ಬೆಳಗಾವಿ ಭಿನ್ನಮತ ಒಂದು ಸಣ್ಣ ಸಮಸ್ಯೆ: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಭಿಮತ
ಮೈಸೂರು

ಬೆಳಗಾವಿ ಭಿನ್ನಮತ ಒಂದು ಸಣ್ಣ ಸಮಸ್ಯೆ: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಭಿಮತ

September 15, 2018

ಬೆಂಗಳೂರು: ಬೆಳಗಾವಿಯ ಜಾರಕಿ ಹೊಳಿ ಸಹೋದರರ ಭಿನ್ನಮತ ಅಂತಹ ದೊಡ್ಡ ಸಮಸ್ಯೆಯೇನೂ ಆಗಿಲ್ಲ. ಆಂತರಿಕವಾಗಿ ಯಾವುದೇ ಭಿನ್ನಮತ ಇಲ್ಲ. ಸಣ್ಣ ಸಮಸ್ಯೆಯನ್ನು ಗಂಭೀರ ಸಮಸ್ಯೆಯೆಂದು ಬಿಂಬಿಸಲಾಗಿದೆಯಷ್ಟೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.

ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಜೊತೆ ಎರಡೂ ತಾಸಿಗೂ ಹೆಚ್ಚು ಸುದೀರ್ಘ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಪೋಲಕಲ್ಪಿತ ಸುದ್ದಿಗಳಿಗೆ ಜಾಸ್ತಿ ಒತ್ತು ಕೊಡಲಾಗಿದೆ. ಅದನ್ನು ಹೊರತುಪಡಿಸಿದರೆ ಯಾವುದೇ ಅಂತಹ ಗಂಭೀರ ಸಮಸ್ಯೆಗಳಿಲ್ಲ ಎಂದರು.

ಬೆಳಗಾವಿಯಲ್ಲಿ ಪಕ್ಷದ ಕಚೇರಿ ಕಟ್ಟಲು ಡಿ.ಕೆ.ಶಿವಕುಮಾರ್ ಅವರಿಗೆ ಜವಾಬ್ದಾರಿ ವಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಅಲ್ಲಿಗೆ ಹೋಗಿ-ಬಂದು ಮಾಡುತ್ತಿದ್ದರೆ ವಿನಃ, ಬೆಳಗಾವಿ ರಾಜಕೀಯದಲ್ಲಿ ಕೈ ಹಾಕಿಲ್ಲ ಎಂದು ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.

ಶಾಸಕರ ಕ್ಷೇತ್ರಗಳಿಗೆ ಅನುದಾನ ತಡವಾಗಿರಬಹುದು. ಅದನ್ನು ಸರಿಪಡಿಸುತ್ತೇವೆ. ಶೀಘ್ರವಾಗಿ ಈ ವಿಚಾರದಲ್ಲಿ ಸರ್ಕಾರ ಸ್ಪಂದಿಸಲಿದೆ. ಅದರಲ್ಲಿ ಯಾವುದೇ ತೊಂದರೆಯಿಲ್ಲ ಎಂದರು.

ಪಕ್ಷದ ಬೆಳವಣಿಗೆಯಂತಹ ಸಮಸ್ಯೆಯಿದ್ದರೆ ಅದನ್ನು ನಾವು ಸರಿಪಡಿಸುತ್ತೇವೆ. ಇದೆಲ್ಲ ಪಕ್ಷದ ಆಂತರಿಕ ವಿಚಾರ. ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಕರೆದು ಮಾತನಾಡಿದ್ದೇನೆ. ಕ್ಷೇತ್ರದಲ್ಲಿನ ಕೆಲವು ಬೆಳವಣಿಗೆಗಳ ಬಗ್ಗೆ ಬೇಸರವಾಗಿದೆ. ಆದರೆ ನೀವು ಅಂದುಕೊಂಡ ಹಾಗೆ ಯಾವುದೇ ಬೆಳವಣಿಗೆ ಆಗಿಲ್ಲ. ಯಾವೆಲ್ಲ ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಎಂಬ ಸುದ್ದಿಯಾಗಿದೆಯೋ ಅವರೆಲ್ಲರೊಂದಿಗೂ ನಾನು ಮಾತನಾಡಿದ್ದೇನೆ ಎಂದು ವಿವರಿಸಿದರು.

ಸಮನ್ವಯ ಸಮಿತಿ ಅಧ್ಯಕ್ಷ, ಶಾಸಕಾಂಗ ಪಕ್ಷದ ನಾಯಕರೂ ಆದ ಸಿದ್ದರಾಮಯ್ಯನವರು ವಿದೇಶದಿಂದ ಹಿಂತಿರುಗಿದ ನಂತರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಯಾವ ಸಮುದಾಯದವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು, ಯಾವ ಭಾಗದವರಿಗೆ ಆದ್ಯತೆ ನೀಡಬೇಕು ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಎಲ್ಲರಿಗೂ ಸಂಪುಟ ಸೇರುವ ಆಸೆ ಇರುತ್ತದೆ. ಹಲವರು ಹಿರಿಯರು ಕೂಡ ಆಕಾಂಕ್ಷಿಗಳಿದ್ದಾರೆ. ಸಂಪುಟ ಸರ್ಕಸ್ ಇದ್ದೇ ಇರುತ್ತದೆ. ಇದು ಸಹಜ ಕೂಡ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್, ಜಾರಕಿಹೊಳಿ ಸಹೋದರರು ನನಗೆ ಉತ್ತಮ ಸ್ನೇಹಿತರು. ಕಷ್ಟಕಾಲದಲ್ಲಿ ಅವರ ಜತೆ ಕಲ್ಲು ಬಂಡೆಯಂತೆ ನಿಂತಿದ್ದೇನೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾಳೆ ಖುದ್ದಾಗಿ ಅವರ ಮನೆಗೆ ಭೇಟಿ ನೀಡುತ್ತೇನೆ ಎಂದರು.

ಜಾರಕಿಹೊಳಿ ಸಹೋದರರು ಮತ್ತು ನಾನು ಸುದೀರ್ಘ ಕಾಲದ ಸ್ನೇಹಿತರು. ಎಂಥೆಂತ ಸಮಯದಲ್ಲೂ ಅವರ ಜತೆ ಕಲ್ಲು ಬಂಡೆಯಂತೆ ನಿಂತಿದ್ದೇನೆ. ಅವರ ಜತೆ ಮಾತುಕತೆ ನಡೆಸುತ್ತೇನೆ. ಜಾರಕಿಹೊಳಿ ಸಹೋದರರು ಯಾವುದೋ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ನಾನು ರಾಷ್ಟ್ರಪತಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಗಾವಿಗೆ ಹೋಗುತ್ತಿದ್ದೇನೆ. ಆಗ ಜಾರಕಿಹೊಳಿ ಸಹೋದರರ ಮನೆಗೆ ಭೇಟಿ ನೀಡುತ್ತೇನೆ ಎಂದರು.

ನನ್ನ ಹಾಗೂ ಜಾರಕಿಹೊಳಿ ಸಹೋದರರ ಸಂಬಂಧ ನಿಮಗೇನು ಗೊತ್ತು, ಅದು ಭಗವಂತ ಮತ್ತು ಭಕ್ತರ ಸಂಬಂಧದಂತಿದೆ. ಎಲ್ಲವನ್ನೂ ಬಿಡಿಸಿ ಹೇಳಲು ಸಾಧ್ಯವಿಲ್ಲ.

ಬಿಜೆಪಿಯವರು ಕಾಂಗ್ರೆಸ್ಸಿಗರನ್ನು ಸಂಪರ್ಕಿಸುತ್ತಿರುವ ಬಗ್ಗೆ ಉಪಮುಖ್ಯಮಂತ್ರಿ ಅವರ ಬಳಿ ಮಾಹಿತಿ ಇದೆ. ಅದನ್ನು ಆಧರಿಸಿ ಅವರು ಆದಾಯ ತೆರಿಗೆ ಇಲಾಖೆ ಮತ್ತು ಎಸಿಬಿಗೆ ದೂರು ಕೊಡುವುದಾಗಿ ಹೇಳಿದ್ದಾರೆ. ಸದ್ಯಕ್ಕೆ ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ಸಮಯ ಬಂದಾಗ ಹೇಳುತ್ತೇನೆ ಎಂದು ತಿಳಿಸಿದರು.

ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹಲವಾರು ಮಂತ್ರಿಗಳು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಶಾಸಕರಾದ ರಂಗನಾಥ್, ಮುನಿರತ್ನ ಅವರು ನಮ್ಮನ್ನು ಭೇಟಿ ಮಾಡಿದ್ದಾರೆ. ಕಾಂಗ್ರೆಸ್‍ನ 78ಮಂದಿ ಶಾಸಕರು ಒಂದು ಕುಟುಂಬ ಇದ್ದಂತೆ ಎಲ್ಲರೂ ಒಟ್ಟಾಗಿದ್ದೇವೆ. ಕೆಲವರ ಮೇಲೆ ರಾಜಕೀಯ ಒತ್ತಡಗಳು ಬರುತ್ತಿವೆ ಎಂದು ಹೇಳಿದರು.

ಬಿಜೆಪಿ ಶಾಸಕರು ಕಾಂಗ್ರೆಸ್ ನಾಯಕರ ಜತೆ ಸಂಪರ್ಕದಲ್ಲಿರುವ ಬಗ್ಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಲು ನಿರಾಕರಿಸಿದರು. ಇಂದಿನ ಸಭೆಯಲ್ಲಿ ಮುಂದಿನ ರಾಜಕೀಯ ಬೆಳವಣಿಗೆ ಬಗ್ಗೆ ಹಾಗೂ ಇತ್ತೀಚೆಗೆ ನನ್ನ ಕುರಿತು ಕೇಳಿಬಂದ ಮಾತುಗಳ ಬಗ್ಗೆಯೂ ಚರ್ಚಿಸಲಾಯಿತು ಎಂದರು.

Translate »