ಈ ಬಾರಿಯ ದಸರಾ ವಸ್ತುಪ್ರದರ್ಶನ ಗುತ್ತಿಗೆಗೆ ಹಿಂದೇಟು

ಮೈಸೂರು:  ಕಳೆದ ಬಾರಿ ಸುರಿದ ಧಾರಾಕಾರ ಮಳೆಯಿಂದಾಗಿ ದಸರಾ ವಸ್ತುಪ್ರದರ್ಶನದ ಆವರಣಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿ, ಮನರಂಜನಾ ವಿಭಾಗದ ಯಂತ್ರೋಪಕರಣಗಳು ಹಾನಿಗೀಡಾಗಿ ನಷ್ಟ ಸಂಭವಿಸಿದ್ದೇ ಈ ಬಾರಿ ಟೆಂಡರ್‌ದಾರರು ಹಿಂದೆ ಸರಿಯಲು ಕಾರಣ ಎನ್ನಲಾಗಿದೆ.

ಅಲ್ಲದೆ ಪ್ರತಿ ವರ್ಷ ಶೇ.5ರಷ್ಟು ಟೆಂಡರ್ ಮೊತ್ತವನ್ನು ಹೆಚ್ಚಳ ಮಾಡುವ ನಿಯಮವಿದ್ದು, ಪ್ರವೇಶ ದರ ಹೆಚ್ಚಳ ಮಾಡದೆ ಇರುವುದನ್ನು ಮನಗಂಡು ಗುತ್ತಿಗೆದಾರರು ಟೆಂಡರ್ ನಲ್ಲಿ ಭಾಗವಹಿಸುವುದಕ್ಕೆ ಹಿಂದೇಟು ಹಾಕಿದ್ದಾರೆ ಎಂದು ಪ್ರಾಧಿಕಾರದ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಮರು ಟೆಂಡರ್ ಅವಧಿ ಸೆ.28ಕ್ಕೆ ಕೊನೆಗೊಳ್ಳಲಿದೆ. ಯಾರಾದರೂ ಅರ್ಜಿ ಸಲ್ಲಿಸಬಹುದು ಎಂಬ ನಿರೀಕ್ಷೆಯಲ್ಲಿ ದ್ದಾರೆ. ಸೆ.19ಕ್ಕೆ ಕೊನೆಗೊಂಡಿದ್ದ ಈ ಮೊದಲು ಕರೆದಿದ್ದ ಟೆಂಡರ್‌ನಲ್ಲಿ ಹಲವಾರು ಮಂದಿ ಟೆಂಡರ್ ಪಡೆಯಲು ಇಚ್ಛೆ ವ್ಯಕ್ತಪಡಿಸಿ ಪ್ರಾಧಿಕಾರದ ಷರತ್ತುಗಳು, ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ವಿಧಾನದ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಆದರೆ ಯಾರೊಬ್ಬರು ಟೆಂಡರ್‌ನಲ್ಲಿ ಪಾಲ್ಗೊಳ್ಳದೆ ಇರುವುದು ಅಧಿಕಾರಿಗಳಲ್ಲಿ ನಿರಾಸೆ ಉಂಟು ಮಾಡಿತ್ತು.

ಕಳೆದ ಬಾರಿ ದಸರಾ ವಸ್ತು ಪ್ರದರ್ಶನದ ಗುತ್ತಿಗೆ ಪಡೆದಿದ್ದ ಫನ್ ವಲ್ರ್ಡ್ ರೇಸಾರ್ಟ್ ಇಂಡಿಯಾ ಪ್ರೈ.ಲಿ ಮಾಲೀಕ ವಿನೋದ್ ಕುಮಾರ್ ಸಬರ್‍ವಾಲ್ ಈ ಸಂಬಂಧ ಮಾತನಾಡಿ, ಕಳೆದ ಬಾರಿ ಮಳೆ ನೀರು ವಸ್ತು ಪ್ರದರ್ಶನ ಆವರಣಕ್ಕೆ ನುಗ್ಗಿದ ಪರಿಣಾಮವಾಗಿ ಸುಮಾರು 20 ದಿನ ಅಮ್ಯೂಸ್‍ಮೆಂಟ್ ಪಾರ್ಕ್ ಸ್ಥಗಿತಗೊಂಡಿತ್ತು. ಅಲ್ಲದೆ ಯಂತ್ರೋಪಕರಣಗಳಿಗೆ ಅಪಾರ ಹಾನಿಯಾಗಿತ್ತು. ಜೊತೆಗೆ ಪ್ರಾಧಿಕಾರವು ಅವಧಿ ವಿಸ್ತರಿಸಲಿಲ್ಲ. ಈ ಬಾರಿ ಕಳೆದ ಬಾರಿಗಿಂತ ಟೆಂಡರ್ ಮೊತ್ತವನ್ನು 33 ಲಕ್ಷ ರೂ. ಹೆಚ್ಚಿಸಿದೆ. ಕಳೆದ ನಾಲ್ಕೈದು ವರ್ಷದಿಂದ ಪ್ರವೇಶ ಶುಲ್ಕವನ್ನು ಹೆಚ್ಚಿಸದೆ ಟೆಂಡರ್ ಮೊತ್ತವನ್ನು ಮಾತ್ರ ಹೆಚ್ಚಿಸುತ್ತಿರುವುದರಿಂದ ಗುತ್ತಿಗೆದಾರರಿಗೆ ಹೊರೆಯಾಗಿ ಪರಿ ಣಮಿಸಲಿದೆ. ಇದರಿಂದ ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಯಾರೂ ಇಚ್ಛಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

12 ದಿನ ಮಾತ್ರ: ಪ್ರಾಧಿಕಾರವು ಕರೆದಿ ರುವ ಮರುಟೆಂಡರ್ ಅನ್ನು ಸೆ.28ಕ್ಕೆ ತೆರೆಯಲಾಗುತ್ತದೆ. ಒಂದು ವೇಳೆ ಯಾರಾದರೂ ಅರ್ಜಿಸಲ್ಲಿಸಿದರೆ ದಸರಾ ಉದ್ಘಾ ಟನೆಗೆ ಕೇವಲ 12 ದಿನ ಮಾತ್ರ ಬಾಕಿ ಉಳಿದಂತಾಗುತ್ತದೆ. ತ್ವರಿತಗತಿಯಲ್ಲಿ ದಸರಾ ವಸ್ತು ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ದಸರೆಯ ಮೊದಲ ದಿನವೇ ಪೂರ್ಣ ಪ್ರಮಾಣದ ವಸ್ತುಪ್ರದರ್ಶನದ ವೀಕ್ಷಣೆ ಅಸಾಧ್ಯವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಮರು ಟೆಂಡರ್‌ನಲ್ಲಿಯೂ ಯಾರೊಬ್ಬರೂ ಅರ್ಜಿಸಲ್ಲಿಸದೆ ದೂರವುಳಿದರೆ ಪ್ರಾಧಿಕಾರದ ವತಿಯಿಂದಲೇ ವಸ್ತುಪ್ರದರ್ಶನ ನಡೆಸುವುದಕ್ಕೂ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಸೆ. 29ರಂದು ಈ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ.