ಮೀಟರ್ ಬಡ್ಡಿ ದಂಧೆಯಿಂದ ಬೀದಿಬದಿ ವ್ಯಾಪಾರಿಗಳ ರಕ್ಷಣೆಗೆ `ಬಡವರ ಬಂಧು’
ಮೈಸೂರು

ಮೀಟರ್ ಬಡ್ಡಿ ದಂಧೆಯಿಂದ ಬೀದಿಬದಿ ವ್ಯಾಪಾರಿಗಳ ರಕ್ಷಣೆಗೆ `ಬಡವರ ಬಂಧು’

November 23, 2018

ಬೆಂಗಳೂರು: ಲೇವಾ ದೇವಿದಾರರ ಕಿರುಕುಳದಿಂದ ಬೀದಿಬದಿ ವ್ಯಾಪಾರಿಗಳನ್ನು ವಿಮುಕ್ತಗೊಳಿಸುವ ಮಹತ್ವಾ ಕಾಂಕ್ಷೆಯ `ಬಡವರ ಬಂಧು’ ಯೋಜನೆಗೆ ಇಂದಿಲ್ಲಿ ಚಾಲನೆ ನೀಡಲಾಯಿತು.

ನಗರದ ಯಶವಂತಪುರದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ನೂತನ ಯೋಜನೆಗೆ ಚಾಲನೆ ನೀಡಿ, ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬೀದಿಬದಿ ವ್ಯಾಪಾರಿಗಳಿಗೆ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ತೊಂದರೆ ಕೊಡುವುದನ್ನು ನಿಲ್ಲಿಸಬೇಕು ಎಂದರು.

ಅಂಗಡಿಗಳನ್ನು ತೆರವುಗೊಳಿಸದೆ ವ್ಯಾಪಾರ ಮಾಡಿ ಅವರಿಗೂ ಬದುಕಲು ಅವಕಾಶ ನೀಡಿ, ಸಣ್ಣಪುಟ್ಟ ವ್ಯಾಪಾರಿಗಳಿಗೆ ಜಾಗ ಗುರುತಿಸಿಕೊಡಿ, ಅಕ್ರಮವಾಗಿ ಹಣ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಿ. ಬಡಜನತೆ ಅದರಲ್ಲೂ ಸಣ್ಣ ಪುಟ್ಟ ವ್ಯಾಪಾರಿಗಳು ಎಷ್ಟು ಕಷ್ಟ ಎದುರಿಸುತ್ತಾರೆ ಎಂಬುದನ್ನು ಚಿಕ್ಕ ವಯಸ್ಸಿನಿಂದ ನೋಡುತ್ತಿದ್ದೇನೆ, ಅವರಿಗಾಗಿಯೇ ಬಡವರ ಬಂಧು ಯೋಜನೆ ಆರಂಭಿಸಿದ್ದೇನೆ ಎಂದರು.

ಎಲ್ಲ ವರ್ಗದ ಬಡ ಜನತೆ ನೆಮ್ಮದಿಯ ಜೀವನ ನಡೆಸಬೇಕೆಂಬುದು ನಮ್ಮ ಉದ್ದೇಶ, ಚಿನ್ನದ ಕಡಗ, ಚಿನ್ನದ ಸರ ಧರಿಸಿದ ಮೀಟರ್ ಬಡ್ಡಿದಾರರು ಬೀದಿ ಬದಿ ವ್ಯಾಪಾರಿಗಳು ಹಾಗೂ ತಳ್ಳುಗಾಡಿ ವ್ಯಾಪಾರಿಗಳಿಗೆ ಬೆಳಿಗ್ಗೆ ಕೆಲವು ನೂರು ರೂ. ಸಾಲ ಕೊಟ್ಟು ಸಂಜೆ ಭಾರೀ ಬಡ್ಡಿ ಸಮೇತ ವಸೂಲು ಮಾಡುತ್ತಾರೆ.

ಸಣ್ಣ ಹಾಗೂ ಬೀದಿ ಬದಿ ವ್ಯಾಪಾರಿ ಗಳನ್ನು ರಕ್ತ ಹೀರುವವರ ಕಪಿಮುಷ್ಟಿಯಿಂದ ವಿಮುಕ್ತಗೊಳಿಸಲು 10 ಸಾವಿರ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಜಾರಿಗೆ ತರಲಾಗಿದೆ. ಬೀದಿ ಬದಿ ವ್ಯಾಪಾರಿ ಗಳು ದೈನಂದಿನ ಕೆಲಸ ಮುಗಿಸಿ, ಸಂಜೆ ದುಡಿಮೆಯ ಶ್ರಮದ ಹಣದೊಂದಿಗೆ ನೆಮ್ಮದಿಯಿಂದ ಮನೆಗೆ ಮರಳುವಂತಾಗ ಬೇಕು ಎಂಬ ಉದ್ದೇಶದಿಂದ ಆರ್ಥಿಕ ಇಲಾಖೆಗೆ ಹೊರೆಯಾದರೂ ಸುಮಾರು 4.50 ಲಕ್ಷ ಸಣ್ಣ ವ್ಯಾಪಾರಿಗಳಿಗಾಗಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದರು.

ನಿಮ್ಮ ಮನೆ ಬಾಗಿಲಿಗೆ ಸಾಲ ನೀಡುವ ಯೋಜನೆ ತಂದಿದ್ದೇವೆ. ಈ ಯೋಜ ನೆಯ ಸದುಪಯೋಗ ಪಡೆದುಕೊಳ್ಳಿ, ಮೀಟರ್ ಬಡ್ಡಿದಾರರಿಗೆ ತಪ್ಪದೆ ಸಾಲ ಮರುಪಾವತಿ ಮಾಡುತ್ತಿದ್ದ ರೀತಿಯಲ್ಲೇ ದೈನಂದಿನ ಸಾಲವನ್ನೂ ಇಲಾಖೆಗೆ ಹಿಂದಿರುಗಿಸಿ ಮರುದಿನ ಮತ್ತೆ ಸಾಲ ಪಡೆಯುವ ಅವಕಾಶವನ್ನು ಮುಕ್ತವಾಗಿಟ್ಟು ಕೊಳ್ಳಿ ಎಂದು ಸಲಹೆ ನೀಡಿದರು.

ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಮಾತನಾಡಿ, ಬಡವರ ಬಂಧು ಯೋಜನೆ ಬೀದಿ ಬದಿ ವ್ಯಾಪಾರಿಗಳ ಬಾಳಿಗೆ ಬೆಳಕಾಗಿದೆ ಎಂದರು. ಮಿತಿ ಮೀರಿದ ಬಡ್ಡಿ ತೆತ್ತು ಭೌತಿಕ, ಮಾನಸಿಕ ಹಿಂಸೆ ಅನುಭವಿಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳ ಬದುಕು ಉತ್ತಮಪಡಿ ಸಲು ಸಮ್ಮಿಶ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಈ ಶ್ರಮ ವ್ಯರ್ಥ ವಾಗಬಾರದು, ನಮ್ಮ ಕ್ಷೇತ್ರದಲ್ಲಿ ಹೂ ಮಾರುವ ಮಹಿಳೆಯೊಬ್ಬರ ಮಗ ಇಂದು ಐಎಎಸ್ ಅಧಿಕಾರಿ ಆಗಿದ್ದಾನೆ, ನಿಮ್ಮ ಮಕ್ಕಳೂ ದೊಡ್ಡ ಹುದ್ದೆಗೆ ಹೋಗು ವಂತಾಗಲು ಯೋಜನೆ ಸದುಪಯೋಗ ಪಡಿಸಿಕೊಳ್ಳಿ ಎಂದರು.

Translate »