ಕೊಡಗಿನ ನೆರೆ ಸಂತ್ರಸ್ತರಿಗೆ ಗೋವಾ ಉದ್ಯಮಿಯಿಂದ 100 ಮನೆ ನಿರ್ಮಾಣ

ಮಡಿಕೇರಿ: ಕಳೆದ ಆಗಸ್ಟ್ ನಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದು ಕೊಂಡ ಕುಟುಂಬಗಳಿಗೆ 100 ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಕೊಡಲು ಗೋವಾದ ಟಿಟೋಸ್ ಟಿ-ಷರ್ಟ್ ಕಂಪೆನಿ ಮಾಲೀಕ ಸಂದೇಶ್ ಮಾರ್ಟೀಸ್ ಮುಂದೆ ಬಂದಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು- ಮೈಸೂರು ಸಂಸದ ಪ್ರತಾಪ್ ಸಿಂಹ, ಕೊಡಗಿನ ನೆರೆ ಸಂತ್ರಸ್ತರಿಗೆ ರಾಷ್ಟ್ರವ್ಯಾಪಿ ತಾತ್ಕಾಲಿಕ ನೆರವು ದೊರೆತಿದೆ. ನಿರ್ವ ಸತಿಕರಾದ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸುವ ಹೊಣೆಗಾರಿಕೆ ಸರಕಾರ, ಸಂಘ- ಸಂಸ್ಥೆಗಳು ಮತ್ತು ದಾನಿಗಳ ಮೇಲೆಯೂ ಇದೆ. ಹೀಗಾಗಿ ಟಿಟೋಸ್ ಟೀ-ಷರ್ಟ್ ಕಂಪೆನಿಯ ಮಾಲೀಕರಾದ ಸಂದೇಶ ಮಾರ್ಟೀಸ್ ಸ್ವಯಂ ಪ್ರೇರಿತರಾಗಿ 100 ಮನೆಗಳನ್ನು ನಿರ್ಮಿಸಿ ಕೊಡಲು ಮುಂದಾ ಗಿದ್ದಾರೆಂದು ತಿಳಿಸಿದರು.

ಪ್ರತಿ ಮನೆ 7 ಚದರ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದ್ದು, 2 ಬೆಡ್ ರೂಂ ಗಳನ್ನು ಒಳಗೊಂಡಿರುತ್ತದೆ. 7 ಎಕರೆ ಪ್ರದೇಶದಲ್ಲಿ 100 ಮನೆಗಳೊಂದಿಗೆ ಔಷಧಿ, ತರಕಾರಿ ಮಳಿಗೆ ಸೇರಿದಂತೆ ಪಾರ್ಕ್ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಮುಂದಿನ 2019ರ ಜುಲೈ ತಿಂಗಳ ಒಳಗೆ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ವಿಳಂಬ-ವಿಷಾದ: ನಿರ್ವಸತಿಕರಿಗೆ ಜಿಲ್ಲಾಡಳಿತ ಮನೆ ನಿರ್ಮಿಸಿ ಕೊಡಲು ಜಿಲ್ಲೆಯ ವಿವಿಧೆಡೆ ನಿವೇಶನಗಳನ್ನು ಗುರುತಿಸಿದೆ. ಮಾದಾಪುರ ತೋಟಗಾರಿಕೆ ಇಲಾಖೆಯ 50 ಎಕರೆ ಪ್ರದೇಶವನ್ನು ಕೂಡ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡಲು ಗುರುತಿಸಲಾಗಿದ್ದು, 50 ಎಕರೆ ಪ್ರದೇಶದ ದಾಖಲಾತಿ ಹಸ್ತಾಂತರ ಪ್ರಕ್ರಿಯೆ ಕ್ಯಾಬಿನೆಟ್ ಮಟ್ಟದಲ್ಲಿ ನಡೆಯಬೇಕಿರುವುದರಿಂದ ಸ್ವಲ್ಪ ವಿಳಂಬವಾಗಿದೆ. ಆದರೆ ನಿರಾಶ್ರಿತರಾದವರು ಹತಾಶರಾಗುವ ಅಗತ್ಯವಿಲ್ಲ. ಸರಕಾರಿ ವ್ಯವಸ್ಥೆ ಸಮರೋಪಾದಿಯಲ್ಲಿ ತನ್ನ ಕರ್ತವ್ಯ ನಿರ್ವಹಿಸಲಿದೆ ಎಂದು ಪ್ರತಾಪ್ ಸಿಂಹ ಭರವಸೆ ನೀಡಿದರು.

ಜಿಲ್ಲೆಯ ಶಾಸಕರು ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರದ ಬೇಡಿಕೆ ಇಟ್ಟಿದ್ದು, ಈ ಪ್ರಾಧಿಕಾರ ರಚನೆಯೂ ವಿಳಂಬವಾಗಿದೆ ಎಂದು ವಿಷಾದಿಸಿದರು. ಸರಕಾರದ ವಿಳಂಬ ನೀತಿಯನ್ನು ಟೀಕಿಸುತ್ತಿಲ್ಲ. ಬದಲಿಗೆ ಸಾಧ್ಯವಾದಷ್ಟು ಬೇಗ ಪರಿಹಾರ ಕಾರ್ಯಕ್ಕೆ ಸಂಬಂಧಿಸಿದಂತೆ ಯೋಜನೆಗಳನ್ನು ಅನುಷ್ಠಾನಕ್ಕೆ ತರು ವಂತೆ ಒತ್ತಡ ಹಾಕುತ್ತಿರುವುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ಕೊಡಗಿಗೆ ಸಿಂಹಪಾಲು: ಪ್ರಕೃತಿ ವಿಕೋ ಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ವಿಪತ್ತು ಪರಿಹಾರ ನಿಧಿಯ ಅಡಿಯಲ್ಲಿ ಒಟ್ಟು 546 ಕೋಟಿ ರೂ. ಅನುದಾನ ವನ್ನು ಬಿಡುಗಡೆ ಮಾಡಿದೆ. ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಜಿಲ್ಲೆಗೆ ಆಗಮಿಸಿ ಎನ್‍ಡಿಆರ್‍ಎಫ್ ತಂಡದ ಸರ್ವೇ ವರದಿಯನ್ನು ಪಡೆದಿದ್ದಾರೆ. ಮಾತ್ರ ವಲ್ಲದೇ ಜಿಲ್ಲಾಡಳಿತ ವಿವಿಧ ಇಲಾಖೆಗಳ ಮೂಲಕ ನಡೆಸಿದ ವಿಕೋಪದ ಹಾನಿಯ ವರದಿ ಸಲ್ಲಿಸಿರುವುದನ್ನು ಪರಿಶೀಲನೆ ನಡೆಸಿದ್ದಾರೆ. ಈ ಎಲ್ಲಾ ವರದಿ ಆಧರಿಸಿ ಭೂ ಕುಸಿತ ಮತ್ತು ಪ್ರವಾಹ ಸಂತ್ರಸ್ತರ ನೆರವಿಗೆಂದೇ 546 ಕೋಟಿ ರೂಪಾ ಯಿಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಕೊಡಗು ಜಿಲ್ಲೆಗೆ ಪರಿಹಾರ ಹಣದಲ್ಲಿ ಸಿಂಹಪಾಲು ದೊರೆಯಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಟಿಟೋಸ್ ಸಂಸ್ಥೆಯ ಮಾಲೀಕ ಮೂಲತಃ ಮಂಗಳೂರು ನಿವಾಸಿ ಹಾಲಿ ಗೋವಾದಲ್ಲಿ ವಾಸವಿರುವ ಸಂದೇಶ್ ಮಾರ್ಟೀಸ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ 100 ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತದೆ. ಜಿಲ್ಲಾಡಳಿತ ಒಟ್ಟು 7 ಎಕರೆ ನಿವೇಶನವನ್ನು ನೀಡಿದರೆ ಪ್ರತಿ ಮನೆಗೆ ತಲಾ 12 ಲಕ್ಷ ರೂಪಾಯಿ ವೆಚ್ಚ ಮಾಡಿ ಸುಸಜ್ಜಿತ ಮನೆ ನಿರ್ಮಿಸಿ ಕೊಡ ಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಮಾತನಾಡಿ, ಜಿಲ್ಲಾಡಳಿತ ಗುರುತಿಸಿದ ಪ್ರದೇಶಗಳನ್ನು ಸಂಸ್ಥೆಯವರಿಗೆ ತೋರಿಸಲಾಗುತ್ತದೆ. ಸಂಸ್ಥೆ ಯಾವ ಸ್ಥಳವನ್ನು ಆಯ್ಕೆ ಮಾಡುತ್ತದೆಯೋ ಅಲ್ಲಿ ಮನೆ ನಿರ್ಮಿಸಿ ಕೊಡಲು ಅವಕಾಶ ಕಲ್ಪಿಸಲಾಗುತ್ತದೆ. ಮನೆಗಳ ನಿರ್ಮಾಣವಾದ ಬಳಿಕ ನಿರ್ವಸತಿಕರಿಗೆ ಅದನ್ನು ವಿತರಿಸ ಲಾಗುತ್ತದೆ ಎಂದು ಮಾಹಿತಿ ನೀಡಿದರು.