ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ; ಸಂಯುಕ್ತ ಹೋರಾಟ ಕರ್ನಾಟಕದಿಂದ ಬಿಜೆಪಿ ಸಂಸದ   ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ಆರೋಪ; ಸಂಯುಕ್ತ ಹೋರಾಟ ಕರ್ನಾಟಕದಿಂದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

June 3, 2023

ಮೈಸೂರು,ಜೂ.1(ಪಿಎಂ)- ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿ ಸುತ್ತಿರುವ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಸಂಯುಕ್ತ ಕಿಸಾನ್ ಮೋರ್ಚಾ ಕರೆಯ ಮೇರೆಗೆ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ರಾಜ್ಯಾದ್ಯಂತ ಇಂದು ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರ ಅಂಗವಾಗಿ ಮೈಸೂರಿನ ಗಾಂಧಿ ಚೌಕದಲ್ಲೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು.

ಒಲಂಪಿಕ್ ಪದಕ ವಿಜೇತರು, ವಿಶ್ವ ಚಾಂಪಿ ಯನ್ ಕುಸ್ತಿ ಪಟುಗಳು ಸೇರಿದಂತೆ ದೇಶದ ಗೌರವಾ ನ್ವಿತ ಕ್ರೀಡಾಪಟುಗಳು 2023ರ ಏಪ್ರಿಲ್ 24ರಿಂದ ನವದೆಹಲಿಯ ಜಂತರ್ ಮಂತರ್‍ನಲ್ಲಿ ಅನಿರ್ದಿಷ್ಟಾ ವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಸುಪ್ರಿಂಕೋರ್ಟ್ ಮಧ್ಯ ಪ್ರವೇಶಿಸಿದ ನಂತರವಷ್ಟೇ ಎಫ್‍ಐಆರ್ ದಾಖಲಾಗಿದೆ. ಆರೋಪಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದ ಕೇಂದ್ರ ಸರ್ಕಾರ ತನ್ನ ಪೊಲೀಸ್ ಪಡೆಗಳನ್ನು ಬಳಸಿ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಕುಸ್ತಿಪಟುಗಳ ಮೇಲೆಯೇ ದಮನಕಾರಿ ಕ್ರಮಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳಾ ಕುಸ್ತಿಪಟು ಗಳು ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸ ಬೇಕೆಂದು ಹಾಗೂ ಪ್ರಕರಣ ಸಂಬಂಧ ರಚಿಸಲಾದ ವಿಚಾರಣಾ ಸಮಿತಿಯ ವರದಿಯನ್ನು ಸಾರ್ವಜನಿ ಕರ ಗಮನಕ್ಕೆ ತರಬೇಕೆಂದು ಆಗ್ರಹಿಸಿ ಹೋರಾಟ ಮಾಡುತ್ತಿದ್ದಾರೆ. `ಬೇಟಿ ಬಚಾವೋ ಬೇಟಿ ಪಡಾವೋ’ ಎಂದು ಪ್ರಚಾರ ಪಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಒಕ್ಕೂಟ ಸರ್ಕಾರ, ಆರೋಪಿ ರಕ್ಷಣೆಗೆ ನಿಂತಿದ್ದು, ಇದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಇದು ಮಹಿಳೆಯರ ಆತ್ಮಗೌರವಕ್ಕಾಗಿ ನಡೆಯುತ್ತಿರುವ ಹೋರಾಟ. ಶೋಷಣೆ ವ್ಯವಸ್ಥೆ ಒಪ್ಪಿಕೊಂಡವರಿಗೆ ಇಂತಹ ಪ್ರಕರಣಗಳು ಅತ್ಯಂತ ಸಾಮಾನ್ಯ ಸಂಗತಿ. ಒಂದೂವರೆ ತಿಂಗಳಿಂದ ಮಹಿಳಾ ಕುಸ್ತಿಪಟುಗಳು ಹೋರಾಟನಿರತರಾಗಿದ್ದಾರೆ. ಯಾವುದೇ ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಸಾಕ್ಷ್ಯಾಧಾರ ಗಳನ್ನು ಕಲೆ ಹಾಕುವುದು ಕಷ್ಟಸಾಧ್ಯ. 100ರಲ್ಲಿ ಒಂದೆರಡು ಸಾಕ್ಷ್ಯಗಳು ದೊರೆಯಬಹುದು. ಬಾಕಿ ಸಾಕ್ಷ್ಯಗಳನ್ನು ಸಾಂದರ್ಭಿಕವಾಗಿ ಸಂಗ್ರಹಿಸ ಬೇಕಾಗುತ್ತದೆ ಎಂದರು. ರೈತ ಸಂಘದ ಮುಖಂಡ ರಾದ ಹೊಸಕೋಟೆ ಬಸವರಾಜು, ಮರಂಕಯ್ಯ, ಪುನೀತ್, ಪ್ರಗತಿಪರ ಚಿಂತಕರಾದ ಪ್ರೊ.ಕೆ.ಎಸ್. ಭಗವಾನ್, ರತಿರಾವ್, ಜಿ.ಪಿ.ಬಸವರಾಜು, ನಾ.ದಿವಾ ಕರ್, ಸಿಐಟಿಯು ಮುಖಂಡರಾದ ಜಿ.ಜಯರಾಮ್, ಬಸವರಾಜು, ಜಗದೀಶ್ ಸೂರ್ಯ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »