ಈ ಬಾರಿ ದಸರಾ ವಸ್ತುಪ್ರದರ್ಶನದ ವಿಶೇಷ ಆಕರ್ಷಣೆ ಲ್ಯಾಂಟನ್ ಪಾರ್ಕ್

ಮೈಸೂರು:  ದಸರಾ ಹಿನ್ನೆಲೆಯಲ್ಲಿ 90 ದಿನಗಳ ಕಾಲ ನಡೆಯುವ ವಸ್ತು ಪ್ರದರ್ಶನದಲ್ಲಿ ಈ ಬಾರಿ ಚೀನಾ ಮಾದರಿಯ ಲ್ಯಾಂಟನ್ ಪಾರ್ಕ್ ಸಿದ್ಧಪಡಿಸಲಾಗುತ್ತಿದೆ. ಮೈಸೂರು ಪ್ರಾಂತ್ಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ ಕೊಡುಗೆ ಸೇರಿದಂತೆ ನಾಡಿನ ಪರಂಪರೆಯನ್ನು ತ್ರಿಡಿ ಶೋನಲ್ಲಿ ಬಿಂಬಿಸುವುದರೊಂದಿಗೆ 5 ಸಾವಿರ ಎಲ್‍ಇಡಿ ಲೈಟ್‍ಗಳುಳ್ಳ ರೋಜ್ ಗಾರ್ಡನ್ ಮುದ ನೀಡಲಿದೆ.

ಪ್ರವಾಸೋದ್ಯಮ ಇಲಾಖೆ ವತಿಯಿಂದ ಲ್ಯಾಂಟನ್ ಪಾರ್ಕ್ ನಿರ್ಮಿಸಲಾಗುತ್ತಿದ್ದು, ಮೈಸೂರಿನ ಡ್ರೀಮ್ ಪೆಟಲ್ಸ್ ಸಂಸ್ಥೆ ಲ್ಯಾಂಟನ್ ಪಾರ್ಕ್ ಸ್ಥಾಪಿಸುವ ಜವಾಬ್ದಾರಿ ಹೊತ್ತಿದೆ. ಈಗಾಗಲೇ ಚೀನಾದ ಸಂಸ್ಥೆ ಸಹಯೋಗದೊಂದಿಗೆ ಲಂಡನ್, ನೆದರ್‍ಲ್ಯಾಂಡ್ ಸೇರಿದಂತೆ ವಿವಿಧ ದೇಶಗಳಲ್ಲಿ ಎಲ್‍ಇಡಿ ಬಲ್ಬ್ ಬಳಸಿ ಲ್ಯಾಂಟನ್ ಪಾರ್ಕ್ ನಿರ್ಮಿಸಿ, ಅನುಭವ ಹೊಂದಿರುವ ಡ್ರೀಮ್ ಪೆಟಲ್ಸ್ ಸಂಸ್ಥೆಯೇ ಮೈಸೂರಿನಲ್ಲಿ ದಸರಾ ಸಂದರ್ಭ ನಾಡಿನ ಪರಂಪರೆಯನ್ನು ಎಲ್‍ಇಡಿ ಲೈಟ್ ಮೂಲಕ ಬಿಂಬಿಸಲಿದೆ.

ಚೀನಾ ಹಾಗೂ ದುಬೈನಲ್ಲಿ ಖ್ಯಾತಿ: ಲ್ಯಾಂಟನ್ ಪಾರ್ಕ್ ಚೀನಾ ಹಾಗೂ ದುಬೈ ಸೇರಿ ವಿಶ್ವದ ಅನೇಕ ದೇಶಗಳಲ್ಲಿ ಸ್ಥಾಪನೆ ಯಾಗಿದೆ. ಅದರಲ್ಲೂ ಚೀನಾದ ಹೊಸ ವರ್ಷ ಫೆಬ್ರವರಿ 15ರಂದು, ಪ್ರತಿ ವರ್ಷ ವಿನೂತನ ಥೀಮ್‍ನೊಂದಿಗೆ ಲ್ಯಾಂಟನ್ ಪಾರ್ಕ್ ನಿರ್ಮಿಸಲಾಗುತ್ತದೆ. ಅಂದು ಅಲ್ಲಿನ ಜನತೆ ಲ್ಯಾಂಟನ್ ಪಾರ್ಕ್‍ನಲ್ಲಿ ಸಂತಸ ಕಳೆಯಲಿದ್ದಾರೆ. ದುಬೈನಲ್ಲೂ ಪ್ರತಿ ವರ್ಷ ಇಂತಹ ಲ್ಯಾಂಟನ್ ಪಾರ್ಕ್ ಆರಂಭಿಸುವ ವಾಡಿಕೆಯಿದ್ದು, ಹೀಗೆ ವಿಶ್ವದ ನಾನಾ ರಾಷ್ಟ್ರ ಗಳ ಪ್ರವಾಸಿಗರ ತನ್ನತ್ತ ಸೆಳೆಯುತ್ತಿದೆ.

ಏನೇನು ಇರುತ್ತೆ: ದಸರಾ ವಸ್ತು ಪ್ರದರ್ಶನ ಆವರಣದ 15 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಪ್ರವಾಸೋದ್ಯಮ ಇಲಾಖೆ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಲ್ಯಾಂಟನ್ ಪಾರ್ಕ್‍ನಲ್ಲಿ 400 ವರ್ಷದಲ್ಲಿ ಮೈಸೂರು ನಗರದ ಪರಿವರ್ತನೆ, ವಿಜಯನಗರ ಸಾಮ್ರಾಜ್ಯ, ಮೈಸೂರು ಅರ ಸರ ಆಳ್ವಿಕೆ, ದಸರಾ ನಡೆದು ಬಂದ ಹಾದಿ ಇನ್ನಿತರ ಮಹ ತ್ತರ ವಿಷಯಗಳನ್ನು ತಿಳಿಸಲಾಗುತ್ತದೆ. ಅಲ್ಲದೆ, ಚಾಮುಂಡಿ ಬೆಟ್ಟ, ಮಹಿಷಾಸುರ ಮರ್ಧಿನಿ, ಜಂಬೂಸವಾರಿ, ಪೂಜಾ ಕುಣಿತ, ಡೊಳ್ಳು ಕುಣಿತ ಹೀಗೆ ವಿವಿಧ ಕಲಾ ಸಂಸ್ಕøತಿಯನ್ನು ತ್ರಿಡಿ ಶೋ ಅನಾವರಣ ಮಾಡಲಿದೆ. ಇದಕ್ಕಾಗಿ ಲ್ಯಾಂಟನ್ ಪಾರ್ಕ್‍ನಲ್ಲಿ 9 ಬಣ್ಣದ 9 ಅಶ್ವ ತ್ರಿಡಿ ಆಕೃತಿ ನಿಲ್ಲಿಸಲಾಗುತ್ತದೆ.

ಎಲ್‍ಇಡಿ ರೋಜ್ ಗಾರ್ಡನ್: ಮಹಿಷಾಸುರ ಮರ್ಧಿನಿ ಅವತಾರದಲ್ಲಿ ಚಾಮುಂಡೇಶ್ವರಿಯ ತ್ರಿಡಿ ಆಕೃತಿಯನ್ನು ಲ್ಯಾಂಟನ್ ಪಾರ್ಕ್‍ನಲ್ಲಿ ಅಳವಡಿಸಲಾಗುತ್ತಿದೆ. ಇದರ ಸುತ್ತಲೂ 5 ಸಾವಿರ ಎಲ್‍ಇಡಿ ಲೈಟ್‍ಗಳಿಂದ ರೋಜ್ ಗಾರ್ಡನ್ ಸಿದ್ಧಪಡಿಸಲಾಗುತ್ತದೆ.

ಪರಿಕರಗಳು ದುಬಾರಿ: ಲ್ಯಾಂಟನ್ ಪಾರ್ಕ್‍ಗೆ ಬಳಸುತ್ತಿರುವ ಪರಿಕರಗಳು ಅತ್ಯಂತ ದುಬಾರಿ. ಚೀನಾದಲ್ಲಿ ತಯಾರಾಗಿ ರುವ ಕಾಟನ್ ಸಿಲ್ಕ್ ಸೇರಿದಂತೆ ಇನ್ನಿತರ ವಸ್ತುಗಳಿಂದ ತಯಾರಿಸಲಾಗಿರುವ ಪರಿಕರಗಳನ್ನೇ ಬಳಸಲಾಗುತ್ತಿದೆ. ಹಾಗಾಗಿ ಈ ಲ್ಯಾಂಟನ್ ಪಾರ್ಕ್ ದುಬಾರಿಯೆನಿಸಿದೆ. ಆದರೆ ದಸರಾ ವಸ್ತು ಪ್ರದರ್ಶನಕ್ಕೆ ಪ್ರವೇಶ ಪಡೆಯುವ ಎಲ್ಲರೂ ಈ ಪಾರ್ಕ್‍ನ್ನು ಉಚಿತವಾಗಿ ವೀಕ್ಷಣೆ ಮಾಡಬಹುದಾಗಿದೆ.

ಎಂ.ಟಿ.ಯೋಗೇಶ್ ಕುಮಾರ್