ಚಾಮರಾಜನಗರ ಬಳಿ ವಾಯು ಸೇನೆಯ ತರಬೇತಿ ವಿಮಾನ ಪತನ
ಚಾಮರಾಜನಗರ

ಚಾಮರಾಜನಗರ ಬಳಿ ವಾಯು ಸೇನೆಯ ತರಬೇತಿ ವಿಮಾನ ಪತನ

June 3, 2023

ಚಾಮರಾಜನಗರ, ಜೂ.1 (ಎಸ್‍ಎಸ್)- ಭಾರತೀಯ ವಾಯುಸೇನೆಯ ಕಿರಣ್ ತರ ಬೇತಿ ವಿಮಾನವೊಂದು ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಮದ ಬಳಿ ಗುರು ವಾರ ಪತನಗೊಂಡಿದ್ದು, ವಿಮಾನದಲ್ಲಿದ್ದ ವಿಂಗ್ ಕಮಾಂಡರ್ ತೇಜ್‍ಪಾಲ್(50) ಹಾಗೂ ವಿಮಾನ ತರಬೇತಿ ಪಡೆಯುತ್ತಿದ್ದ ಭೂಮಿಕಾ (28) ಪ್ಯಾರಚೂಟ್ ಮೂಲಕ ಕೆಳಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭೋಗಾಪುರ, ಸಪ್ಪಯ್ಯನಪುರ ನಡುವಿನ ಗೋಮಾಳ ದಲ್ಲಿ ಈ ವಿಮಾನ ಪತನಗೊಂಡಿದ್ದು, ಕೆಲವೇ ಮೀಟರ್ ಅಂತರದಲ್ಲಿ ಕೃಷಿಯಲ್ಲಿ ತೊಡಗಿದ್ದ ರೈತರು ಅದೃಷ್ಟ ವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಘಟನೆಯ ವಿವರ: ಬೆಂಗಳೂರಿನ ಹೆಚ್‍ಎಎಲ್ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ಭಾರತೀಯ ವಾಯುಸೇನೆಯ ವಿಮಾನ ತರಬೇತಿ ಹಾರಾಟ ನಡೆಸುತ್ತಿತ್ತು. ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ವಿಮಾನದಲ್ಲಿದ್ದ ತೇಜ್‍ಪಾಲ್ ಹಾಗೂ ಭೂಮಿಕಾ ಅವರು ಪ್ಯಾರಚೂಟ್ ಮೂಲಕ ಕೆಳಕ್ಕೆ ಜಿಗಿದಿದ್ದಾರೆ. ನಂತರ ಭೋಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸಪ್ಪಯ್ಯನಪುರಕ್ಕೆ ಸೇರಿದ ಗೋಮಾಳದಲ್ಲಿ ವಿಮಾನ ಪತನಗೊಂಡಿದೆ.

ಭಾರೀ ಸದ್ದು: ವಿಮಾನದಲ್ಲಿ ತಾಂತ್ರಿಕದೋಷ ಕಾಣಿಸಿಕೊಳ್ಳುತ್ತಿದ್ದಂತೆಯೇ ಭಾರೀ ಪ್ರಮಾಣದ ಸ್ಫೋಟದ ಶಬ್ಧ ಉಂಟಾಗಿದೆ. ವಿಮಾನ ಭೂಮಿಗೆ ಬಹಳ ಹತ್ತಿರದಲ್ಲಿಯೇ ಎರಡು-ಮೂರು ಸುತ್ತು ಪಲ್ಟಿ ಹೊಡೆದಿದೆ. ಈ ವೇಳೆ ಇಬ್ಬರು ಪೈಲಟ್‍ಗಳು ಪ್ಯಾರಚೂಟ್‍ನಿಂದ ಕೆಳಗೆ ಜಿಗಿಯುತ್ತಿರುವುದನ್ನು ಗ್ರಾಮಸ್ಥರು ಕಣ್ಣಾರೆ ಕಂಡಿದ್ದಾರೆ. ಕೆಲವೇ ಕ್ಷಣದಲ್ಲಿ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಕೆಳಗುರುಳಿದೆ. ಕೂಡಲೇ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ, ನೋಡಿದಾಗ ವಿಮಾನ ಸಂಪೂರ್ಣವಾಗಿ ಸುಟ್ಟು ಹೊಗೆ ಬರುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಮಾನದ ಭಾಗಗಳು ಚೂರು ಚೂರಾಗಿ ಬಿದ್ದಿದ್ದು, ಕೆಲವು ಅವಶೇಷಗಳು ಹೊತ್ತಿ ಉರಿದಿವೆ. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಕಿಲೋ ಮೀಟರ್ ದೂರ ಪತ್ತೆ: ವಿಮಾನ ಪತನಗೊಂಡ ಸುಮಾರು ಒಂದು ಕಿ.ಮೀ. ದೂರದಲ್ಲಿ ಪೈಲೆಟ್‍ಗಳಿಬ್ಬರು ಪ್ಯಾರಚೂಟ್ ಮೂಲಕ ಭೂ ಸ್ಪರ್ಶ ಮಾಡಿದ್ದರು. ಇವರನ್ನು ಪತ್ತೆ ಹಚ್ಚಿದ ಸ್ಥಳೀಯರು, ಇವರ ನೆರವಿಗೆ ಮುಂದಾದರು. ಅವರಿಗೆ ಆಗಿದ್ದ ಸಣ್ಣಪುಟ್ಟ ಗಾಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರಾದರೂ ಪೈಲಟ್‍ಗಳು ಆಸ್ಪತ್ರೆಗೆ ತೆರಳಲು ನಿರಾಕರಿಸಿದರು. ನಂತರ ಸ್ವಲ್ಪ ಸಮಯದ ಬಳಿಕ ಬೆಂಗಳೂರಿನಿಂದ ವಾಯುಸೇನೆಯ ಮೂರು ಹೆಲಿಕಾಪ್ಟರ್ ಸ್ಥಳಕ್ಕೆ ಬಂದು, ಪೈಲಟ್‍ಗಳನ್ನು ಕರೆದೊಯ್ದವು. ವಿಮಾನ ಪತನಗೊಂಡಿರುವ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ವಾಯುಸೇನೆಯ ಅಧಿಕಾರಿಗಳು ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಕಲೆ ಹಾಕಿದರು.

ವಿಮಾನವೊಂದು ಪತನಗೊಂಡ ವಿಚಾರ ತಿಳಿದು ಭೋಗಾಪುರ ಮತ್ತು ಸಪ್ಪಯ್ಯನಪುರ ಸುತ್ತಮುತ್ತಲಿನ ಸಾವಿರಾರು ಜನರು ಘಟನಾ ಸ್ಥಳಕ್ಕೆ ದೌಡಾಯಿಸಿದರು. ವಿಮಾನದ ಅವಶೇಷಗಳನ್ನು ಕುತೂಹಲದಿಂದ ವೀಕ್ಷಿಸಿದರು. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಅವಶೇಷಗಳನ್ನು ಕೆಲವರು ಕುತೂಹಲದಿಂದ ಮುಟ್ಟಿದರು. ಈ ವೇಳೆ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸಪಡಬೇಕಾಯಿತು. ಸ್ಥಳಕ್ಕೆ ಎಡಿಸಿ ಕ್ಯಾತ್ಯಾಯಿನಿದೇವಿ, ತಹಸೀಲ್ದಾರ್ ಬಸವರಾಜು, ಡಿವೈಎಸ್‍ಪಿ ಪ್ರಿಯದರ್ಶಿ ಸಾಣಿಕೊಪ್ಪ, ವಾಯುಸೇನೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದರು.

Translate »