ನಂಜನಗೂಡಿಗೆ ಬರುವ ವಾಹನಗಳ ಜಪ್ತಿಗೆ ಸೂಚನೆ: ಎಸ್ ಪಿ ಎಚ್ಚರಿಕೆ

  • 220 ವಾಹನ ವಶ
  • ಪಟ್ಟಣದ ಜನತೆ ಆತಂಕ ಬೇಡ*

ಮೈಸೂರು,ಮಾ.29( MTY )- ನಂಜನಗೂಡು ಪಟ್ಟಣದಲ್ಲಿ ಐದು ಮಂದಿಗೆ ನೊವೆಲ್ ಕೊರೊನಾ ಸೋಂಕು ಇರುವುದು ದೃಡಪಟ್ಟಿರುವ ಹಿನ್ನೆಲೆಯಲ್ಲಿ ಅನಗತ್ಯ ಸಂಚಾರ ನಿಷೇಧಿಸಲಾಗಿದೆ. ಈಗಾಗಲೇ 220 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಸೋಮವಾರದಿಂದ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಸ್ ಪಿ ಸಿ.ಬಿ. ರಿಷ್ಯಂತ್ ಎಚ್ಚರಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮ ಕುರಿತಂತೆ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ 1372 ನೌಕರರು ಕೆಲಸ ಮಾಡುತ್ತಿದ್ದು, ಅವರಲ್ಲಿ ಈಗಾಗಲೇ 900ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಹೋಮ್ ಕ್ವಾರಂಟೇನ್ ನಲ್ಲಿಡಲಾಗಿದೆ. ಉಳಿದವರನ್ನೂ ಇನ್ನೆರಡು ದಿನದಲ್ಲಿ ಹೋಮ್ ಕ್ವಾರಂಟೇನ್ ನಲ್ಲಿಡಲಾಗುತ್ತದೆ. ಹಲವು ಮಂದಿ ಕರೆ ಮಾಡಿ ನಮ್ಮ ಮನೆ ಪಕ್ಕದ ನಿವಾಸಿ ಜ್ಯುಬಿಲಿಯಂಟ್ ಕಾರ್ಖಾನೆ ಸಿಬ್ಬಂದಿಯಾಗಿದ್ದು, ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಕೆಲವರು ಹೋಮ್ ಕ್ವಾರಂಟೇನ್ ನಲ್ಲಿರುವ ಕಾರ್ಖಾನೆ ಸಿಬ್ಬಂದಿಗಳನ್ನು ವಸತಿ ಪ್ರದೇಶದಿಂದ ಹೊರಗೆ ಸ್ಥಳಾಂತರ ಮಾಡುವಂತೆ ಮನವಿ ಮಾಡುತ್ತಿದ್ದಾರೆ.

ಆದರೆ ಪಟ್ಟಣದ ಜನತೆ ಆತಂಕ ಪಡುವ ಅಗತ್ಯವಿಲ್ಲ. ಹೋಮ್ ಕ್ವಾರಂಟೇನ್ ನಲ್ಲಿರುವ ಕಾರ್ಖಾನೆ ಸಿಬ್ಬಂದಿಗಳನ್ನು ಪರಿಶೀಲಿಸಲು ವ್ಯವಸ್ಥೆ ಮಾಡಲಾಗಿದೆ. ಬೀಟ್ ಪೊಲೀಸರು ದಿನಕ್ಕೊಮ್ಮೆ ಕ್ವಾರಂಟೇನ್ ನಲ್ಲಿರುವವರ ಮನೆಗೆ ತೆರಳಿ ಪರಿಶೀಲಿಸಲಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ಪರಿಶೀಲಿಸುತ್ತ‍ಾರೆ. ಅಲ್ಲದೆ ಜಿಲ್ಲಾಧಿಕಾರಿ ಕಚೇರಿಯಿಂದಲೂ ಮೊಬೈಲ್ ಗೆ ಕರೆ ಮಾಡಿ ಮಾನಿಟರ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಅನಗತ್ಯ ಸಂಚಾರಕ್ಕೆ ಬ್ರೇಕ್: ನಂಜನಗೂಡು ಪಟ್ಟಣದಲ್ಲಿ ಎಲ್ಲಾ ಬಗೆಯ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ವೈರಾಣು ಹರಡದಂತೆ ನೋಡಿಕೊಳ್ಳುವ ಅನಿವಾರ್ಯತೆಯಿಂದ ವಾಹನ ಸಂಚಾರ ನಿಷೇಧಿಸಿದ್ದೇವೆ. ನಿಯಮ ಉಲ್ಲಂಘಿಸಿ ವಿನಾ ಕಾರಣ ಸುತ್ತ‍ಾಡಲು ಬಂದ 220 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಸೋಮವಾರದಿಂದ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅಗತ್ಯ ವಸ್ತುಗಳ ಸಾಗಾಣಿಕ ವಾಹನ, ತುರ್ತು ವಾಹನ ಹೊರತುಪಡಿಸಿ ಬೇರಾವ ವಾಹನ ಬಂದರೂ ಸೀಜ಼್ ಮಾಡುತ್ತೇವೆ ಎಂದು ಎಚ್ಚರಿಸಿದರು.

ಎಪಿಎಂಸಿಯಲ್ಲಿ ಚಿಲ್ಲರೆ ವ್ಯಾಪಾರವಿಲ್ಲ : ಮೈಸೂರಿನ ಬಂಡೀಪಾಳ್ಯದ ಎಪಿಎಂಸಿಯಲ್ಲಿ ಚಿಲ್ಲರೆ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಸಗಟು(ಹೋಲ್ ಸೇಲ್ ಗೆ ಮಾತ್ರ) ವ್ಯಾಪಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಚಿಲ್ಲರೆ ವ್ಯಾಪಾರವನ್ನು ಸಮೀಪದ ಅಂಗಡಿಗಳಲ್ಲೇ ಖರಿದಿಸಬೇಕು. ಬೈಕ್ ನಲ್ಲಿ ತರಕಾರಿ, ದಿನಸಿ ಖರಿದಿಗೆ ಎಪಿಎಂಸಿಗೆ ಬಂದರೆ ಕೇಸ್ ದಾಖಲಿಸುವುದಲ್ಲದೆ ವಾಹನ ವಶಕ್ಕೆ ಪಡೆಯುತ್ತೇವೆ ಎಂದರು.