ಇಂದು ಜಗತ್ತೇ ಬುದ್ಧರ ಕಡೆ ಮುಖ ಮಾಡುತ್ತಿದೆ; ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್
ಮೈಸೂರು

ಇಂದು ಜಗತ್ತೇ ಬುದ್ಧರ ಕಡೆ ಮುಖ ಮಾಡುತ್ತಿದೆ; ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್

May 27, 2021

ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕ, ಸ್ನಾತಕೋತ್ತರ ಪದವಿಯಲ್ಲಿ ಬುದ್ಧರ ಚಿಂತನೆ ಐಚ್ಛಿಕ ವಿಷಯವಾಗಿ ಪ್ರಾರಂಭ

ಮೈಸೂರು,ಮೇ 26(ಪಿಎಂ)- ಇಡೀ ಜಗತ್ತೇ ಇಂದು ಬುದ್ಧರ ಕಡೆ ಮುಖ ಮಾಡುತ್ತಿದ್ದು, ಮೈಸೂರು ವಿವಿಯು ಇಂತಹ ಮಹಾ ಪುರುಷನ ಅಧ್ಯಯನ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ಅಲ್ಲದೆ, ಈ ವರ್ಷದ ಶೈಕ್ಷಣಿಕ ಸಾಲಿನಿಂದಲೇ ಬುದ್ಧರ ಚಿಂತನೆಯ ವಿಷಯವನ್ನು ಒಂದು ಐಚ್ಛಿಕ ವಿಷಯವಾಗಿ ಸ್ನಾತಕ ಮತ್ತು ಸ್ನಾತಕೋತ್ತರ ಹಂತದಲ್ಲಿ ಪ್ರಾರಂಭಿಸ ಲಾಗುತ್ತಿದೆ ಎಂದು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು.

ಮೈಸೂರು ಮಾನಸ ಗಂಗೋತ್ರಿಯ ವಿಜ್ಞಾನ ಭವನದ ಕೊಠಡಿಯಲ್ಲಿ ಮೈಸೂರು ವಿವಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋ ಧನಾ ಮತ್ತು ವಿಸ್ತರಣಾ ಕೇಂದ್ರದ ವತಿ ಯಿಂದ 2565ನೇ ಬುದ್ಧ ಪೂರ್ಣಿಮೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ `ಪ್ರಸ್ತುತ ಸಮಾಜದ ಆರೋಗ್ಯಕ್ಕೆ ಬುದ್ಧ ಪ್ರಜ್ಞೆ’ ಕುರಿತ ವಿಶೇಷ ಉಪನ್ಯಾಸ ಉದ್ಘಾ ಟಿಸಿ ಅವರು ಮಾತನಾಡಿದರು (ಕೋವಿಡ್ ಹಿನ್ನೆಲೆಯಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಆನ್‍ಲೈನ್ ವ್ಯವಸ್ಥೆ ಕಲ್ಪಿಸಲಾಗಿತ್ತು).

ಪ್ರಸ್ತುತ ಜಗತ್ತಿಗೆ ಬುದ್ಧಗುರುವಿನ ಅನಿ ವಾರ್ಯತೆ ಅಗಾಧವಾಗಿದೆ. ಕೋವಿಡ್ ಕಾರ್ಮೋಡ ಕವಿದಿರುವ ಜಗತ್ತಿಗೆ ಬುದ್ಧ ಪ್ರಜ್ಞೆಯ ಮೂಲಕ ಪರಿಹಾರ ಕಂಡು ಕೊಳ್ಳಬೇಕಿದೆ. ಡಾ.ಬಿ.ಆರ್.ಅಂಬೇಡ್ಕರ್ ನಮ್ಮ ದೇಶಕ್ಕೆ ಮರಳಿ ತಂದ ಬುದ್ಧ ದಮ್ಮವು ವೈಜ್ಞಾನಿಕ ಧರ್ಮವಾಗಿದ್ದು, ಪ್ರತಿಯೊಬ್ಬ ಮಾನವನಲ್ಲಿಯೂ ವಿವೇಚನೆ ಮತ್ತು ವಿಶಾಲತೆ ತುಂಬಲಿದೆ ಎಂದು ತಿಳಿಸಿದರು.

ಬುದ್ಧರ ಸಂದೇಶಗಳನ್ನು ತನ್ನದಾಗಿ ಸಿಕೊಳ್ಳುವಲ್ಲಿ ವಿಫಲವಾಗಿರುವ ಕಾರಣ ವ್ಯಕ್ತಿ, ಸಮಾಜ ಮತ್ತು ಸಂಸ್ಥೆಗಳಿಗೆ ಅಪಾಯ ಮತ್ತು ಸವಾಲುಗಳು ಎದು ರಾಗುತ್ತಿವೆ. ಬುದ್ಧಗುರು ಮತ್ತು ಅವರ ಉದಾತ್ತ ಚಿಂತನೆಯನ್ನು ಜಗತ್ತಿಗೆ ನೀಡಿದ ಕೀರ್ತಿ ಭಾರತಕ್ಕೆ ಸಲುತ್ತದೆ. ಇಡೀ ಜಗತ್ತೇ ಇಂದು ಬುದ್ಧರ ಕಡೆ ಮುಖ ಮಾಡು ತ್ತಿದೆ. ಬುದ್ಧಗುರುವಿನ ತ್ರಿಪಿಟಕವನ್ನು ಇಂದು ಎಲ್ಲರೂ ಅಧ್ಯಯನ ಮಾಡುವ ಕಡೆ ಸಾಗಬೇಕಿದೆ. ಆ ಮೂಲಕ ಪ್ರತಿ ಯೊಬ್ಬ ವ್ಯಕ್ತಿಯೂ ತನ್ನ ಬೆಳವಣಿಗೆ ಗಳನ್ನು ಬುದ್ಧಗುರು ತೋರಿದ ಹಾದಿ ಯಲ್ಲಿ ಕಟ್ಟಿಕೊಳ್ಳಬೇಕಿದೆ ಎಂದರು.

ಬುದ್ಧ ಚಿಂತನೆಯಿಂದ ವೈರಾಣು ವಿರುದ್ಧ ಹೋರಾಟ: ಬುದ್ಧರ ಪ್ರಜ್ಞೆ, ಕರುಣೆ, ಸಮತಾ ತತ್ವಗಳಲ್ಲಿ ಪರಿಪೂರ್ಣ ಜೀವನ ಸಾಧ್ಯವಿದೆ. ಈ ಸರಳ ಸತ್ಯ ಅರಿತರೆ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲಿದೆ. ವಿಜ್ಞಾನ ಮುಂದು ವರೆದಿರುವ ಈ ಕಾಲಘಟ್ಟದಲ್ಲಿಯೂ ಕಣ್ಣಿಗೆ ಕಾಣದ ವೈರಾಣು ಸಾವಿನ ಮೃದಂಗ ಭಾರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬುದ್ಧರ ಚಿಂತನೆಗಳಾದ ಎಚ್ಚರ, ಆತ್ಮ ಸ್ಥೈರ್ಯ, ನಿರ್ಭಯಗಳ ಮೂಲಕ ವೈರಾಣು ವಿರುದ್ಧ ಹೋರಾಡಲು ಸಾಧ್ಯ ವಿದೆ ಎಂದು ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು. ಮಾನವ ನಿರ್ಮಿತ ವೈರಾಣು ಗಳು ಇಂದು ಜಗತ್ತನ್ನು ಸ್ತಬ್ಧಗೊಳಿ ಸುತ್ತಿದ್ದು, ಬುದ್ಧಗುರು ಅಂದು ಸಾವಿಲ್ಲದ ಮನೆಯಿಂದ ಸಾಸಿವೆ ತರಲಾಗದು ಎಂಬುದನ್ನು ಸಾಬೀತು ಮಾಡಿದ್ದರು. ಇಂದು ಕೋವಿಡ್ ಸೋಂಕಿಲ್ಲ ರಾಷ್ಟ್ರ ಇಲ್ಲವೆಂಬ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ರೀತಿಯ ಸವಾಲು ಎದುರಿಸಲು ಬುದ್ಧನೆಡೆಗೆ ತೆರೆದುಕೊಳ್ಳಬೇಕಿದೆ ಎಂದರು. `ಪ್ರಸ್ತುತ ಸಮಾಜದ ಆರೋಗ್ಯಕ್ಕೆ ಬುದ್ಧ ಪ್ರಜ್ಞತೆ’ ಕುರಿತು ವಿಶ್ವಮೈತ್ರಿ ಬುದ್ಧ ವಿಹಾರದ ಭಿಕ್ಕು ಡಾ. ಕಲ್ಯಾಣಸಿರಿ ವಿಶೇಷ ಉಪನ್ಯಾಸ ನೀಡಿದರು. ಇದಕ್ಕೂ ಮುನ್ನ ಮಾನಸ ಗಂಗೋತ್ರಿಯ ಬುದ್ಧನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು. ಮೈಸೂರು ವಿವಿ ಆಡಳಿತಾಂಗ ಕುಲಸಚಿವ ಪ್ರೊ. ಆರ್. ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ.ಬಿ. ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಜೆ. ಸೋಮಶೇಖರ್ ಮತ್ತಿತರರು ಹಾಜರಿದ್ದರು.

ಮನಸ್ಸಿನ ರೋಗ ನಿರೋಧಕ ಶಕ್ತಿ ವೃದ್ಧಿಸಲು
ಮಾನವೀಯ ಮೌಲ್ಯ ಅಗತ್ಯ; ಬಿಕ್ಕು ಡಾ.ಕಲ್ಯಾಣಸಿರಿ
ಮೈಸೂರು,ಮೇ 26(ಪಿಎಂ)- ಮಾನವ ಸಮಾಜ ಸ್ವಾಸ್ಥ್ಯಕ್ಕೆ ಬುದ್ಧ ಪ್ರಜ್ಞೆ ಅತ್ಯಗತ್ಯ ಎಂಬುದನ್ನು ಡಾ.ಬಿ.ಆರ್.ಅಂಬೇಡ್ಕರ್ ಮನಗಂಡಿದ್ದರು. ಇದೇ ಕಾರಣಕ್ಕೆ ಅವರು ಬುದ್ಧ ಪ್ರಜ್ಞೆಯನ್ನು ಒಪ್ಪಿ-ಅಪ್ಪಿಕೊಂಡಿದ್ದಾರೆ ಎಂದು ವಿಶ್ವಮೈತ್ರಿ ಬುದ್ಧವಿಹಾರದ ಭಿಕ್ಕು ಡಾ.ಕಲ್ಯಾಣಸಿರಿ ಹೇಳಿದರು.

ಡಾ.ಅಂಬೇಡ್ಕರ್ ಅವರು ವಿಜ್ಞಾನವನ್ನು ಮೀರಿಸುವ ಸುಜ್ಞಾನ ಬುದ್ಧ ಪ್ರಜ್ಞೆಯಲ್ಲಿದೆ ಎಂಬುದನ್ನು ಸಾರಿ ಹೇಳಿದ್ದಾರೆ ಎಂದ ಅವರು, ಪ್ರಸ್ತುತ ಕೋವಿಡ್ ಸೋಂಕಿಗೆ ಔಷಧ ಇಲ್ಲ. ಅದನ್ನು ನಿಗ್ರಹಿಸಲು ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಸದ್ಯಕ್ಕಿರುವ ಮಾರ್ಗವೆಂದು ವೈದ್ಯ ಲೋಕ ಹೇಳುತ್ತಿದೆ. ಅಂತೆಯೇ ಮನಸ್ಸಿನ ರೋಗ ನಿರೋಧಕ ಶಕ್ತಿ ವೃದ್ಧಿಸಲು ಮಾನವೀಯ ಮೌಲ್ಯ ಅಗತ್ಯವಾಗಿದೆ. ಈ ಎರಡೂ ಅಂಶಗಳತ್ತ ಗಮನ ಹರಿಸಿದರೆ ಮಾನವ ಮಾನಸಿಕ ಮತ್ತು ದೈಹಿಕವಾಗಿ ಸದಾ ಆರೋಗ್ಯದಿಂದ ಇರಬಹುದು. ಸಮಾಜದಲ್ಲೂ ಸ್ವಾಸ್ಥ್ಯ ನೆಲೆಸುತ್ತದೆ ಎಂದರು.

 

Translate »