ಪಾಲಿಕೆ, ಮುಡಾ, ಸಬ್ ರಿಜಿಸ್ಟ್ರಾರ್ ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಮೈಸೂರು

ಪಾಲಿಕೆ, ಮುಡಾ, ಸಬ್ ರಿಜಿಸ್ಟ್ರಾರ್ ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

June 1, 2023

ಮೈಸೂರು, ಮೇ 31(ಆರ್‍ಕೆ)-ಮೈಸೂರು ನಗರಪಾಲಿಕೆ ಸೂಪ ರಿಂಟೆಂಡಿಂಗ್ ಇಂಜಿನಿಯರ್ ಮಹೇಶ್, ಮುಡಾ ಮುಖ್ಯ ಹಣಕಾಸು ಅಧಿಕಾರಿ ಎನ್.ಮುತ್ತ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ನಾಗೇಶ್ ಮತ್ತು ನಂಜನ ಗೂಡು ಉಪ ನೋಂದಣಾಧಿಕಾರಿ ಶಿವ ಶಂಕರಮೂರ್ತಿ ಅವರುಗಳ ನಿವಾಸ ಹಾಗೂ ಕಚೇರಿಗಳ ಮೇಲೆ ಬುಧವಾರ ಬೆಳ್ಳಂ ಬೆಳಗ್ಗೆ ಏಕ ಕಾಲಕ್ಕೆ ದಾಳಿ ನಡೆಸಿದ ಲೋಕಾ ಯುಕ್ತ ಪೊಲೀಸರು ಕೋಟ್ಯಾಂತರ ರೂ. ಮೌಲ್ಯದ ಆಸ್ತಿ-ಪಾಸ್ತಿ ಪತ್ತೆ ಹಚ್ಚಿದ್ದಾರೆ.

ಇವರುಗಳ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇರೆಗೆ ಭ್ರಷ್ಟಾ ಚಾರ ನಿಗ್ರಹ ಕಾಯ್ದೆಯಡಿ ಪ್ರಕ ರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು, ಕಳೆದ ಕೆಲ ತಿಂಗಳಿಂದ ಈ ಅಧಿಕಾರಿಗಳ ಆಸ್ತಿಗೆ ಸಂಬಂಧಿಸಿ ದಂತೆ ಮಾಹಿತಿ ಸಂಗ್ರಹಿಸಿ ಮೈಸೂರು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನಿರ್ದೇಶನದಂತೆ 32 ಅಧಿಕಾರಿಗಳನ್ನೊಳ ಗೊಂಡ ಎಂಟು ತಂಡಗಳು ಬೆಳ್ಳಂ ಬೆಳಗ್ಗೆಯೇ ದಾಳಿ ನಡೆಸಿವೆ.

ಪಾಲಿಕೆ ಎಸ್‍ಇ ಮಹೇಶ್: ಮೈಸೂ ರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ನಗರ ಪಾಲಿಕೆ ಕಚೇರಿಯಲ್ಲಿನ ಪಾಲಿಕೆಯ ಸೂಪರಿಂಟೆಂಡಿಂಗ್ ಇಂಜಿನಿಯರ್ ಮಹೇಶ್ ಅವರ ಕಚೇರಿ ಮತ್ತು ಕುವೆಂಪು ನಗರದ ಪ್ರಮತಿ ಶಾಲೆ ಹಿಂಭಾಗವಿರುವ ಅವರ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು, 24.43 ಲಕ್ಷ ರೂ. ಮೌಲ್ಯದ 629 ಗ್ರಾಂ ಚಿನ್ನಾಭರಣ, 4.9 ಲಕ್ಷ ರೂ. ಮೌಲ್ಯದ 7 ಕೆ.ಜಿ. ಬೆಳ್ಳಿ ಪದಾರ್ಥ, 17 ಲಕ್ಷ ರೂ. ಮೌಲ್ಯದ ಬಿಎಂಡಬ್ಲ್ಯೂ ಕಾರು, 18 ಲಕ್ಷ ರೂ.
ಮೌಲ್ಯದ ಹುಂಡೈ ಕ್ರೆಟಾ ಕಾರು, 83 ಸಾವಿರ ರೂ. ಮೌಲ್ಯದ ಸುಜುಕಿ ಆಕ್ಸಿಸ್ ಸ್ಕೂಟರ್, 3.75 ಲಕ್ಷ ರೂ. ನಗದು, ಲಕ್ಷ ರೂ. ಮೌಲ್ಯದ ಸ್ಕಾಚ್ ಲಿಕ್ಕರ್, 5 ಲಕ್ಷ ರೂ. ಮೌಲ್ಯದ ಟಿಲ್ಲರ್, 12 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು, ಕುವೆಂಪುನಗರದಲ್ಲಿ ಕೋಟಿ ರೂ. ಮೌಲ್ಯದ ಮನೆ, ನಂಜನಗೂಡು ತಾಲೂಕು ಕಡಜೆಟ್ಟಿ ಗ್ರಾಮದ ಸರ್ವೆ ನಂ.35/8ರಲ್ಲಿ 8 ಎಕರೆ ಜಮೀನು, ಒಂದು ಫಾರಂ ಹೌಸ್ ಸೇರಿದಂತೆ ಕೋಟ್ಯಾಂತರ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆ ಮಾಡಿದ್ದಾರೆ.

ಮುಡಾ ಇಂಜಿನಿಯರ್ ನಾಗೇಶ್: ಮುಡಾ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ನಾಗೇಶ್ ಅವರ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, 50 ಲಕ್ಷ ರೂ. ಮೌಲ್ಯದ 1.025 ಕೆ.ಜಿ. ಚಿನ್ನಾಭರಣ, 6 ಲಕ್ಷ ರೂ. ಮೌಲ್ಯದ 9.3 ಕೆ.ಜಿ. ಬೆಳ್ಳಿ ಪದಾರ್ಥ, 1.19 ಲಕ್ಷ ರೂ. ನಗದು, 10 ಲಕ್ಷ ರೂ. ಮೌಲ್ಯದ ನೆಕ್ಸಾಸ್ ಕಾರು, 7 ಲಕ್ಷ ರೂ. ಮೌಲ್ಯದ ಹುಂಡೈ ಕಾರು, 1.5 ಲಕ್ಷ ರೂ. ಮೌಲ್ಯದ ರಾಯಲ್ ಎನ್‍ಫೀಲ್ಡ್ ಬೈಕ್, ರಾಮಕೃಷ್ಣನಗರದಲ್ಲಿ 80 ಲಕ್ಷ ರೂ. ಮೌಲ್ಯದ ಮನೆ, ಮೈಸೂರು ತಾಲೂಕು ಮಾಡಗಳ್ಳಿಯ ರಾಮಯ್ಯ ರಾಯಲ್ ಸಿಟಿ ಬಡಾವಣೆಯಲ್ಲಿ 40 ಲಕ್ಷ ರೂ. ಮೌಲ್ಯದ ನಿವೇಶನ, ದಟ್ಟಗಳ್ಳಿ 3ನೇ ಹಂತದಲ್ಲಿ 30 ಲಕ್ಷ ರೂ. ಮೌಲ್ಯದ ನಿವೇಶನ, ಸಿದ್ಧಾರ್ಥನಗರದಲ್ಲಿ 25 ಲಕ್ಷ ರೂ. ಮೌಲ್ಯದ ಕಮರ್ಷಿಯಲ್ ಶಾಪ್, ದೀಪಾ ಹೌಸಿಂಗ್ ಸೊಸೈಟಿ ಬಡಾವಣೆಯಲ್ಲಿ 40 ಲಕ್ಷ ರೂ. ಮೌಲ್ಯದ ನಿವೇಶನ, ರಟ್ಟನಹಳ್ಳಿಯಲ್ಲಿ 20 ಲಕ್ಷ ರೂ. ಮೌಲ್ಯದ 13 ಗುಂಟೆ ಜಮೀನು, 1.5 ಕೋಟಿ ರೂ. ಮೌಲ್ಯದ 2 ಎಕರೆ ಜಮೀನು ಸೇರಿದಂತೆ ಕೋಟ್ಯಾಂತರ ರೂ. ಮೌಲ್ಯದ ಆಸ್ತಿ-ಪಾಸ್ತಿ ಪತ್ತೆ ಹಚ್ಚಿದ್ದಾರೆ.

ಮುಡಾ ಚೀಫ್ ಅಕೌಂಟೆಂಟ್ ಮುತ್ತ: ಮುಡಾ ಮುಖ್ಯ ಲೆಕ್ಕಾಧಿಕಾರಿ ಎನ್.ಮುತ್ತ ಅವರ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, 5 ಲಕ್ಷ ರೂ. ಮೌಲ್ಯದ ಮಾರುತಿ ಸ್ವಿಫ್ಟ್ ಕಾರು, 60 ಸಾವಿರ ರೂ. ಮೌಲ್ಯದ ಬಜಾಜ್ ಪಲ್ಸರ್ ಬೈಕ್, 10 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು, ಬ್ಯಾಂಕ್ ಖಾತೆಯಲ್ಲಿ 36.50 ಲಕ್ಷ ರೂ. ನಗದು, 20 ಲಕ್ಷ ರೂ. ಮೌಲ್ಯದ 435 ಗ್ರಾಂ ಚಿನ್ನಾಭರಣ, ಲಕ್ಷ ರೂ. ಮೌಲ್ಯದ ಬೆಳ್ಳಿ ಪದಾರ್ಥ, ವಿಜಯನಗರ 4ನೇ ಹಂತದ 40ಘಿ60 ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಾಣವಾಗುತ್ತಿರುವ 4 ಅಂತಸ್ತಿನ ಕಟ್ಟಡ, ಬಸವನಪುರ ಬಳಿ 3 ಅಂತಸ್ತಿನ ಕಟ್ಟಡ ಸೇರಿದಂತೆ ಕೋಟ್ಯಾಂತರ ರೂ. ಆಸ್ತಿ-ಪಾಸ್ತಿ ಪತ್ತೆ ಮಾಡಿದ್ದಾರೆ.

ನಂ.ಗೂಡು ಸಬ್ ರಿಜಿಸ್ಟ್ರಾರ್ ಶಿವಶಂಕರಮೂರ್ತಿ: ನಂಜನಗೂಡು ಉಪ ನೋಂದಣಾಧಿಕಾರಿ ಶಿವಶಂಕರಮೂರ್ತಿ ಮನೆ ಮತ್ತು ನಿವಾಸದ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, 12 ಲಕ್ಷ ರೂ. ಮೌಲ್ಯದ ಎಕೋ ಸ್ಪೋಟ್ರ್ಸ್ ಟೈಟಾನಿಯಂ ಕಾರು, 12 ಲಕ್ಷ ರೂ. ಮೌಲ್ಯದ ಇನ್ನೋವಾ ಕಾರು, 8 ಲಕ್ಷ ರೂ. ಮೌಲ್ಯದ ಗೂಡ್ಸ್ ವಾಹನ, ಟಿವಿಎಸ್ ಜೂಪಿಟರ್ ಸ್ಕೂಟರ್, ಟಿವಿಎಸ್ ವಿಗೋ ಸ್ಕೂಟರ್, ರಾಯಲ್ ಎನ್‍ಫೀಲ್ಡ್ ಬೈಕ್, ಪಲ್ಸರ್ ಬೈಕ್, 5 ನಿವೇಶನಗಳು, 35 ಲಕ್ಷ ರೂ. ಮೌಲ್ಯದ ಜಮೀನು, 2 ಮನೆ, ಬ್ಯಾಂಕ್ ಖಾತೆಯಲ್ಲಿ 7,13,446 ರೂ. ಮತ್ತೊಂದು ಬ್ಯಾಂಕ್ ಖಾತೆಯಲ್ಲಿ 17,588 ರೂ., ಪತ್ನಿಯ ಬ್ಯಾಂಕ್ ಖಾತೆಯಲ್ಲಿ 10,85,242 ರೂ., ತಾಯಿಯ ಬ್ಯಾಂಕ್ ಖಾತೆಯಲ್ಲಿ 1,00,418 ರೂ., 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 65 ಸಾವಿರ ರೂ. ಮೌಲ್ಯದ ಬೆಳ್ಳಿ ಪದಾರ್ಥಗಳನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ.

Translate »