ಬಂಡೀಪುರದಲ್ಲಿ ಮುಂದುವರೆದ ಅಗ್ನಿ ರುದ್ರ ನರ್ತನ

  • ವಾಯುಪಡೆ ಹೆಲಿಕಾಪ್ಟರ್‍ಗಳ ನೆರವು
  • ಸಾವಿರಾರು ಸ್ವಯಂ ಸೇವಕರ ನೆರವಿನೊಂದಿಗೆ ಅರಣ್ಯ ಸಿಬ್ಬಂದಿ ಸೆಣಸಾಟ

ಬಂಡೀಪುರ: ಬಂಡೀಪುರ ಅಭಯಾರಣ್ಯದಲ್ಲಿ ಕಳೆದ ಐದು ದಿನಗಳಿಂದ ಸಾವಿರಾರು ಎಕರೆ ಕಾಡನ್ನು ಸರ್ವನಾಶ ಮಾಡಿದ ಅಗ್ನಿಯ ರುದ್ರನರ್ತನ ಇಂದು ಕೂಡ ಮುಂದು ವರೆದಿದೆ. ಅರಣ್ಯ ಸಿಬ್ಬಂದಿಯೊಂದಿಗೆ ಸಾವಿರಾರು ಸ್ವಯಂ ಸೇವಾ ಕಾರ್ಯಕರ್ತರು ಬೆಂಕಿ ನಂದಿಸಲು ಸೆಣಸಾಡುತ್ತಿದ್ದು, ವಾಯುಪಡೆಯ ಎರಡು ಹೆಲಿಕಾಪ್ಟರ್‍ಗಳು ಸಹ ನೆರವಿಗೆ ಧಾವಿಸಿವೆ.

ಹೆಲಿಕಾಪ್ಟರ್‍ಗಳ ಮೂಲಕ ನಡೆಸಿದ ರಕ್ಷಣಾ ಕಾರ್ಯಾಚರಣೆಯಿಂದ ಸ್ವಲ್ಪ ಮಟ್ಟಿಗೆ ಬೆಂಕಿ ನಂದಿಸಲು ಸಾಧ್ಯವಾಯಿ ತಾದರೂ, ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಕೈಗೊಳ್ಳಲು ಸಾಧ್ಯವಾಗದ ಕಾರಣ ರಾತ್ರಿ ವೇಳೆಗೆ ಅಗ್ನಿಯ ರುದ್ರನರ್ತನ ಮತ್ತಷ್ಟು ಮುಂದುವರೆಯಬಹುದು ಎಂಬ ಆತಂಕ ಸೃಷ್ಟಿಯಾಗಿದೆ.

ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಇಂದು ಬೆಳಿಗ್ಗೆ ಬೆಂಗಳೂರಿನ ಯಲಹಂಕ ದಲ್ಲಿರುವ ವಾಯುನೆಲೆಯಿಂದ ಎರಡು ಹೆಲಿಕಾಪ್ಟರ್‍ಗಳು ಬಂಡೀಪುರ ಪ್ರದೇಶಕ್ಕೆ ಬಂದವು. ವಾಯುಪಡೆ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ನಂತರ ಹೊತ್ತಿ ಉರಿಯು ತ್ತಿರುವ ಅರಣ್ಯದ ಮೇಲೆ ಹೆಲಿಕಾಪ್ಟರ್ ಗಳಲ್ಲಿ ಸಂಚರಿಸಿ, ಬೆಂಕಿ ಧಗಧಗಿಸುತ್ತಿರುವ ಪ್ರದೇಶ ಹಾಗೂ ಅದಕ್ಕೆ ಹತ್ತಿರವಿರುವ ನೀರಿನ ಸೆಲೆಗಳ ವೀಕ್ಷಣೆ ಮಾಡಿದರು. ಆ ನಂತರ ಮತ್ತೆ ಎರಡನೇ ಬಾರಿಗೆ ಅರಣ್ಯಾ ಧಿಕಾರಿಗಳ ಜೊತೆ ಚರ್ಚೆ ನಡೆಸಿದ ನಂತರ ಬೆಂಕಿ ನಂದಿಸುವ ಕಾರ್ಯಾಚರಣೆಗೆ ನೀಲನಕ್ಷೆ ಸಿದ್ದಪಡಿಸಿಕೊಂಡರು. ಬೆಂಕಿ ಕೆನ್ನಾಲಿಗೆ ಚಾಚಿರುವ ಪ್ರದೇಶಕ್ಕೆ ಅತೀ ಸಮೀಪದಲ್ಲಿರುವ ನುಗು ಜಲಾಶಯದಿಂದ ನೀರನ್ನು ಎತ್ತಲು ನಿರ್ಧರಿಸಲಾಯಿತು.

ಜಲಾಶಯದಿಂದ ನೀರನ್ನು ಎತ್ತಲು ಬಳಸುವ ವಾಟರ್‍ಬ್ಯಾಗ್ (ಜಾಕ್ಸೆ)ನೊಂದಿಗೆ ಕಾರ್ಯಾಚರಣೆಗಿಳಿದ ಹೆಲಿಕಾಪ್ಟರ್‍ಗಳು ಸುಮಾರು 40 ಅಡಿ ಎತ್ತರದಿಂದ ವಾಟರ್ ಬ್ಯಾಗ್‍ನ್ನು ಜಲಾಶಯಕ್ಕೆ ಇಳಿಬಿಟ್ಟೊಡನೆ ನೀರನ್ನು ಸೆಳೆಯಲು ಅಳವಡಿಸಲಾಗಿದ್ದ ಮೋಟರನ್ನು ಹೆಲಿಕಾಪ್ಟರ್‍ನಿಂದಲೇ ಆಪರೇಟ್ ಮಾಡಲಾಯಿತು. ಒಂದು ಬಾರಿಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಲೀಟರ್ ನೀರನ್ನು ಜಲಾಶಯದಿಂದ ತುಂಬಿಕೊಂಡ ವಾಟರ್‍ಬ್ಯಾಗ್ ಸಮೇತ ಕೇವಲ 7 ನಿಮಿಷದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವ ಅರಣ್ಯ ಪ್ರದೇಶಕ್ಕೆ ತೆರಳಿದ ಹೆಲಿಕಾಪ್ಟರ್‍ಗಳು ನೀರನ್ನು ಸುರಿದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆ ಸಿದವು. ಇಂದು ಎರಡೂ ಹೆಲಿಕಾಪ್ಟರ್‍ಗಳು ತಲಾ 9 ಬಾರಿ ಆಗಸದಿಂದ ಅಗ್ನಿಗೆ ನೀರು ಸುರಿಯುವ ಮೂಲಕ ಬೆಂಕಿಯನ್ನು ಸ್ವಲ್ಪ ಮಟ್ಟಿಗೆ ಹತೋಟಿಗೆ ತಂದವು. ಈ ಹೆಲಿಕಾಪ್ಟರ್‍ಗಳ ಕಾರ್ಯಾಚರಣೆಯಿಂದಾಗಿ ಬಂಡೀಪುರದ ಮೂಲೆಹೊಳೆ ವಲಯದಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿ ಸಂಪೂರ್ಣವಾಗಿ ಶಮನಗೊಂಡಿತು. ಆದರೆ, ಚಮ್ಮನಹಳ್ಳದಲ್ಲಿ ಅಗ್ನಿನರ್ತನವನ್ನು ಹತೋಟಿಗೆ ತರುವಷ್ಟರಲ್ಲಿ ಕತ್ತಲು ಆವರಿಸಿದ ಕಾರಣ ಹೆಲಿಕಾಪ್ಟರ್ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಚಮ್ಮನಹಳ್ಳದಲ್ಲಿ ರುದ್ರನರ್ತನ ಮಾಡುತ್ತಿರುವ ಅಗ್ನಿಯ ಜ್ವಾಲೆಯು ಗಾಳಿಯಿಂದಾಗಿ ಮತ್ತಷ್ಟು ಹರಡುವ ಆತಂಕವೂ ಎದುರಾಗಿದೆ.

ಮಂಗಳವಾರವೂ ಹೆಲಿಕಾಪ್ಟರ್‍ಗಳ ಕಾರ್ಯಾಚರಣೆ ಮುಂದುವರೆಯಲಿದೆ. ಅದೇ ವೇಳೆ ಕಾರ್ಯಾಚರಣೆಗೆ ಇನ್ನೂ ಎರಡು ಹೆಲಿಕಾಪ್ಟರ್‍ಗಳನ್ನು ನೀಡಿ ಸಹಕರಿಸ ಬೇಕೆಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಈ ಮನವಿ ಪುರಸ್ಕøತವಾದರೆ ಈಗ ಕಾರ್ಯಾಚರಣೆ ನಡೆಸುತ್ತಿರುವ ಹೆಲಿಕಾಪ್ಟರ್‍ಗಳ ಜೊತೆ ಮತ್ತೆರಡು ಹೆಲಿಕಾಪ್ಟರ್‍ಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ.

ಜನವರಿ 21 ರಂದು ಬಂಡೀಪುರದ ಕುಂದಕೆರೆ ವಲಯದಲ್ಲಿ ಕಾಣಿಸಿಕೊಂಡ ಬೆಂಕಿ ಮೊದಲ ದಿನ ಸುಮಾರು 600 ಎಕರೆಗೂ ಹೆಚ್ಚು ಅರಣ್ಯವನ್ನು ಆಹುತಿಪಡೆದಿತ್ತು. ಮರುದಿನವೂ ಮುಂದುವರೆದ ಬೆಂಕಿಯ ಕೆನ್ನಾಲಿಗೆಗೆ ಸಾವಿರಾರು ಎಕರೆ ಅರಣ್ಯ ಆಹುತಿಯಾಯಿತು. ಇದನ್ನು ಹತೋಟಿಗೆ ತರಲು ಅರಣ್ಯ ಇಲಾಖೆ ಸೆಣಸಾಡುತ್ತಿದ್ದ ವೇಳೆಯಲ್ಲೇ ಹಿಮವದ್ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಕಾಣಿಸಿಕೊಂಡ ಬೆಂಕಿ ಶರವೇಗದಲ್ಲಿ ಹರಡಿ ಬೆಟ್ಟದ ಆಸುಪಾಸಿನ ಗುಡ್ಡಗಳನ್ನು ಸುಟ್ಟು ಸರ್ವನಾಶ ಮಾಡಿತು. ಕಳೆದ ಎರಡು ದಿನಗಳ ಕಾಲ ಹಗಲು ರಾತ್ರಿ ಎನ್ನದೇ, ಅಗ್ನಿ ರುದ್ರನರ್ತನ ನಡೆಸಿದ್ದು, ಗೋಪಾಲಸ್ವಾಮಿ ಬೆಟ್ಟದ ಬಹುಪಾಲು ಅರಣ್ಯವನ್ನು ಆಹುತಿ ಪಡೆದಿದೆ. ಈ ಬೆಂಕಿಯೂ ಮೂಲೆಹೊಳೆ ವಲಯದ ಆರಣ್ಯಕ್ಕೂ ವ್ಯಾಪಿಸಿತ್ತು. ನೆಲಮಟ್ಟದಿಂದ 30 ರಿಂದ 40 ಅಡಿ ಎತ್ತರಕ್ಕೆ ಚಿಮ್ಮುತ್ತಿದ್ದ ಬೆಂಕಿಯ ಕೆನ್ನಾಲಿಗೆಯನ್ನು ನಂದಿಸಲು ಸಾಧ್ಯವಾಗದೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸಾವಿರಾರು ಸ್ವಯಂ ಸೇವಕರು ಹೆಣಗಾಡುತ್ತಿದ್ದರು. ಪರಿಸ್ಥಿತಿಯ ತೀವ್ರತೆಯನ್ನು ಅರಿತ ರಾಜ್ಯ ಸರ್ಕಾರ ಬೆಂಕಿ ನಂದಿಸಲು ಹೆಲಿಕಾಪ್ಟರ್‍ಗಳ ನೆರವು ನೀಡಬೇಕೆಂದು ಭಾನುವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಮನವಿಯನ್ನು ಪುರಸ್ಕರಿಸಿದ ಕೇಂದ್ರ ಸರ್ಕಾರವು ಇಂದು ಬೆಳಿಗ್ಗೆಯೇ ವಾಯುಪಡೆ ಹೆಲಿಕಾಪ್ಟರ್‍ಗಳನ್ನು ಕಾರ್ಯಾಚರಣೆಗಿಳಿಸಿತು.

ಓರ್ವನ ವಿರುದ್ಧ ಪ್ರಕರಣ ದಾಖಲು

ಬಂಡೀಪುರ: ದುರುದ್ದೇಶದಿಂದ ಬಂಡೀಪುರ ಅರಣ್ಯಕ್ಕೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಓರ್ವ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಬಂಡೀಪುರ ರಾಷ್ಟ್ರೀಯ ಉದ್ಯಾನವನ ದಲ್ಲಿ ಬೆಂಕಿಗಾಹುತಿಯಾದ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿದ ಅವರು, ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ, ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ನಡುವಿನ ವೈಷಮ್ಯದಿಂದ ಕಾಡಿಗೆ ಬೆಂಕಿ ಬಿದ್ದಿದೆ ಎಂಬುದು ಸರಿಯಲ್ಲ. ದುರುದ್ದೇಶದಿಂದ ಅರಣ್ಯಕ್ಕೆ ಬೆಂಕಿ ಹಚ್ಚಿದ ಆರೋಪದ ಮೇಲೆ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದರು.

ಆದರೆ ಆ ವ್ಯಕ್ತಿ ಯಾರು ಎಂಬುದನ್ನು ಹೇಳಲು ನಿರಾಕರಿಸಿದರು.
ಈಗಾಗಲೇ ಕಳ್ಳಿಪುರದ ಅರುಳ್‍ಕುಮಾರ್ ಎಂಬಾತನನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಆತನ ಮೇಲೆಯೇ ಪ್ರಕರಣ ದಾಖಲಾ ಗಿದೆಯೇ? ಎಂಬುದು ಖಚಿತಪಟ್ಟಿಲ್ಲ. ಕಳೆದ ನಾಲ್ಕೈದು ದಿನಗಳಿಂದ ಬೆಂಕಿ ನಂದಿಸಲು ತೀವ್ರ ಪ್ರಯತ್ನ ನಡೆಸಲಾಯಿತಾದರೂ ಸಂಪೂರ್ಣವಾಗಿ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ವಾಹನಗಳು ಸಂಚರಿಸಲು ಸಾಧ್ಯವಾಗದ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಮೂಲಕ ನೀರು ಸಿಂಪಡಿಸಿ ಬೆಂಕಿ ನಂದಿಸಲು ಕ್ರಮ ಕೈಗೊಳ್ಳಲಾಗಿದೆ. ಮಾನವ ಪ್ರಯತ್ನ ಕಷ್ಟಕರವಾದ ಹಿನ್ನೆಲೆಯಲ್ಲಿ ಇದೇ ಪ್ರಥಮ ಬಾರಿಗೆ ಹೆಲಿಕಾಪ್ಟರ್ ಬಳಸಿ ಕಾಡಿನ ಬೆಂಕಿ ನಂದಿಸುವ ಪ್ರಯತ್ನ ನಡೆದಿದೆ. ಅಗತ್ಯ ಬಿದ್ದರೆ ಇನ್ನೂ ಎರಡು ಹೆಲಿಕಾಪ್ಟರ್‍ಗಳನ್ನು ಬಳಸಲು ಚಿಂತನೆ ನಡೆಸಲಾಗಿದೆ ಎಂದರು.

ಇಂತಹ ಅಗ್ನಿ ದುರಂತ ನಡೆದಾಗ ಬಳಸಿಕೊಳ್ಳಲು ಅರಣ್ಯ ಇಲಾಖೆಗೆ ಹೆಲಿ ಕಾಪ್ಟರ್ ಖರೀದಿಸಲಾಗುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೆಲಿಕಾಪ್ಟರ್ ಖರೀದಿ ಮಾಡುವಷ್ಟು ಹಣ ಅರಣ್ಯ ಇಲಾಖೆಯಲ್ಲಿ ಇಲ್ಲ. ಇದರ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದರು.