ಬೆಳಗಾವಿ ವಿಭಜಿಸಿ ಚಿಕ್ಕೋಡಿ, ಗೋಕಾಕ್, ಬೆಳಗಾವಿ ಜಿಲ್ಲೆ ಮಾಡಲು ಸಿಎಂ ನಿರ್ಧಾರ
ಮೈಸೂರು

ಬೆಳಗಾವಿ ವಿಭಜಿಸಿ ಚಿಕ್ಕೋಡಿ, ಗೋಕಾಕ್, ಬೆಳಗಾವಿ ಜಿಲ್ಲೆ ಮಾಡಲು ಸಿಎಂ ನಿರ್ಧಾರ

September 15, 2018

ಬೆಂಗಳೂರು:  ಬೆಳಗಾವಿ ಜಿಲ್ಲೆಯ ಗೊಂದಲಮಯ ರಾಜಕಾರಣಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಿಲ್ಲೆಯನ್ನು ಮೂರು ಭಾಗಗಳನ್ನಾಗಿ ಬೇರ್ಪಡಿಸುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರ ರೂಪಿಸಿದ್ದಾರೆ.

ಬೆಳಗಾವಿ, ಚಿಕ್ಕೋಡಿ ಮತ್ತು ಗೋಕಾಕ್ ಅನ್ನು ಜಿಲ್ಲಾ ಕೇಂದ್ರಗಳನ್ನಾಗಿ ಘೋಷಿಸಲು ತೀರ್ಮಾನಿಸಿ, ಕಂದಾಯ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದಾರೆ.

ಈ ಸಮಿತಿ ವರದಿ ನಂತರ ಮೂರು ಜಿಲ್ಲೆಗಳನ್ನಾಗಿ ವಿಭಜಿಸಿ ಬೆಳಗಾವಿ, ಗೋಕಾಕ್ ಮತ್ತು ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಗಳಾಗಿ ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್ 1ರಂದು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ತಿಳಿದುಬಂದಿದೆ.
ಆಡಳಿತ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವುದರ ಜೊತೆಗೆ ರಾಜ್ಯ ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸುತ್ತಿರುವ ಜಾರಕಿಹೊಳಿ ಸಹೋದರರ ಅನಭಿಷಿಕ್ತ ಸಾಮ್ರಾಜ್ಯಕ್ಕೆ ಕಡಿವಾಣ ಹಾಕಲಿದ್ದಾರೆ. ರಾಜಧಾನಿ ಬೆಂಗಳೂರು ಹೊರತುಪಡಿಸಿ ಜನಸಂಖ್ಯೆ ಹಾಗೂ ಕ್ಷೇತ್ರವಾರುವಿನಲ್ಲಿ ಬೆಳಗಾವಿ ರಾಜ್ಯದಲ್ಲೇ 2ನೇ ಅತೀ ದೊಡ್ಡ ಜಿಲ್ಲೆಯಾಗಿದೆ.

ಬೆಂಗಳೂರಿನಲ್ಲಿ 28 ವಿಧಾನಸಭಾ ಕ್ಷೇತ್ರಗಳಿದ್ದರೆ, ಬೆಳಗಾವಿ ಜಿಲ್ಲೆ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಬೆಳಗಾವಿ-6, ಚಿಕ್ಕೋಡಿ-6 ಹಾಗೂ ಗೋಕಾಕ್-6 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ ಮೂರು ಜಿಲ್ಲೆಗಳಾಗಲಿವೆ.

ಈ ಹಿಂದೆಯೇ ಬೆಳಗಾವಿ ವಿಭಜಿಸುವ ಬೇಡಿಕೆ ಇತ್ತಾದರೂ, ಮರಾಠಿಗರ ಪ್ರಾಬಲ್ಯ ನಿಯಂತ್ರಿಸುವ ಉದ್ದೇಶದಿಂದ ಜಿಲ್ಲೆ ವಿಭಜನೆ ಸರಿಯಲ್ಲ ಎಂದು ಕನ್ನಡಪರ ಸಂಘಟನೆಗಳು, ಸಾಹಿತಿಗಳು ಸೇರಿದಂತೆ ಮತ್ತಿತರರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು.

Translate »