ಮೈಸೂರು

ಲಸಿಕೆ ನೀಡಲು ಮೀನಾ-ಮೇಷ: ಅರಣ್ಯ ಸಿಬ್ಬಂದಿ ಆಕ್ರೋಶ

May 27, 2021

22 ದಿನದಲ್ಲಿ 20 ಸಿಬ್ಬಂದಿ ಕೊರೊನಾಗೆ ಬಲಿ; ಲಸಿಕೆ ಆದ್ಯತೆಗೆ ಅರಣ್ಯ ಇಲಾಖೆ ಸಿಬ್ಬಂದಿಯನ್ನೂ ಪರಿಗಣಿಸಲು ಒತ್ತಾಯ ವರ್ಕ್ ಫ್ರಂ ಹೋಮ್ ಸಾಧ್ಯವೇ?

ಕೊರೊನಾ ಸಂಕಷ್ಟ ಸ್ಥಿತಿಯಲ್ಲಿ ಆಮ್ಲಜನಕಕ್ಕಾಗಿ ಪರದಾಡುವಾಗ ಅರಣ್ಯ ಸಂರಕ್ಷಣೆಯ ಮಹತ್ವ ಎಲ್ಲರಿಗೂ ಮನವರಿಕೆಯಾಗಿದೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಹಿತಕಾಯಲು ಸರ್ಕಾರ ಹಿಂದೇಟು ಹಾಕುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಇಂಟರ್‍ನೆಟ್ ಬಳಸಿ `ವರ್ಕ್ ಫ್ರಮ್ ಹೋಮ್’ ಮಾಡಲು ಸಾಧ್ಯವೇ? ಕಳೆದ 22 ದಿನಗಳಲ್ಲಿ 28ರಿಂದ 48 ವರ್ಷದೊಳಗಿನ 20ಕ್ಕೂ ಹೆಚ್ಚು ಸಿಬ್ಬಂದಿ ಕೊರೊನಾಗೆ ಬಲಿಯಾಗಿ ದ್ದಾರೆ. ಅವರ ಕುಟುಂಬಕ್ಕೆ ಯಾರು ದಿಕ್ಕು? ಸರ್ಕಾರ ಅರಣ್ಯ ಇಲಾಖೆ ಮೇಲಿನ ಮಲತಾಯಿ ದೋರಣೆ ಕೈಬಿಟ್ಟು ಲಸಿಕೆ ಹಾಕಿಸಲು ಆದ್ಯತೆ ನೀಡಬೇಕು. ಕೊರೊನಾ ವಾರಿಯರ್ಸ್ ಎಂದೇ ಪರಿಗಣಿಸ ಬೇಕು. ಪೊಲೀಸ್ ಇಲಾಖೆಯಂತೆ ಅರಣ್ಯ ಸಿಬ್ಬಂದಿಗೂ ಸೌಲಭ್ಯ ದೊರಕಿಸಿಕೊಡಬೇಕು.
-ಎಂ.ಎಸ್.ಗುರುರಾಜ್ ಶೆಟ್ಟಿ, ದೇವರಾಜ ಮೊಹಲ್ಲಾ

ಮೈಸೂರು, ಮೇ 26- ಕೊರೊನಾದ 2ನೇ ಅಲೆ ರಾಜ್ಯಾದ್ಯಂತ ಕಳೆದ 22 ದಿನದಲ್ಲಿ 20 ಅರಣ್ಯ ಸಿಬ್ಬಂದಿ ಯನ್ನು ಬಲಿ ಪಡೆದಿದೆ. ಹಾಗಿದ್ದರೂ ರಾಜ್ಯ ಸರ್ಕಾರ ಆದ್ಯತೆ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳದಿರುವುದು ಸಿಬ್ಬಂದಿಯ ಆತ್ಮಸ್ಥೈರ್ಯ ಕಸಿಯುವಂತೆ ಮಾಡಿದೆ.

4 ದಿನಗಳ ಹಿಂದೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ ಅರಣ್ಯ ಇಲಾಖೆಯನ್ನು ಆದ್ಯತಾ ವರ್ಗಕ್ಕೆ ಸೇರಿಸಿದ್ದರೂ ಸಿಬ್ಬಂದಿಗೆ 2ನೇ ಹಂತದಲ್ಲಿ ಲಸಿಕೆ ಹಾಕಲು ಪರಿಗಣಿಸಲಾಗಿದೆ. ಅನುಬಂಧ-1ರಲ್ಲಿ ಗುರು ತಿಸುವವರಿಗೆ ಲಸಿಕೆ ಹಾಕಿದ ನಂತರ ಅನುಬಂಧ-2ರ ಆದ್ಯತಾ ವಲಯದಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ ಲಸಿಕೆ ನೀಡಲು ನಿಗದಿಪಡಿಸಲಾಗಿದೆ.
ಅರಣ್ಯ ಇಲಾಖೆಯವರಿಗೆ ತಕ್ಷಣ ಲಸಿಕೆ ಹಾಕಲು ಅವಕಾಶ ಇಲ್ಲದಿರುವುದು ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿದ್ದರೆ, ಕೆಳಹಂತದ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ. ಹುಲಿ, ಕಾಡಾನೆ, ಚಿರತೆ ಹಾವಳಿ ತಡೆ ಕಾರ್ಯಾಚರಣೆಯಲ್ಲಿದ್ದ 30ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಕೊರೊನಾ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರು ವಿಭಾಗದ ಓರ್ವ ಆರ್‍ಎಫ್‍ಓ ಕೊರೊನಾಗೆ ಬಲಿಯಾಗಿದ್ದಾರೆ. ಕಳೆದೆ ರಡು ದಿನದ ಹಿಂದೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ಜೆಎಲ್‍ಆರ್‍ನ ನ್ಯಾಚುರಲಿಸ್ಟ್ ನಾಗೇಂದ್ರ (31) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ 2 ಸಾವು ಇಲಾಖಾ ಸಿಬ್ಬಂದಿಯಲ್ಲಿ ಬಹಳ ಭಯ ಉಂಟು ಮಾಡಿವೆ.

ಸಾಮಾಜಿಕ ಅರಣ್ಯ ರಕ್ಷಣೆ, ಮಾನವ-ಪ್ರಾಣಿ ಸಂಘರ್ಷ ತಡೆ, ನೆಡುತೋಪು ನಿರ್ವಹಣೆ, ಅಕ್ರಮ ಬೇಟೆ ತಡೆ, ಅರಣ್ಯ ಅಪರಾಧ ಪತ್ತೆ, ಹುಲಿ ಸಂರಕ್ಷಿತ ಪ್ರದೇಶದ ಸಂಪತ್ತು ರಕ್ಷಣೆ, ಕಾಡಂಚಿನ ಗ್ರಾಮಗಳಲ್ಲಿ ಗಸ್ತು ಕಾರ್ಯಗಳಲ್ಲಿ ತೊಡಗಿರುವ ಅರಣ್ಯ ಸಿಬ್ಬಂದಿಗೆ ಲಸಿಕೆ ನೀಡಲು ಆದ್ಯತೆ ನೀಡದಿರುವುದು ಸರ್ಕಾರದ ಮಲತಾಯಿ ಧೋರಣೆ ತೋರುತ್ತದೆ ಎಂದು ಅರಣ್ಯ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
¸
Éೂೀಂಕಿಗೆ ಆರ್‍ಎಫ್‍ಓ, ಡಿಆರ್‍ಎಫ್, ಗಾರ್ಡ್, ವಾಚರ್, ಆನೆ ಮಾವುತ, ವಾಹನ ಚಾಲಕ, ನರ್ಸರಿ ಸಿಬ್ಬಂದಿ ಸೇರಿದಂತೆ ಕೆಳಹಂತದ ಸಿಬ್ಬಂದಿಗಳೂ ಬಲಿಯಾಗಿದ್ದಾರೆ. ಹಾಗಾಗಿ ಸೋಂಕಿನಿಂದ ಪ್ರಾಣ ಉಳಿಸಿಕೊಳ್ಳಲು ಲಸಿಕೆ ಹಾಕಿಸುವಂತೆ ಗೋಗರೆಯುತ್ತಿದ್ದಾರೆ.

ಪತ್ರ ಬರೆದಿದೆ: ಮೈಸೂರು ವಿಭಾಗದ ಡಿಸಿಎಫ್ ಡಾ.ಕೆ.ಸಿ.ಪ್ರಶಾಂತ್ ಕುಮಾರ್ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿಗೆ ಲಸಿಕೆ ಹಾಕಿಸುವ ಸಂಬಂಧ ಜಿಲ್ಲಾ ಆರೋಗ್ಯ-ಕುಟುಂಬ ಕಲ್ಯಾಣಾಧಿಕಾರಿಗೆ ಪತ್ರ ಬರೆಯಲಾಗಿದೆ. ಲಸಿಕಾ ಉಸ್ತುವಾರಿ ಅಧಿಕಾರಿಗೂ ಮನವಿ ಮಾಡಲಾಗಿದೆ. 2 ದಿನದಲ್ಲಿ ಅರಣ್ಯ ಸಿಬ್ಬಂದಿಗೂ ಲಸಿಕೆ ನೀಡುವ ಪ್ರಕ್ರಿಯೆ ಆರಂಭ ವಾಗಬಹುದೆಂಬ ನಿರೀಕ್ಷೆಯಿದೆ. ಮೈಸೂರು ತಾಲೂಕಲ್ಲಿ 120 ಸಿಬ್ಬಂದಿಗಳಿದ್ದು, ಎಲ್ಲರಿಗೂ ಬೇಗ ಲಸಿಕೆ ಕೊಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಬಂಡಿಪುರದಲ್ಲಿ ಶೇ.50 ಮಂದಿಗಿಲ್ಲ ಲಸಿಕೆ: ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ 13 ವಲಯಗಳಲ್ಲಿ 620ಕ್ಕೂ ಅಧಿಕ ಖಾಯಂ ಹಾಗೂ ಗುತ್ತಿಗೆ ನೌಕರರಿದ್ದು, 320 ಮಂದಿಗಷ್ಟೇ ಮೊದಲ ಡೋಸ್ ನೀಡಲಾಗಿದೆ. ಕೇರಳ, ತಮಿಳುನಾಡು ಗಡಿಭಾಗದಲ್ಲಿ ಸಿಬ್ಬಂದಿ ಭಯದಲ್ಲೇ ಕೆಲಸ ನಿರ್ವಹಿಸುವಂತಾಗಿದೆ.

ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಎಸ್.ಆರ್.ನಟೇಶ್ ಮಾತನಾಡಿ, 300 ಸಿಬ್ಬಂದಿಗೆ ಲಸಿಕೆ ಹಾಕಿಸಬೇಕಿದೆ. ಅರಣ್ಯ ಇಲಾಖೆ ಸಿಬ್ಬಂದಿ ಯನ್ನೂ ಫ್ರಂಟ್‍ಲೈನ್ ವರ್ಕರ್ಸ್ ಎಂದು ಪರಿಗಣಿಸು ವಂತೆ ಮನವಿ ಮಾಡಲಾಗಿದೆ. ಆದ್ಯತಾ ವರ್ಗಕ್ಕೆ ಸೇರಿಸಿರುವುದರಿಂದ 18-44 ವರ್ಷ ವಯೋ ಮಾನದವರಿಗೆ ಲಸಿಕೆ ಹಾಕಿಸಲು ಅವಕಾಶವಾಗಿಲ್ಲ. ಇನ್ನೆರಡು ದಿನದಲ್ಲಿ ಎಲ್ಲಾ ಸಿಬ್ಬಂದಿಗೂ ಲಸಿಕೆ ಹಾಕಿಸುವ ವಿಶ್ವಾಸವಿದೆ ಎಂದರು. ನಾಗರಹೊಳೆ: ಮೈಸೂರು-ಕೊಡಗು ಜಿಲ್ಲೆಗಳ ವ್ಯಾಪ್ತಿಗೆ ಒಳಪಡುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ದಲ್ಲಿ 605 ಸಿಬ್ಬಂದಿಗಳಿದ್ದು, ಈವರೆಗೆ 360 ಮಂದಿ ಗಷ್ಟೇ ಲಸಿಕೆ ಹಾಕಿಸಲಾಗಿದೆ. ಈ ಕುರಿತು ನಾಗರ ಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮಹೇಶ್ ಕುಮಾರ್ ಮಾತನಾಡಿ, ನಾಗರಹೊಳೆ ಅರಣ್ಯ ವ್ಯಾಪ್ತಿಯ 8 ವಲಯದಲ್ಲಿ 7 ವಲಯಗಳ ಸಿಬ್ಬಂದಿಗೆ ಲಸಿಕೆ ಹಾಕಿಸಲಾಗಿದೆ. ಹುಣಸೂರು ವಲಯ, ಎಸ್‍ಟಿಪಿ ಎಫ್-ಪ್ಲಟೂನ್ ಸಿಬ್ಬಂದಿಗೆ ಲಸಿಕೆ ಬಾಕಿಯಿದೆ. 2 ಜಿಲ್ಲೆಗಳ ಅಧಿಕಾರಿಗಳಿಗೂ ಮನವಿ ಮಾಡಿದ್ದು, ಶೀಘ್ರವೇ ಉಳಿದವರಿಗೂ ಲಸಿಕೆ ಹಾಕಿಸಲಾಗುವುದು ಎಂದರು.

ಎಂ.ಟಿ.ಯೋಗೇಶ್ ಕುಮಾರ್

 

 

Translate »