ಮೈಸೂರು

ವಿದ್ವಾಂಸ ಡಾ.ಜಿ.ಎಸ್.ಆಮೂರ ನಿಧನಕ್ಕೆ ಸುತ್ತೂರು ಶ್ರೀಗಳ ಸಂತಾಪ

September 30, 2020

ಮೈಸೂರು, ಸೆ. 29- ಕನ್ನಡದ ಖ್ಯಾತ ವಿಮರ್ಶಕ, ಹಿರಿಯ ಸಾಹಿತಿ, ಬಹುಭಾಷಾ ವಿದ್ವಾಂಸರಾದ ಡಾ.ಜಿ.ಎಸ್.ಆಮೂರ ಅವರ ಅಗಲುವಿಕೆ ನಾಡು, ನುಡಿ ಹಾಗೂ ಸಾಂಸ್ಕøತಿಕ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನುಡಿದಿದ್ದಾರೆ.

ಆಮೂರರು ಬಹಳಷ್ಟು ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ ರಾಗಿ ಕಾರ್ಯನಿರ್ವಹಿಸಿದರು. ಇಂಗ್ಲಿಷ್ ಮತ್ತು ಕನ್ನಡದಲ್ಲಿ ತೀಕ್ಷ್ಣ ವಿಮರ್ಶಕರಾಗಿ ಬೆಳೆದರು. ಕನ್ನಡದ ಮುಖ್ಯ ಕವಿಗಳಾದ ಬೇಂದ್ರೆ ಮತ್ತು ಕುವೆಂಪುರವರ ಬಗ್ಗೆ ಇವರು ಬರೆದ ವಿಮರ್ಶೆಗಳು ಗಮನಾರ್ಹವಾಗಿವೆ. ವಿಮರ್ಶೆಯಲ್ಲಿ ಶೈಕ್ಷಣಿಕ ಶಿಸ್ತು, ಕೃತಿಯ ಅನುಸಂಧಾನದ ಹೊಸ ಹಾದಿಯನ್ನು ಕಾಣಬಹುದು. ಹೊಸ ತಲೆಮಾರಿನ ತರುಣ ವಿಮರ್ಶಕರು ಬರೆದ ವಿಮರ್ಶೆಗಳನ್ನೂ ಅವರು ಆಸಕ್ತಿಯಿಂದ ಗಮನಿಸುತ್ತಿದ್ದರು ಮತ್ತು ಅವರೊಂದಿಗೂ ಚರ್ಚಿಸುತ್ತಿದ್ದರು. 95 ವರ್ಷಗಳ ತುಂಬು ಜೀವನವನ್ನು ನಡೆಸಿದ ಡಾ. ಆಮೂರರವರು ಕನ್ನಡ, ಇಂಗ್ಲೀಷ್, ಸಂಸ್ಕøತ, ಮರಾಠಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದ ಬಹುಭಾಷಾ ವಿದ್ವಾಂಸರಾಗಿದ್ದರು. ಜೀವಿತದ ಕೊನೆಯ ಕಾಲದಲ್ಲಿಯೂ ದಕ್ಷಿಣಾಮೂರ್ತಿ ಸ್ತೋತ್ರ ವೇದಾಂತದ 2 ಸಾವಿರ ಪುಟಗಳ ಬೃಹತ್ ಸಂಪುಟಗಳನ್ನು ಕನ್ನಡಕ್ಕೆ ಅನುವಾದಿಸಿರುವುದು ಅವರ ಸಾಹಿತ್ಯದ ತುಡಿತ ಎಂತಹುದು ಎಂಬುದು ಅರ್ಥವಾಗುವಂತದ್ದಾಗಿದೆ. ಕೊರಳು-ಕೊಳಲು, ಮಹಾಕವಿ ಮಿಲ್ಟನ್, ಕೃತಿಪರೀಕ್ಷೆ, ಭುವನದ ಭಾಗ್ಯ, ಕಥೆ, ಕಾದಂಬರಿ, ಂಜಥಿಚಿ ಖಚಿಟಿgಚಿಛಿhಚಿಡಿ – ಂ ಛಿಡಿಣiಛಿಚಿಟ sಠಿeಛಿಣಡಿum, Imಚಿges & Imಠಿಡಿessioಟಿs -ಹೀಗೆ ಹಲವಾರು ಕೃತಿಗಳ ಕರ್ತೃವಾದ ಡಾ. ಜಿ.ಎಸ್. ಆಮೂರರವರು ದೇಶದಾದ್ಯಂತ ಶಿಷ್ಯರು, ಸಹೃದಯ ಅಭಿಮಾನಿಗಳನ್ನು ಪಡೆದ ಶ್ರೇಷ್ಠ ಚಿಂತಕರು, ಜ್ಞಾನೋಪಾಸಕರಾಗಿದ್ದರು. ಇಂತಹ ಬಹುಮುಖ ವ್ಯಕ್ತಿತ್ವದ ಆಮೂರರ ಅಗಲುವಿಕೆಯಿಂದ ಸಾಹಿತ್ಯ ಕ್ಷೇತ್ರವು ಬಡವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು, ಕುಟುಂಬವರ್ಗದವರಿಗೆ, ಬಂಧು-ಬಾಂಧವರಿಗೆ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲೆಂದು ಪ್ರಾರ್ಥಿಸುವುದಾಗಿ ಸುತ್ತೂರು ಶ್ರೀಗಳು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

 

 

Translate »