ಸುತ್ತೂರಲ್ಲಿ ಸೈನ್ಸ್ ಸಿಟಿ
ಮೈಸೂರು

ಸುತ್ತೂರಲ್ಲಿ ಸೈನ್ಸ್ ಸಿಟಿ

June 25, 2019

ಮೈಸೂರು: ಮೂಲ ವಿಜ್ಞಾನದ ಅಭಿರುಚಿ ಬೆಳೆಸಿ ವೈಜ್ಞಾನಿಕ ಚಿಂತನೆಗೆ ಹಚ್ಚುವ ಹಾಗೂ ವಿಜ್ಞಾನದ ವಿಸ್ಮಯ ಲೋಕ ಅನಾವರಣಗೊಳಿಸುವ ಸೈನ್ಸ್ ಸಿಟಿಯನ್ನು (ವಿಜ್ಞಾನ ನಗರ) ಮೈಸೂರಿನಿಂದ 25 ಕಿ.ಮೀ. ದೂರದ ಸುತ್ತೂರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

ಈ ಬೃಹತ್ ಯೋಜನೆಗೆ ರಾಜ್ಯ ವಿಜ್ಞಾನ ಮತ್ತು ತಂತ್ರ ಜ್ಞಾನ ಇಲಾಖೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ದಕ್ಷಿಣ ಭಾರತದ ಮೊಟ್ಟ ಮೊದಲ ಸೈನ್ಸ್ ಸಿಟಿಯಾಗಿ ಇದು ಹೊರ ಹೊಮ್ಮಲಿದೆ. ಕೋಲ್ಕತ್ತಾದಲ್ಲಿ ಈಗಾಗಲೇ ತಲೆ ಎತ್ತಿರುವ `ಸೈನ್ಸ್ ಸಿಟಿ’ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿ ಯಾಗಿದೆ. ಆ ಮಾದರಿಯಲ್ಲಿ ಸುತ್ತೂರಿನ ಉದ್ದೇಶಿತ ಸೈನ್ಸ್ ಸಿಟಿ ಸಹ ಇರಲಿದೆ. ಸುತ್ತೂರಿನ ಅತಿಥಿ ಗೃಹದ ಸಮೀಪ 25 ಎಕರೆ ಪ್ರದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮಾನ ಅನುದಾನದಲ್ಲಿ ಅಂದಾಜು 200 ಕೋಟಿ ರೂ. ವೆಚ್ಚದಲ್ಲಿ ಸೈನ್ಸ್ ಸಿಟಿ ನಿರ್ಮಿಸಲು ಉದ್ದೇಶಿಸಲಾಗಿದೆ. ಯೋಜನೆ ಅನುಷ್ಠಾನಕ್ಕೆ ಸುತ್ತೂರು ಮಠ ಉಚಿತ ವಾಗಿ ಭೂಮಿ ನೀಡಲು ಮುಂದಾಗಿದೆ. ಉದ್ದೇ ಶಿತ ಯೋಜನೆ ಸಂಬಂಧ ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದಕ್ಕೂ ಮುನ್ನ ಸುತ್ತೂರು ಮಠದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉಪಸ್ಥಿತಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಉಪ ಮುಖ್ಯಮಂತ್ರಿಗಳು, ಯೋಜನೆ ಸಂಬಂಧ ಮಾಹಿತಿ ಪಡೆದರು. ಜೊತೆಗೆ ಯೋಜನೆ ಕುರಿತಂತೆ ಪಿಪಿಟಿ ಪ್ರದರ್ಶನದ ಮೂಲಕವೂ ಅಧಿಕಾರಿಗಳು, ಉಪ ಮುಖ್ಯಮಂತ್ರಿಗಳಿಗೆ ವಿವರಗಳನ್ನು ನೀಡಿದರು. ಮಾಧ್ಯಮದವರಿಗೆ ಸಭೆಗೆ ಪ್ರವೇಶ ಇಲ್ಲವಾಗಿತ್ತು. ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ದೇಶದ ಜಿಲ್ಲಾ ಕೇಂದ್ರಗಳಲ್ಲಿ ಸೈನ್ಸ್ ಸೆಂಟರ್‍ಗಳನ್ನು ನಿರ್ಮಿ ಸಲು ಹಲವು ವರ್ಷಗಳ ಹಿಂದೆಯೇ ನಿರ್ಧ ರಿಸಲಾಗಿದೆ. ಇದರ ಜೊತೆಗೆ ಪ್ರತಿ ರಾಜ್ಯಕ್ಕೊಂದು ಸೈನ್ಸ್ ಸಿಟಿ ನಿರ್ಮಿಸಲು ಹಾಗೂ 4ರಿಂದ 5 ಪ್ರಾದೇಶಿಕ ಸೈನ್ಸ್ ಸೆಂಟರ್‍ಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಈಗಾಗಲೇ ಮಂಗಳೂರು ಹಾಗೂ ಧಾರವಾಡದಲ್ಲಿ ಪ್ರಾದೇಶಿಕ ಸೈನ್ಸ್ ಸೆಂಟರ್ ನಿರ್ಮಾಣಗೊಂಡಿವೆ. ಅಲ್ಲದೆ, ರಾಜ್ಯದ 19 ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಸೈನ್ಸ್ ಸೆಂಟರ್ ನಿರ್ಮಿಸಲು ನಿರ್ಣಯಿಸಿದ್ದು, ಈ ಪೈಕಿ ಹಲವು ಪ್ರಗತಿ ಹಂತದಲ್ಲಿವೆ ಎಂದು ವಿವರಿಸಿದರು. ಇದೀಗ ಸುತ್ತೂರಿನಲ್ಲಿ ಸೈನ್ಸ್ ಸಿಟಿ ನಿರ್ಮಿಸಲು ಉದ್ದೇಶಿಸಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸೈನ್ಸ್ ಸಿಟಿ ನಿರ್ಮಿಸಲು ಕನಿಷ್ಠ 25 ಎಕರೆ ಭೂಮಿಯ ಅಗತ್ಯವಿದೆ. ಸುತ್ತೂರು ಮಠದಿಂದ ಅಗತ್ಯ ವಿರುವ ಭೂಮಿಯನ್ನು ನೀಡಲು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮುಂದೆ ಬಂದಿದ್ದಾರೆ. ಇದು 200 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಯಾಗಿದೆ. ಪ್ರಸ್ತುತ ಇಡೀ ದಕ್ಷಿಣ ಭಾರತದಲ್ಲಿ ಯಾವ ರಾಜ್ಯದಲ್ಲೂ ಸೈನ್ಸ್ ಸಿಟಿ ನಿರ್ಮಾಣಗೊಂಡಿಲ್ಲ ಎಂದರು.

ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಯೋಜನೆ ಅನುಷ್ಠಾನ ಗೊಳಿಸುತ್ತಿದ್ದು, ರಾಜ್ಯ ಸರ್ಕಾರ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದೆ. ಕೇಂದ್ರದ ಅನುಮೋದನೆ ದೊರೆಯುತ್ತಿದ್ದಂತೆ ನಿರ್ಮಾಣ ಚಟುವಟಿಕೆಗಳು ಆರಂಭಗೊಳ್ಳಲಿವೆ. ಸೈನ್ಸ್ ಸಿಟಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಐದು ವರ್ಷಗಳ ಅವಧಿ ನಿಗದಿ ಮಾಡಿದ್ದು, ಇದಕ್ಕೆ ಬದಲು 3 ವರ್ಷಗಳ ಅವಧಿಯಲ್ಲೇ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು. ಮಕ್ಕಳಿಗೆ ವಿಜ್ಞಾನದ ಬಗ್ಗೆ ಅಭಿರುಚಿ ಬೆಳೆಸಲು ಹಾಗೂ ಜನಸಾಮಾನ್ಯರಿಗೆ ವೈಜ್ಞಾನಿಕ ಚಿಂತನೆ ಮೂಡಿಸಲು ಸೈನ್ಸ್ ಸಿಟಿ ಸಹಕಾರಿಯಾಗಲಿದೆ. ಮೂಲ ವಿಜ್ಞಾನ ವಿಷಯಗಳ ಬಗ್ಗೆ ಆಸಕ್ತಿ ಕಳೆದುಕೊಂಡು ಡಾಕ್ಟರ್-ಇಂಜಿನಿಯರ್‍ನತ್ತ ಆಕರ್ಷಣೆಗೆ ವಿದ್ಯಾರ್ಥಿಗಳು ಒಳಗಾಗುತ್ತಿರುವ ಈ ಸಂದರ್ಭದಲ್ಲಿ ಸೈನ್ಸ್ ಸಿಟಿ ಮಹತ್ವದ ಬದಲಾವಣೆ ತರಲು ನೆರವಾಗಲಿದೆ. ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಗ್ಯಾಲರಿಗಳು ಸೇರಿದಂತೆ ಮಾದರಿಗಳು ಉದ್ದೇಶಿತ ಸೈನ್ಸ್ ಸಿಟಿಯಲ್ಲಿ ಕಾಣಸಿಗಲಿವೆ ಎಂದು ಹೇಳಿದರು. ಶಾಸಕ ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್, ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವಿಶೇಷ ನಿರ್ದೇಶಕ (ತಾಂತ್ರಿಕ) ಡಾ.ಹೆಚ್.ಹೊನ್ನೇ ಗೌಡ, ಸಂಯೋಜನಾಧಿಕಾರಿ ತ್ರಿಪುರಾಂತಕ ಮತ್ತಿತರರು ಹಾಜರಿದ್ದರು.

ಕೇಂದ್ರ ಸರ್ಕಾರ ಪ್ರತಿ ರಾಜ್ಯದಲ್ಲಿ ಒಂದು ಸೈನ್ಸ್ ಸಿಟಿ ನಿರ್ಮಿಸಲು ಅವಕಾಶ ನೀಡಿದೆ. ಆ ಪ್ರಕಾರವಾಗಿ ಸುತ್ತೂರಿನಲ್ಲಿ ಸೈನ್ಸ್ ಸಿಟಿ ನಿರ್ಮಿಸಲು ಉದ್ದೇಶಿಸಿದ್ದು, ಈ ಸಂಬಂಧ ಡಿಪಿಆರ್ ಸಿದ್ಧಪಡಿಸಲಾಗಿದೆ. ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮಾನ ಅನುದಾನ ಕಲ್ಪಿಸಬೇಕಿದೆ. ರಾಜ್ಯ ಸರ್ಕಾರ ಯೋಜನೆ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ 6 ತಿಂಗಳ ಒಳಗೆ ಅನುಮೋದನೆ ದೊರೆಯುವ ನಿರೀಕ್ಷೆ ಇದೆ. ಉದ್ದೇಶಿತ ಸೈನ್ಸ್ ಸಿಟಿಯಲ್ಲಿ ಒಳಾಂಗಣ ಹಾಗೂ ಹೊರಾಂಗಣ ಪ್ರದರ್ಶನ ಇರಲಿದೆ. ಇವು ಮೂಲ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹಲವು ವಿಶೇಷತೆಗಳೊಂದಿಗೆ ಬೆಳಕು ಚೆಲ್ಲಲಿವೆ. ಅತ್ಯಾಧುನಿಕ ವ್ಯವಸ್ಥೆಯಿರುವ ತಾರಾಲಯ ಸ್ಥಾಪಿಸಲಾಗುವುದು. ಮೂಲ ವಿಜ್ಞಾನದ ಉತ್ತೇಜನಕ್ಕೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಲು ಇದು ಸಹಕಾರಿ. ಕಡಿಮೆ ದರದ ಟಿಕೆಟ್ ಶುಲ್ಕ ನಿಗದಿ ಮಾಡಿ ವಿಜ್ಞಾನದ ಕೌತುಕ ಕಣ್ತುಂಬಿಕೊಳ್ಳಲು ಅವಕಾಶ ನೀಡಲಾಗುವುದು.
-ಡಾ.ಹೆಚ್.ಹೊನ್ನೇಗೌಡ,  ವಿಶೇಷ ನಿರ್ದೇಶಕ (ತಾಂತ್ರಿಕ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ.

Translate »