ಮೈಸೂರು

ದಸರಾ ಗಜಪಡೆ ಮಾವುತರು, ಕಾವಾಡಿಗಳ ಕುಟುಂಬ ಸದಸ್ಯರ ಆರೋಗ್ಯ ತಪಾಸಣೆ

September 26, 2018

ಮೈಸೂರು: ದಸರಾ ಗಜಪಡೆಯೊಂದಿಗೆ ಮೈಸೂರು ಅರಮನೆಯಲ್ಲಿ ಬೀಡುಬಿಟ್ಟಿರುವ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬದವರಿಗೆ ಮೈಸೂರು ಕನ್ನಡ ವೇದಿಕೆ, ಅನಘ ಆಸ್ಪತ್ರೆ ಹಾಗೂ ನೆರವು ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.

ಅರಮನೆ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅನಘ ಆಸ್ಪತ್ರೆ ವೈದ್ಯ ಡಾ.ಮಹೇಶ್ ನೇತೃತ್ವದಲ್ಲಿ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬದವರಿಗೆ ತಪಾಸಣೆ ನಡೆಸಲಾಯಿತು. ಬಿಪಿ, ಮಧುಮೇಹ ಸೇರಿದಂತೆ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಿ, ಆರೋಗ್ಯ ಕಾಯ್ದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಲಾಯಿತು. ಜೊತೆಗೆ ಕೆಲ ಔಷಧಗಳನ್ನು ಉಚಿತವಾಗಿ ನೀಡಲಾಯಿತು.
ಮೈಸೂರು ಕನ್ನಡ ವೇದಿಕೆ ನೇತೃತ್ವದಲ್ಲಿ ಪ್ರತಿ ವರ್ಷ ದಸರಾ ಗಜಪಡೆಯ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ತಪಾಸಣೆ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ 8ನೇ ವರ್ಷದ ಶಿಬಿರ ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ತಿಳಿಸಿದರು. ಸಾಹಿತಿ ಬನ್ನೂರು ಕೆ.ರಾಜು, ಹೊಸಹುಂಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉತ್ತನಹಳ್ಳಿ ಶಿವಣ್ಣ ಮತ್ತಿತರರು ಹಾಜರಿದ್ದರು.

Translate »