ಬಡಾವಣೆ ಅಭಿವೃದ್ಧಿ ಹಂತದಲ್ಲೇ ನಿವೇಶನ ಮಾರಾಟಕ್ಕೆ ಅವಕಾಶ ರಿಯಲ್ ಎಸ್ಟೇಟ್ ಪ್ರೋತ್ಸಾಹಿಸಲು ಕಾನೂನನ್ನೇ ಸಡಿಲ
ಮೈಸೂರು

ಬಡಾವಣೆ ಅಭಿವೃದ್ಧಿ ಹಂತದಲ್ಲೇ ನಿವೇಶನ ಮಾರಾಟಕ್ಕೆ ಅವಕಾಶ ರಿಯಲ್ ಎಸ್ಟೇಟ್ ಪ್ರೋತ್ಸಾಹಿಸಲು ಕಾನೂನನ್ನೇ ಸಡಿಲ

May 15, 2020

ಬೆಂಗಳೂರು, ಮೇ 14- ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮತ್ತು ಆ ಕ್ಷೇತ್ರದ ಬಹುದಿನಗಳ ಬೇಡಿಕೆ ಈಡೇರಿಸಲು ಸರ್ಕಾರ ಕಾನೂನನ್ನೇ ಸಡಿಲಗೊಳಿಸಿದೆ.

ನಗರ ಯೋಜನಾ ಕಾಯ್ದೆಗೆ ತಿದ್ದುಪಡಿ ತಂದಿರುವ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದ್ದು, ಈ ಮೂಲಕ ಲೇಔಟ್‍ಗಳು ಮೂಲಸೌಕರ್ಯ ಭಾಗಶಃ ಪೂರ್ಣಗೊಳಿಸಿದರೂ ನಿವೇಶನ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಈವರೆಗೆ ಪೂರ್ಣ ಮೂಲಸೌಕರ್ಯ ಕಲ್ಪಿಸಿದ ನಂತರವಷ್ಟೇ ನಿವೇಶನ ಮಾರಾಟಕ್ಕೆ ಎನ್‍ಒಸಿ ನೀಡಲಾಗುತ್ತಿತ್ತು. ಬಡಾವಣೆ ನಿರ್ಮಾತೃಗಳು ಪೂರ್ಣ ಮೂಲಸೌಕರ್ಯ ಕಲ್ಪಿಸದೆ ನಿವೇಶನದಾರರಿಗೆ ಸತಾಯಿಸುತ್ತಿದ್ದುದರಿಂದ ಕಠಿಣ ನಿರ್ಧಾರಕ್ಕೆ ಬರಲಾಗಿತ್ತು.

ಈಗ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪ್ರೋತ್ಸಾಹ ನೀಡಲು, ಲೇಔಟ್ ಪೂರ್ಣಗೊಳ್ಳುವ ಮೊದಲೇ ಷರತ್ತುಬದ್ಧವಾಗಿ ನಿವೇಶನ ಮಾರಲು ಅವಕಾಶ ನೀಡಲಾಗುತ್ತಿದೆ. ಶೇ.40 ಮೂಲ ಸೌಕರ್ಯ ಮುಗಿಸಿದ್ದರೆ ಮೊದಲ ಹಂತದ ನಿವೇಶನಗಳನ್ನು ಮಾರಬಹುದು. ಶೇ.70 ಮೂಲಸೌಕರ್ಯ ಕಲ್ಪಿಸಿ ನಂತರದ 30ರಷ್ಟು ಹಾಗೂ ಮೂರನೇ ಹಂತದ ನಿವೇಶನ ಮಾರುವ ಮುನ್ನ ಶೇ.100 ಮೂಲಸೌಕರ್ಯ ಕಲ್ಪಿಸಿರಬೇಕಾಗುತ್ತದೆ. ಲೇಔಟ್ ಮೂಲಸೌಕರ್ಯ ಪೂರ್ಣಗೊಳ್ಳುವವರೆಗೆ ನಿವೇಶನ ಮಾರಬಾರದೆಂಬ ನಿಯಮದಿಂದ ಕಷ್ಟವಾಗುತ್ತಿದೆ, ಕೊಂಚ ರಿಯಾಯಿತಿ ನೀಡಿದರೆ ಅನುಕೂಲ ಎಂಬ ಬೇಡಿಕೆ ಇತ್ತು. ಷರತ್ತುಬದ್ಧವಾಗಿ ಅವಕಾಶ ಮಾಡಿ ಕೊಟ್ಟಿದ್ದೇವೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

Translate »