ಈ ಬಾರಿ ದಸರಾ ಉತ್ಸವಕ್ಕೆ 25 ಕೋಟಿ ಅನುದಾನಕ್ಕೆ ಬೇಡಿಕೆ: ಸಚಿವ ಜಿಟಿಡಿ
ಮೈಸೂರು

ಈ ಬಾರಿ ದಸರಾ ಉತ್ಸವಕ್ಕೆ 25 ಕೋಟಿ ಅನುದಾನಕ್ಕೆ ಬೇಡಿಕೆ: ಸಚಿವ ಜಿಟಿಡಿ

September 15, 2018

ಮೈಸೂರು:  ನಾಡಹಬ್ಬ ದಸರಾ ಮಹೋತ್ಸವವನ್ನು ಸಾಂಪ್ರದಾಯಿಕವಾಗಿ ಆಚರಿಸಲು 25ಕೋಟಿ ಅನುದಾನ ನೀಡುವಂತೆ ಮುಖ್ಯ ಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಸಾಲಿನಲ್ಲೂ ಯುವ ದಸರಾ, ರೈತ ದಸರಾ ಸೇರಿದಂತೆ 16 ಕಾರ್ಯಕ್ರಮಗಳು ಜರು ಗಲಿವೆ ಎಂದು ಮೈಸೂರು ದಸರಾ ಮಹೋತ್ಸವ ಕಾರ್ಯಕಾರಿ ಸಮಿತಿ ಅಧ್ಯಕ್ಷರೂ ಆಗಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ದಸರಾ ಕಾರ್ಯಕಾರಿ ಸಮಿತಿ ಸಭೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಸರಾ ಮಹೋತ್ಸವವನ್ನು ಸಾಂಪ್ರದಾಯಿಕತೆಯೊಂದಿಗೆ ಆಕರ್ಷಕವಾಗಿ ಆಚರಿಸಲು ಈಗಾಗಲೇ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಲಾಗಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅಧ್ಯಕ್ಷತೆಯಲ್ಲಿ ದಸರಾ ಉನ್ನತ ಸಮಿತಿ ಸಭೆಯೂ ನಡೆದಿದ್ದು, ದಸರಾ ಕಾರ್ಯಕ್ರಮಗಳಿಗೆ ಸಿದ್ದತೆ ಮಾಡಿ ಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

ನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ನಡೆಯುವ ಕಾಮಗಾರಿಗಳನ್ನು ಹೊರತುಪಡಿಸಿ ದಸರಾ ಮಹೋತ್ಸವಕ್ಕೂ 25ಕೋಟಿ ರೂ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಕಳೆದ ವರ್ಷ ದಸರಾ ಆಚರಣೆಯಲ್ಲಿ ಕಂಡು ಬಂದಿದ್ದ ಸಣ್ಣ-ಪುಟ್ಟ ಲೋಪ, ದೋಷಗಳನ್ನು ಸರಿಪಡಿಸಿಕೊಂಡು ಈ ಬಾರಿ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ರೈತ ದಸರಾ, ಯುವ ದಸರಾ, ಗಾಳಿಪಟ ಉತ್ಸವ, ಆಹಾರ ಮೇಳ, ಯೋಗ, ಕ್ರೀಡೆ, ಮಹಿಳಾ ದಸರಾ, ಮಕ್ಕಳ ದಸರಾ, ಕವಿಗೋಷ್ಠಿ ಸೇರಿದಂತೆ 16 ಕಾರ್ಯಕ್ರಮಗಳು ನಡೆಯಲಿವೆ. ಈ 16 ಕಾರ್ಯಕ್ರಮಗಳಿಗೂ ಪ್ರತ್ಯೇಕ ಉಪ ಸಮಿತಿ ರಚಿಸಲಾಗುವುದು. ಪ್ರತಿಯೊಂದು ಉಪಸಮಿತಿಗೂ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ತಲಾ ಐದೈದು ಸದಸ್ಯರನ್ನು ಒಳ ಗೊಂಡಂತೆ 25 ಸದಸ್ಯರು ಸಮಿತಿಯಲ್ಲಿರುತ್ತಾರೆ ಎಂದರು.

ಜಂಬೂ ಸವಾರಿ ರಿಹರ್ಸಲ್ ಇಲ್ಲ: ಜಂಬೂ ಸವಾರಿ ತಾಲೀಮು (ರಿಹರ್ಸಲ್) ಇಲ್ಲ. ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಸಾಕಷ್ಟು ಕಲಾವಿದರು ಬಯಸುತ್ತಾರೆ. ಆದರೆ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಕಲಾವಿದರ ಬೇಡಿಕೆಗನುಗುಣವಾಗಿ ಅ.14ರಂದು ಅರಮನೆಯಿಂದ ಬನ್ನಿಮಂಟಪದ ಪಂಚಿನ ಕವಾಯತು ಮೈದಾನದ ವರೆಗೆ ಆನೆಗಳೊಂದಿಗೆ ಸ್ಥಳೀಯ ಕಲಾವಿದರು ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಈ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ, ಸ್ತಬ್ಧಚಿತ್ರಗಳು ಇರುವುದಿಲ್ಲ. ಈ ಎರಡನ್ನು ಹೊರತುಪಡಿಸಿ ಮೆರವಣಿಗೆ ನಡೆಯಲಿದೆ. ಇದರಿಂದ ಅ.19ರಂದು ನಡೆಯಲಿರುವ ಜಂಬೂಸವಾರಿಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ ಎಂದು ಹೇಳಿದರು.

26ರೊಳಗೆ ಕಾರ್ಯಕ್ರಮಗಳ ಪಟ್ಟಿ ಅಂತಿಮ: ದಸರಾ ಮಹೋತ್ಸವದ ಉಪಸಮಿತಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ಸೆ.20ರೊಳಗೆ ಪ್ರಕಟಿಸಲಾಗುತ್ತದೆ. ಸೆ.25ರೊಳಗೆ ಸಾಂಸ್ಕೃತಿಕ ಸಮಿತಿ ಸೇರಿದಂತೆ ಎಲ್ಲಾ ಉಪ ಸಮಿತಿಗಳ ಕಾರ್ಯಕ್ರಮಪಟ್ಟಿ ಅಂತಿಮಗೊಳಿಸಿ 26ಕ್ಕೆ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ ಕಲಾವಿದರನ್ನು ಸಂಪರ್ಕಿಸಲಾಗಿದೆ. ಕೆಲವರ ಸಮಯ, ದಿನ ನಿಗದಿಯಾಗಿದೆ. ಎಲ್ಲ ಕಾರ್ಯಕ್ರಮಗಳ ಪಟ್ಟಿ 25ರೊಳಗೆ ಅಂತಿಮಗೊಳ್ಳಲಿದೆ. ವೈಮಾನಿಕ ಪ್ರದರ್ಶನ ನಡೆಸುವ ಕುರಿತಂತೆ ಭಾರತೀಯ ಸೇನೆಯ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ಅಲ್ಲಿಂದ ಪ್ರತಿಕ್ರಿಯೆ ಬಂದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ದಸರಾ ಹೊತ್ತಿನಲ್ಲಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಹೊರ ರಾಜ್ಯದ ವಾಹನಗಳ ಪ್ರವೇಶ ಮುಕ್ತಗೊಳಿಸುವುದಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಇನ್ನೆರಡು ದಿನದಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.

ಸಭೆಯಲ್ಲಿ ಸಚಿವರುಗಳಾದ ಸಾ.ರಾ. ಮಹೇಶ್, ಪುಟ್ಟರಂಗಶೆಟ್ಟಿ, ಎನ್.ಮಹೇಶ್, ಶಾಸಕರಾದ ಎಲ್.ನಾಗೇಂದ್ರ, ಹರ್ಷವರ್ಧನ್, ಸಿ.ಎಸ್.ನಿರಂಜನಕುಮಾರ್, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಬಿ.ರಾಮು, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್, ಎಸ್ಪಿ ಅಮಿತ್ ಸಿಂಗ್, ಡಿಸಿಪಿ ಸಿದ್ರಾಮಪ್ಪ ಚಳ್ಕಾಪುರೆ, ಡಿಸಿಪಿಗಳಾದ ಡಾ.ವಿಷ್ಟುವರ್ಧನ್, ಡಾ.ವಿಕ್ರಮ್ ಆಮ್ಟೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Translate »