ಕೊಲೆ, ಸುಲಿಗೆ, ಲಾಟರಿ, ಇಸ್ಪೀಟ್, ಸರ್ಕಾರಿ ಕಡತ ಸುಡುವ ದಂಧೆಕೋರ ಮೂಲಕ ನನ್ನ ಸರ್ಕಾರ ಪತನಕ್ಕೆ ಬಿಜೆಪಿ ಪ್ರಯತ್ನ
ಮೈಸೂರು

ಕೊಲೆ, ಸುಲಿಗೆ, ಲಾಟರಿ, ಇಸ್ಪೀಟ್, ಸರ್ಕಾರಿ ಕಡತ ಸುಡುವ ದಂಧೆಕೋರ ಮೂಲಕ ನನ್ನ ಸರ್ಕಾರ ಪತನಕ್ಕೆ ಬಿಜೆಪಿ ಪ್ರಯತ್ನ

September 15, 2018

ಬೆಂಗಳೂರು: ಕೊಲೆ, ಸುಲಿಗೆ, ಲಾಟರಿ, ಇಸ್ಪೀಟ್ ಹಾಗೂ ಸರ್ಕಾರಿ ಕಡತಗಳನ್ನು ಸುಟ್ಟು ದಂಧೆ ನಡೆಸುವವರ ಮೂಲಕ ನನ್ನ ಸರ್ಕಾರ ಪತನಗೊಳಿಸಲು ರಾಜ್ಯ ಬಿಜೆಪಿ ನಾಯಕರು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಬಲವಾದ ಆರೋಪ ಮಾಡಿದ್ದಾರೆ.

ಈ ಕಿಂಗ್‍ಪಿನ್‍ಗಳು ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಅಕ್ರಮವಾಗಿ ನೂರಾರು ಕೋಟಿ ರೂ. ಸಂಗ್ರಹ ಮಾಡುತ್ತಿದ್ದಾರೆ. ಇವರು ಯಾರು ಎಂಬ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇದೆ. ಇಂತಹ ದಗಾಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ಈ ದಂಧೆಕೋರರ ಹಿಂದೆ ಹಲವು ಬಿಜೆಪಿ ನಾಯಕರು ಬೆಂಬಲಕ್ಕೆ ನಿಂತು ಇವರ ಮೂಲಕ ಆಮಿಷ ಮತ್ತು ಬೆದರಿಕೆಗಳನ್ನು ಒಡ್ಡಿ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ, ಇವರ ವಿರುದ್ಧ ದೂರು ದಾಖಲಿಸುವುದಾಗಿ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಇಲಾಖಾ ಸಭೆಗಳ ಮಧ್ಯೆಯೇ ಸುದ್ದಿಗಾರರ ಬಳಿ ಬಂದು ಸ್ವಯಂ ಪ್ರೇರಿತವಾಗಿ ಈ ಮಾಹಿತಿ ಹೊರಹಾಕಿದರು. ನನ್ನ ಸರ್ಕಾರ ಉಳಿಸಿಕೊಳ್ಳಲು ನಾನು ಏನು ಬೇಕಾದರೂ ಮಾಡುತ್ತೇನೆ, ಬಿಜೆಪಿಯವರು ಮೊದಲು ನಮ್ಮವರನ್ನು ಟಚ್ ಮಾಡಲಿ, ನಂತರ ನಾವು ಏನು ಮಾಡುತ್ತೇವೆ ಎಂಬುದನ್ನು ತೋರಿಸುತ್ತೇವೆ.

ಬಿಜೆಪಿಯವರಿಗೆ ಅಭಿವೃದ್ಧಿ ಬೇಕಿಲ್ಲ, ಅವರು ಮಾಡುತ್ತಾರೆ ಎಂದು ನಾನು ಮಾಡಲ್ಲ, ಸರ್ಕಾರ ಉಳಿಸಿಕೊಳ್ಳುವ ಸಮಯ ಬಂದಾಗ ನನ್ನ ರಾಜಕೀಯ ತೋರಿಸುತ್ತೇನೆ ಎಂದು ಸವಾಲು ಹಾಕಿದರು. ಆಡಳಿತಕ್ಕೆ ಚುರುಕು ಮುಟ್ಟಿಸುವ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಲು ಮತ್ತು ರೌಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸೋಮವಾರದಿಂದ ಅಧಿಕಾರಿಗಳ ಸಭೆ ನಡೆಸುತ್ತೇನೆ.

ಅಷ್ಟೇ ಅಲ್ಲ ಆಯಕಟ್ಟಿನ ಸ್ಥಳಗಳಲ್ಲಿನ ಕೆಲವು ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಇಂಗಿತ ವ್ಯಕ್ತಪಡಿಸಿದರು. ಇದೆಲ್ಲದರ ನಡುವೆ ಮೈತ್ರಿ ಸರ್ಕಾರದಲ್ಲಿ ಪಾಲುದಾರರಾಗಿರುವ ಎಲ್ಲಾ ಶಾಸಕರು ನನ್ನ ಜೊತೆ ಇದ್ದಾರೆ, ಬಿಜೆಪಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ.

ಅವರು ರೆಸಾರ್ಟ್ ಆದರೂ ರೆಡಿ ಮಾಡಲಿ, ಗುಡಿಸಲಾದರೂ ರೆಡಿ ಮಾಡಲಿ, ನನಗೂ ಬಿಜೆಪಿಯ ಶಾಸಕ ಸ್ನೇಹಿತರಿದ್ದಾರೆ, ನಾನೂ ಆ ಪಕ್ಷದ ಜೊತೆ ಸರ್ಕಾರ ಮಾಡಿದ್ದೆ ಅಲ್ಲವೇ. ಕಿಂಗ್‍ಪಿನ್‍ಗಳನ್ನು ಇಟ್ಟುಕೊಂಡು ವ್ಯರ್ಥ ಕಸರತ್ತು ಮಾಡುತ್ತಿದ್ದಾರೆ, ನಾನು ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ.

ಮಾಧ್ಯಮದಲ್ಲಿ ಡೆಡ್‍ಲೈನ್ ಡೇಟ್‍ಗಳು ಬರುತ್ತಿವೆ. ಅದು ದಿನೇದಿನೆ ಮುಂದೆ ಹೋಗಬಹುದು. ಮೊದಲು ಸೆಪ್ಟೆಂಬರ್ 1 ಎಂದರು, ನಂತರ ಗಣೇಶ ಹಬ್ಬ ಎಂದರು, ಈಗ ಅಕ್ಟೋಬರ್ 2ಕ್ಕೆ ಡೆಡ್ ಲೈನ್ ಮಾಡಿದ್ದಾರೆ.

ಪಂಚಾಂಗಕ್ಕಿಂತ ಮೊದಲು ದಿನಾಂಕಗಳನ್ನು ಗುರುತಿಸಿ ಮಾಧ್ಯಮಗಳಿಗೆ ಹರಿದುಬಿಟ್ಟು ಜನರನ್ನು ದಿಕ್ಕು ತಪ್ಪಿಸುವ ಮತ್ತು ಸರ್ಕಾರ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಬಿಂಬಿಸುವ ಕೆಲಸವೂ ಒಂದೆಡೆ ನಡೆಯುತ್ತಿದೆ.

ಗೃಹ ಇಲಾಖೆ ಹೊಣೆ ಹೊತ್ತ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರನ್ನು ಜೆಪಿ ನಗರದ ತಮ್ಮ ಖಾಸಗಿ ನಿವಾಸಕ್ಕೆ ಕರೆಸಿಕೊಂಡು ಇಬ್ಬರೂ ಗಣೇಶ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡಿದ್ದಲ್ಲದೆ, ಸರ್ಕಾರ ಉಳಿಸಲು ಮಾಡಬೇಕಾದ ಕಾರ್ಯತಂತ್ರಗಳ ಬಗ್ಗೆಯೂ ಸಮಾಲೋಚಿಸಿದರು.

ಈ ಸಮಾಲೋಚನೆ ನಂತರವೇ ಇಂದು ಮುಖ್ಯಮಂತ್ರಿ ಅವರು ಆಪರೇಷನ್ ಕಮಲದ ಹಿಂದಿನ ಕಿಂಗ್‍ಪಿನ್‍ಗಳ ಬಂಡವಾಳವನ್ನು ಮಾಧ್ಯಮದ ಮುಂದೆ ಬಹಿರಂಗ ಪಡಿಸಿದರು. ಮುಖ್ಯಮಂತ್ರಿ ಅವರು ಹೇಳಿರುವಂತೆ ಮತ್ತು ಗೃಹ ಇಲಾಖೆ ಉನ್ನತ ಮೂಲಗಳ ಪ್ರಕಾರ ಐದು ಮಂದಿ ಕಿಂಗ್‍ಪಿನ್‍ಗಳು ಇದರ ಹಿಂದಿದ್ದಾರೆ.

ಅವರ ಪರಿಚಯ ಇಲ್ಲಿದೆ

ಉದಯ್ ಗೌಡ ಎಂಬ ವ್ಯಕ್ತಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ಫೋರ್ಜರಿ ಪ್ರಕರಣ ದಾಖಲಾಗಿದೆ. ಈತ ಗೋವಾ ಮತ್ತು ಶ್ರೀಲಂಕಾದಲ್ಲಿ ಕ್ಯಾಸಿನೋ ಗ್ಯಾಂಬ್ಲಿಂಗ್ ನಡೆಸುತ್ತಾನೆ, ನಗರದ ರೆಸಿಡೆನ್ಸಿ ರಸ್ತೆಯಲ್ಲಿ ಗ್ಯಾಂಬ್ಲಿಂಗ್ ಕ್ಲಬ್ ಇಟ್ಟುಕೊಂಡು ಆಂಧ್ರ, ಮಹಾರಾಷ್ಟ್ರದಿಂದ ಉದ್ಯಮಿಗಳನ್ನು ಕರೆ ತಂದು ಇಸ್ಪೀಟ್ ಆಡಿಸಿ, ಮೀಟರ್ ಬಡ್ಡಿ ದಂಧೆ ನಡೆಸುತ್ತಾನೆ. ಇತ್ತೀಚೆಗೆ ಇವನ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದಾಗ ಏಳು ಕೋಟಿ ರೂ. ದೊರೆತಿದೆ.

ಹೊಂಬಾಳೆ ವಿಜಿ, ಈತ ಗುತ್ತಿಗೆದಾರ, 2008ರಿಂದ 2010ರವರೆಗೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಬಿಎಂಪಿ ಹಗರಣದ ಪ್ರಮುಖ ಸೂತ್ರಧಾರಿ ಮತ್ತು ಆರೋಪಿ. ಮೈಸೂರು ಮತ್ತು ಇತರ ಕಡೆಗಳಲ್ಲಿ 300 ಕೋಟಿ ರೂ. ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ.

ಫೈಟರ್ ರವಿ, ಈತ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್. ಇವನ ಮೇಲೆ ಅಕ್ರಮ ಶಸ್ತ್ರಾಸ್ತ್ರ ಅಡಿ ಮಡಿವಾಳ ಮತ್ತು ವೈಯಾಲಿಕಾವಲ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇವನ ಮೇಲೆ ಕ್ರಿಕೆಟ್ ಬೆಟ್ಟಿಂಗ್‍ಗೆ ಸಂಬಂಧಿಸಿದಂತೆ ಬೆಂಗಳೂರು ನಗರದಲ್ಲಿ ಆನೇಕ ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಸೂತ್ರಧಾರ ಹಾಗೂ ಕಿಂಗ್‍ಪಿನ್, 100ರಿಂದ 150 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಸಂಪಾದಿಸಿದ್ದು, ಜಾರಿ ನಿರ್ದೇಶನಾಲಯದ ತನಿಖೆಗೆ ಒಳಪಟ್ಟಿರುತ್ತಾನೆ.

ಜಿಮ್ ಸೋಮ ಆಲಿಯಾಸ್ ನಾರ್ವೆ ಸೋಮ. ಈತನೂ ಅಪರಾಧಿ ಪ್ರವೃತ್ತಿ ಉಳ್ಳವ. ಈ ಹಿಂದೆ ತಿಲಕ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿ. ಇದೇ ಪ್ರಕರಣದಲ್ಲಿ ಜೈಲೂ ಸೇರಿ ಬಂದಿದ್ದ, ಈತನನ್ನು ಈ ಹಿಂದೆ ರೌಡಿಶೀಟರ್ ಪಟ್ಟಿಗೆ ಸೇರಿಸಲಾಗಿತ್ತು. 10ರಿಂದ 15% ಮೀಟರ್ ಬಡ್ಡಿ ವಸೂಲಿ ಮಾಡುತ್ತಾನೆ. ಇತ್ತೀಚೆಗೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಣೇಶ್ ಎಂಬ ಉದ್ಯಮಿ ತನ್ನ ಹೆಂಡತಿ ಮತ್ತು ಎರಡು ಮಕ್ಕಳನ್ನು ಕೊಂದು, ಬಂಧನಕ್ಕೆ ಒಳಗಾಗಿದ್ದಾನೆ. ಕನಕಪುರ ರಸ್ತೆಯಲ್ಲಿ ಒಂದು ರೆಸಾರ್ಟ್ ಸ್ಥಾಪಿಸಲು ಜಿಮ್ ಸೋಮನಿಂದ ಸಾಲ ಪಡೆದಿದ್ದ, ಸೋಮ ಈತನಿಂದ 15ರಿಂದ 20% ಬಡ್ಡಿ ವಸೂಲಿ ಮಾಡಿರುತ್ತಾನೆ. ನಂತರ ಈತನನ್ನು ಅಪಹರಿಸಿ, ಮಾನಸಿಕ ಹಿಂಸೆ ನೀಡಿ ಸಕಲೇಶಪುರದಲ್ಲಿರುವ 150 ಎಕರೆ ಕಾಫಿ ತೋಟವನ್ನು ಬಲವಂತವಾಗಿ ನೋಂದಣಿ ಮಾಡಿಸಿಕೊಂಡಿರುವ ಸಂಬಂಧ ಪ್ರಕರಣ ತನಿಖೆಯಲ್ಲಿದೆ.

ಆಪರೇಷನ್ ಕಮಲದ ಹಿಂದಿರುವ ವ್ಯಕ್ತಿಗಳ ಮೊದಲ ಪಟ್ಟಿ ಇದು, ಇವರ ಬೆನ್ನಿಗೆ ಪ್ರಭಾವಿ ರಾಜಕಾರಣಿಗಳಿದ್ದಾರೆ, ಅವರೂ ಬಂಡವಾಳ ಹೂಡಿದ್ದಾರೆ ಎಂಬ ಮಾಹಿತಿ ಗೃಹ ಇಲಾಖೆಗೆ ಲಭ್ಯವಾಗಿದೆ.

Translate »