಗರ್, `ಕೋಹಿ ಮಿಲ್‍ಗಯಾ, ಮೇರ ದಿಲ್‍ಗಯಾ…’ ಎಂದು ಹಾಡಿ, ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.

ಯೋಗದ ಖುಷಿ: ಮೈಸೂರಿನ ಹೆಮ್ಮೆಯ ಯೋಗಪಟು, 10 ಚಿನ್ನ, 4 ಬೆಳ್ಳಿ, 2 ಕಂಚು ಪದಕಗಳಲ್ಲದೆ, ದೇಶದ ವಿವಿಧ ಸಂಸ್ಥೆಗಳ ಪ್ರಶಸ್ತಿಗೆ ಬಾಜನರಾಗಿರುವ ಖುಷಿ, ಯುವದಸರಾ ವೇದಿಕೆಯಲ್ಲಿ ಯೋಗ ಪ್ರದರ್ಶಿಸಿ, ಎಲ್ಲರನ್ನೂ ನಿಬ್ಬೆರಗಾಗಿಸಿದರು. ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ, ಕೇಕೆ ಹಾಕಿ ಖುಷಿಯ ಪ್ರತಿಭೆಯನ್ನು ಅಭಿನಂದಿಸಿದರು.

ಒಡೆಯರ ಸ್ಮರಣೆ: ವಾಣಿವಿಲಾಸ ಅರಸು ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು ರಾಜಪರಂಪರೆಯನ್ನು ನೃತ್ಯದ ಮೂಲಕ ಸ್ಮರಿಸಿದರು. ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜ ಒಡೆಯರ್, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಭಾವಚಿತ್ರ, ಅರಮನೆ ಹಾಗೂ ಆನೆಗಳ ಚಿತ್ರಗಳ ಮೂಲಕ ವೇದಿಕೆಯಲ್ಲಿ ರಾಜಪರಂಪರೆ ಕಟ್ಟಿದ ವಿದ್ಯಾರ್ಥಿನಿಯರು, `ಒಂದಾ ನೊಂದು ಊರಲಿ ಒಬ್ಬ ರಾಜನಿದ್ದನು…’, `ಮರೆಯೋದುಂಟೆ ಮೈಸೂರ ದೊರೆಯ…’, `ದಸರಾ ದಸರಾ ಬಂತಮ್ಮ…’, `ಮೈಸೂರು ದಸರಾ ಎಷ್ಟೊಂಷು ಸುಂದರ…’ ಗೀತೆಗಳಿಗೆ ನರ್ತಿಸಿ, ಚಾಮುಂಡೇಶ್ವರಿ ಸ್ಮರಣೆಯೊಂದಿಗೆ ದಸರಾ ವೈಭವ ಸಾರಿದರು. ಹುಣಸೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪಾಂಡವಪುರದ ಮಹಾರಾಜ ಇನ್ಸಿಟ್ಯಿಟ್ಯೂಟ್ ಆಫ್ ಟೆಕ್ನಾಲಜಿ, ಎಸ್‍ಡಿಎಂಎಸ್ ಕಾಲೇಜು, ಎಸ್‍ಎಲ್‍ಡಿ ಡ್ಯಾನ್ಸ್ ಸ್ಕೂಲ್, ಐಫೀಲ್ಡ್ ಡ್ಯಾನ್ಸ್ ಕಂಪನಿ, ಫೀನಿಕ್ಸ್, ಟೀಂ ಗ್ಯಾಲಕ್ಸಿ ತಂಡದ ಕಲಾವಿದರು ಅತ್ಯಾಕರ್ಷಕ ನೃತ್ಯ ಪ್ರದರ್ಶಿಸಿದರು.

ಜಗ್ಗೇಶ್ ದಂಪತಿಯ ಕಿವಿಮಾತು ಜೊತೆಗೆ ಹಾಸ್ಯ, ಹಾಡಿನ ರಂಜನೆ

ಯುವ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾದ ಹಿರಿಯ ನಟ ಜಗ್ಗೇಶ್ ಹಾಗೂ ಪರಿಮಳಾ ಜಗ್ಗೇಶ್ ದಂಪತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಗ್ಗೇಶ್, ರೈತರಂತೆ ಯುವಕರೂ ನಮ್ಮ ದೇಶದ ಬೆನ್ನೆಲುಬು. ನೀವು ಏನೇ ಕಲಿತರೂ ನಿಮ್ಮ ಮುಂದೆ ಗುರಿ ಇರಲಿ. ಜೀವನದ ಕ್ರಿಯಾಯೋಜನೆ ಸಿದ್ಧಪಡಿಸಿಕೊಳ್ಳಿ. ಜನ್ಮದಾತರಾದ ತಂದೆ-ತಾಯಿಯ ಆಸೆ, ಕನಸ್ಸನ್ನು ಈಡೇರಿಸಿದವರು ಮಾತ್ರ ಅಜರಾಮರರಾಗುತ್ತಾರೆ. ತನ್ನ ಕುಟುಂಬಕ್ಕೋಸ್ಕರ ತಂದೆ ನಿರಂತರವಾಗಿ ಶ್ರಮಿಸುತ್ತಾನೆ. ಅಪ್ಪ-ಅಮ್ಮ, ಬಂಧು ಬಳಗದ ಬಾಂಧವ್ಯವನ್ನು ದೂರವಿಟ್ಟು, ಸಾಮಾಜಿಕ ಜಾಲತಾಣಕ್ಕೆ ಬಲಿಯಾಗಬೇಡಿ. ಯಾರದೋ ಲೈಕ್, ಕಾಮೆಂಟ್‍ಗಾಗಿ ನಿಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಹಾಳು ಮಾಡಿಕೊಳ್ಳಬೇಡಿ. ಬಾಂಧವ್ಯ, ದೇಶ, ಭಾಷೆಯನ್ನು ಪ್ರೀತಿಸಿ. ಎಂತಹಾ ಸಂದರ್ಭದಲ್ಲೂ ಬಿಟ್ಟು ಹೋಗದವರನ್ನು ಪ್ರೀತಿಸಿ. ಆಕರ್ಷಣೆಗೆ ಒಳಗಾಗಬೇಡಿ. ಅಸೂಹೆ, ದ್ವೇóಷದಿಂದ ದೂರವಿದ್ದು, ಧರ್ಮ, ಭಾಷೆ, ಜಾತಿ ಯಾವುದೇ ಬೇಧತೆ ತಿಳಿಯದ ಮಕ್ಕಳಂತೆ ಬದುಕಿ. ಜಾತಿ ಕೇಳಿ ಸ್ನೇಹ ಮಾಡುವ ಕಾಲದಲ್ಲಿ ಆದರ್ಶರಾಗಿ ಬಾಳಿ ಎಂದು ಹಾಸ್ಯಭರಿತ ಮಾತುಗಳಿಂದಲೇ ಯುವ ಜನತೆಗೆ ಕಿವಿ ಮಾತು ಹೇಳಿದರು. `ಜನುಮ ನೀಡುತ್ತಾಳೆ ನಮ್ಮ ತಾಯಿ…’, `ಬಾರೆ ಬಾರೆ ಚಂದದ ಚೆಲುವಿನ ತಾರೆ…’ ಹಾಗೂ `ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ…’ ಗೀತೆಗಳನ್ನು ಹಾಡಿ, ಪ್ರೇಕ್ಷಕರಿಗೆ ನಮಿಸಿದರು. ಪರಿಮಳಾ ಜಗ್ಗೇಶ್ ಮಾತನಾಡಿ, ನಾವು ಪ್ರೀತಿಸಿ, ವಿವಾಹವಾದ ಬಳಿಕ ಮೈಸೂರಿಗೆ ಬಂದು ತಾಯಿ ಚಾಮುಂಡೇಶ್ವರಿ ಬಳಿ ನಿಂತು ಯಾರೊಂದಿಗೂ ಹೇಳಿಕೊಳ್ಳಲಾಗದ ಮನಸ್ಸಿನ ಮಾತುಗಳನ್ನು ಹೇಳಿಕೊಳ್ಳುತ್ತಿದ್ದೆ. ತಾಯಿಯ ಮೂಲಮಂತ್ರ ಸದಾ ನನ್ನ ಕೈಯಲ್ಲಿರುತ್ತದೆ. ಪ್ರೀತಿಸುವುದು ಸುಲಭ. ಆದರೆ ನಂತರದ ವಿವಾಹವಾಗುವಾಗ, ಜವಾಬ್ದಾರಿ ನಿರ್ವಹಿಸುವಾಗ ಮನುಷ್ಯರ ನಿಜರೂಪ ತಿಳಿಯುತ್ತದೆ. ಯುವಜನತೆ ಎಚ್ಚರಿಕೆಯಿಂದರಬೇಕು. ದೇಶದ ಭವಿಷ್ಯ ನಿಮ್ಮ ಕೈಲಿದೆ ಎಂದು ಹೇಳಿದರು.