ಮೈಸೂರು ಅರಮನೆ ಆವರಣಕ್ಕೆ ಬಂದ  ದಸರಾ ಗಜಪಡೆ 2ನೇ ತಂಡ
ಮೈಸೂರು

ಮೈಸೂರು ಅರಮನೆ ಆವರಣಕ್ಕೆ ಬಂದ  ದಸರಾ ಗಜಪಡೆ 2ನೇ ತಂಡ

September 15, 2018

ಮೈಸೂರು: ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿರುವ ಬಲರಾಮ ನೇತೃತ್ವದ ಗಜಪಡೆಯ 2ನೇ ತಂಡವನ್ನು ಅರಮನೆ ಆವರಣಕ್ಕೆ ಸಾಂಪ್ರದಾಯಿಕವಾಗಿ ಶುಕ್ರವಾರ ಸ್ವಾಗತಿಸಲಾಯಿತು. ಅರಮನೆ ಜಯಮಾರ್ತಾಂಡ ದ್ವಾರದ ಬಳಿ ಡಿಸಿಎಫ್ ಸಿದ್ರಾಮಪ್ಪ ಚಳ್ಕಾಪುರೆ ಸೇರಿದಂತೆ ಮತ್ತಿತರೆ ಅಧಿಕಾರಿಗಳು ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು.

ಈ ವೇಳೆ ಎಡಿಸಿ ಯೋಗೇಶ್, ಅರಮನೆ ಮಂಡಳಿ ಉಪ ನಿರ್ದೇ ಶಕ ಟಿ.ಎಸ್.ಸುಬ್ರಹ್ಮಣ್ಯ, ಆನೆ ವೈದ್ಯ ನಾಗರಾಜು ಸೇರಿದಂತೆ ಮತ್ತಿತರೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ವೇಳೆ ಆರ್ಚಕರಾದ ಪ್ರಹ್ಲಾದ ರಾವ್ ನೇತೃತ್ವದಲ್ಲಿ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು. ಈ ವೇಳೆ ವಾದ್ಯವೃಂದ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತು. ನಂತರ ಡಿಸಿಎಫ್ ಸಿದ್ರಾಮಪ್ಪ ಚಳ್ಕಾಪುರೆ ಮಾತನಾಡಿ, ಈಗಾಗಲೇ ಅರ್ಜುನ ನೇತೃತ್ವದ ಗಜಪಡೆಯ ಮೊದಲ ತಂಡ ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದು, ಇಂದು 2ನೇ ತಂಡದ ಅಭಿಮನ್ಯು, ಬಲರಾಮ, ಕಾವೇರಿ, ವಿಜಯ, ದ್ರೋಣ, ಪ್ರಶಾಂತ 6 ಆನೆಗಳು ಅರಮನೆ ಆವರಣ ಪ್ರವೇಶಿಸಿವೆ.

ಈಗಾಗಲೇ ಮೊದಲ ತಂಡದ ಆನೆಗಳಿಗೆ ಭಾರ ಹೊರಿ ಸುವ ತಾಲೀಮು ಆರಂಭವಾಗಿದ್ದು, ಈ ಆನೆಗಳಿಗೂ ನಾಳೆಯೇ ಆರೋಗ್ಯ ತಪಾ ಸಣೆ ಮಾಡಿಸಿ, ತಾಲೀಮು ಆರಂಭಿಸಲಾಗುವುದು ಎಂದರು. ಎಡಿಸಿ ಯೋಗೇಶ್ ಮಾತನಾಡಿ, ಜಿಲ್ಲಾಡಳಿತದ ವತಿಯಿಂದ ಆನೆ ಮತ್ತು ಮಾವುತರಿಗೆ ಈಗಾಗಲೇ ವಿಮೆ ಮಾಡಿಸಲಾಗಿದೆ. ಜತೆಗೆ ಟೆಂಟ್ ಶಾಲೆಗಳನ್ನು ಆರಂಭಿಸಲಾಗುವುದು ಎಂದರು.

ಆನೆ ವೈದ್ಯ ನಾಗರಾಜು ಮಾತನಾಡಿ, 2ನೇ ತಂಡದಲ್ಲಿ 6 ಆನೆಗಳನ್ನು ವಿದ್ಯುಕ್ತವಾಗಿ ಬರಮಾಡಿಕೊಂಡಿದ್ದು, ನಾಳೆಯೇ ತೂಕ ಮಾಡಿಸಿ, ತಾಲೀಮಿನಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.

ಆನೆಯೊಂದಿಗೆ ಸೆಲ್ಫಿ: ಆನೆಗಳು ಜಯಮಾರ್ತಾಂಡ ದ್ವಾರದ ಬಳಿ ಬರುತ್ತಿದ್ದಂತೆ ಅರಮನೆ ವೀಕ್ಷಿಸಲು ಆಗಮಿಸಿದ್ದ ನೂರಾರು ಮಂದಿ ಪ್ರವಾಸಿಗರು ದ್ವಾರದ ಬಳಿ ದೌಡಾಯಿಸಿ ಆನೆಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು, ಖುಷಿಪಟ್ಟರು.

ಗಜಪಡೆ 2ನೇ ತಂಡದ ಪರಿಚಯ

ಸೂರು: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆ 2ನೇ ತಂಡ ಶುಕ್ರವಾರ ಅರಮನೆ ಆವರಣ ಪ್ರವೇಶಿಸಿತು.

ಈ ತಂಡದಲ್ಲಿ ದಸರಾ ಮಹೋತ್ಸವದಲ್ಲಿ 1999 ರಿಂದ 2011ರವರೆಗೆ ಸತತ 13 ಬಾರಿ ಚಿನ್ನದ ಅಂಬಾರಿ ಯನ್ನು ಯಶಸ್ವಿಯಾಗಿ ಹೊತ್ತು ಸೈ ಎನಿಸಿಕೊಂಡಿದ್ದ 60 ವರ್ಷದ ಬಲರಾಮ(ಮಾವುತ ತಿಮ್ಮ, ಕಾವಾಡಿ ಪಾಪು), 52 ವರ್ಷದ ಅಭಿಮನ್ಯು(ಮಾವುತ ವಸಂತ, ಕಾವಾಡಿ ರಾಜು), 40 ವರ್ಷದ ಕಾವೇರಿ(ಮಾವುತ ದೋಬಿ, ಕಾವಾಡಿ ಜೆ.ರಂಜನ್), 61 ವರ್ಷದ ವಿಜಯ (ಮಾವುತ ಭೋಜಪ್ಪ, ಕಾವಾಡಿ ಬಿ.ಪಿ.ಭರತ್), 37 ವರ್ಷದ ದ್ರೋಣ(ಮಾವುತ ಗುಂಡ, ಕಾವಾಡಿ ರವಿ) ಹಾಗೂ 62 ವರ್ಷದ ಪ್ರಶಾಂತ(ಮಾವುತ ಚಿನ್ನಪ್ಪ, ಕಾವಾಡಿ ರಾಜು) ಇದ್ದಾರೆ.

Translate »