ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಜಿ.ಡಿ.ಹರೀಶ್‍ಗೌಡ ಅವಿರೋಧ ಆಯ್ಕೆ
ಮೈಸೂರು

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಜಿ.ಡಿ.ಹರೀಶ್‍ಗೌಡ ಅವಿರೋಧ ಆಯ್ಕೆ

November 23, 2018

ಮೈಸೂರು: ಮೈಸೂರು ಮತ್ತು ಚಾಮರಾಜ ನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ (ಎಂಸಿಡಿಸಿಸಿ) ಅಧ್ಯಕ್ಷರಾಗಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್‍ಗೌಡ ಅವಿರೋಧವಾಗಿ ಆಯ್ಕೆಗೊಂಡರು. ಹುಣಸೂರು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತ ಕ್ಷೇತ್ರದಿಂದ ನ.12ರಂದು ನಡೆದ ನಿರ್ದೇಶಕರ ಚುನಾವಣೆಯಲ್ಲೂ ಅವಿರೋಧವಾಗಿ ಆಯ್ಕೆಯಾಗಿದ್ದ ಜಿ.ಡಿ.ಹರೀಶ್‍ಗೌಡ, ಇದೀಗ ಅಧ್ಯಕ್ಷರಾಗಿಯೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಂಜನಗೂಡು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ನಿರ್ದೇಶಕರಾಗಿ ಆಯ್ಕೆಗೊಂಡಿದ್ದ ಬಿ.ಎನ್.ಸದಾನಂದ ಇದೇ ವೇಳೆ ಬ್ಯಾಂಕಿನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸದಾನಂದ, ಮೈಸೂರು ಜಿಲ್ಲಾ ಪಂಚಾಯಿತಿ ಸದಸ್ಯರೂ ಆಗಿದ್ದಾರೆ.

ಮೈಸೂರಿನ ನೆಹರು ವೃತ್ತದಲ್ಲಿರುವ ಬ್ಯಾಂಕಿನಲ್ಲಿ ಗುರುವಾರ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು. ಮೈಸೂರು ಉಪವಿಭಾಗಾಧಿಕಾರಿ ಹೆಚ್.ಎನ್.ಶಿವೇಗೌಡ ಚುನಾವಣಾಧಿಕಾರಿಯಾಗಿ ಪ್ರಕ್ರಿಯೆ ನಡೆಸಿದರು. ಬೆಳಿಗ್ಗೆ 8ರಿಂದ 9ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಜಿ.ಡಿ.ಹರೀಶ್‍ಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಎನ್. ಸದಾನಂದ ನಾಮಪತ್ರ ಸಲ್ಲಿಸಿದ್ದರು.

ಎರಡು ಸ್ಥಾನಗಳಿಗೂ ಇವರ ಹೊರತಾಗಿ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಉಮೇದುವಾರಿಕೆ ಕ್ರಮಬದ್ಧವಾಗಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಅವಿರೋಧ ಆಯ್ಕೆ ಪ್ರಕಟಿಸಲಾಯಿತು. ಮುಂದಿನ ಐದು ವರ್ಷಗಳ ಅವಧಿಗೆ ಇವರ ಅಧಿಕಾರಾವಧಿ ಇರಲಿದೆ.

ಬ್ಯಾಂಕ್‍ನ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ನ.12ರಂದು ನಡೆದ ಚುನಾವಣೆಯಲ್ಲಿ ಜಿ.ಡಿ.ಹರೀಶ್‍ಗೌಡರ ಬಣ ಜಯಭೇರಿ ಭಾರಿಸಿತ್ತು. ಒಟ್ಟು 17 ನಿರ್ದೇಶಕ ಸ್ಥಾನಗಳ ಪೈಕಿ 12 ಮಂದಿ ನಿರ್ದೇಶಕರ ಆಯ್ಕೆಗೆ ಮತದಾನ ಪ್ರಕ್ರಿಯೆ ನಡೆದರೆ, ಉಳಿದ 5 ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿತ್ತು. ಜಿ.ಡಿ.ಹರೀಶ್‍ಗೌಡ ಸೇರಿದಂತೆ ಮಾಜಿ ಸಚಿವ ಹಾಗೂ ಹಾಲಿ ಶಾಸಕರೂ ಆದ ಎ.ಹೆಚ್.ವಿಶ್ವನಾಥ್ ಪುತ್ರ ಅಮಿತ್ ವಿ.ದೇವರಹಟ್ಟಿ, ಬ್ಯಾಂಕ್‍ನ ಮಾಜಿ ಅಧ್ಯಕ್ಷರೂ ಆದ ಹಿರಿಯ ಸಹಕಾರಿ ಸಿ.ಬಸವೇಗೌಡ, ಶಾಸಕ ಆರ್.ನರೇಂದ್ರ, ವೈ.ಎಂ.ಜಯ ರಾಮು ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದರು.

ಜಿ.ಡಿ.ಹರೀಶ್‍ಗೌಡ ಸೇರಿದಂತೆ ಸಿ.ಬಸವೇಗೌಡ, ಅಮಿತ್ ವಿ.ದೇವರಹಟ್ಟಿ, ಬಿ.ಎನ್.ಸದಾನಂದ, ಜಿಪಂ ಮಾಜಿ ಉಪಾಧ್ಯಕ್ಷ ಹೆಚ್.ಸುಬ್ಬಯ್ಯ, ಎಂ.ಕುಮಾರ್, ಜಿ.ಸಿ.ಸಿಂಗೇಗೌಡ, ಎಂ.ಪಿ.ಸುನೀಲ್, ಸಿ.ಎನ್.ರವಿ, ಬಿ.ಜಿ.ನಾಗೇಂದ್ರ ಕುಮಾರ್, ಕೆ.ಜಿ.ಮಹೇಶ್, ಡಾ.ಎಂ.ಬಿ.ಮಂಜೇಗೌಡ, ಹೆಚ್.ಜೆ.ನಾಗಪ್ರಸಾದ್, ಕೆ.ಎಸ್.ಕುಮಾರ್ ಹಾಗೂ ಎಸ್.ಎಂ.ಕೆಂಪಣ್ಣ ಸೇರಿದಂತೆ 15 ನಿರ್ದೇಶಕರು ಒಂದು ಬಣವಾದರೆ, ಶಾಸಕ ಆರ್.ನರೇಂದ್ರ ಹಾಗೂ ವೈ.ಎಂ.ಜಯರಾಮು ಮತ್ತೊಂದು ಬಣವಾಗಿದ್ದರು.

ಪಟಾಕಿ ಸಿಡಿಸಿ ಸಂಭ್ರಮ: ಜಿ.ಡಿ.ಹರೀಶ್‍ಗೌಡ ಹಾಗೂ ಸದಾನಂದ ಅವರ ಆಯ್ಕೆ ಹಿನ್ನೆಲೆಯಲ್ಲಿ ಬ್ಯಾಂಕ್ ಬಳಿಯ ನೆಹರು ವೃತ್ತದಲ್ಲಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದೇ ವೇಳೆ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಅನೇಕರು ಅಭಿನಂದಿಸಿದರು. ಮೈಸೂರು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹೆಚ್.ವಿ.ರಾಜೀವ್, ಬ್ಯಾಂಕಿನ ನಿರ್ದೇಶಕರಾದ ಸಿ.ಬಸವೇಗೌಡ, ಅಮಿತ್ ವಿ.ದೇವರಹಟ್ಟಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »