ಬೆಂಗಳೂರು: ಲಾಕ್‍ಡೌನ್ ನಡುವೆಯೂ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಹಾಗೂ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿ ರುವುದು ವ್ಯಾಪಕ ಟೀಕೆಗೆ ಕಾರಣವಾದ ಬೆನ್ನಲ್ಲೇ, ಈ ಸಂಬಂಧ ಶೀಘ್ರದಲ್ಲೇ ಕ್ರಮ ಕೈಗೊಳ್ಳುವುದಾಗಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿ ವಿವಾಹ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ರಾಮನಗರ ಪೊಲೀಸ್ ಅಧೀಕ್ಷಕರ ಬಳಿ ಈ ಕುರಿತು ವರದಿ ಕೇಳಲಾಗಿದೆ. ವಿವಾಹಕ್ಕೂ ಮೊದಲೇ ಸಾಕಷ್ಟು ಎಚ್ಚರಿಕೆಗಳನ್ನೂ ನೀಡಲಾಗಿದೆ. ವಿವಾಹ ಸಂದರ್ಭದಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂಘನೆಯಾಗಿರುವುದು ಕಂಡು ಬಂದಿದ್ದೇ ಆದರೆ, ಈ ಬಗ್ಗೆ ಶೀಘ್ರದಲ್ಲಿಯೇ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಜವಾ ಬ್ದಾರಿಯುತ ನಾಯಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಈ ಸಂದರ್ಭದಲ್ಲಿ ನಾವು ಇತರರಿಗೆ ಉದಾಹರಣೆಯಾಗಿ ಇರಬೇಕು. ಕಠಿಣ ಪರಿಸ್ಥಿತಿಯಲ್ಲಿ ನಮ್ಮ ವರ್ತನೆಗಳು ಇತರರಿಗೆ ತಪ್ಪು ಸಂದೇಶವನ್ನು ರವಾನಿ ಸುತ್ತದೆ ಎಂದು ತಿಳಿಸಿದ್ದಾರೆ. ಈ ಕುರಿತು ಖಂಡಿತ ವಾಗಿಯೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇಲ್ಲದೇ ಹೋದರೆ ವ್ಯವಸ್ಥೆ ಕುರಿತು ಅಪಹಾಸ್ಯಗಳು ಆರಂಭವಾಗುತ್ತದೆ. ಇಂತಹ ವರ್ತನೆಗಳ ವಿರುದ್ಧ ನಾವು ಕಠಿಣ ಸಂದೇಶವನ್ನು ರವಾನಿಸಬೇಕಿದೆ. ಯಾರು ಏನು ಬೇಕಾದರೂ ಮಾಡಲು ಬಿಡುವುದಿಲ್ಲ. ವಿವಾಹ ನಡೆಸಲು ಅನುಮತಿ ನೀಡಲು ನಿಯಮಗಳಿದ್ದು, ಈ ನಿಯಮ ಗಳಂತೆ ವಿವಾಹ ಕಾರ್ಯಗಳನ್ನು ನೆರವೇರಿಸಬೇಕಾಗುತ್ತದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.