ಬೆಂಗಳೂರು: ಮಧ್ಯಪ್ರದೇಶ, ರಾಜಸ್ತಾನ, ತೆಲಂಗಾಣ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಂಚ ರಾಜ್ಯಗಳ ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು, ಅವರಿಗೆ ಬಿಡುವಿಲ್ಲ. ನವಂಬರ್‍ನಲ್ಲೇ ರಾಜ್ಯ ಸಂಪುಟ ವಿಸ್ತರಣೆ ಮಾಡಬೇಕೆಂಬುದು ನಮ್ಮ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಇಚ್ಛೆಯೂ ಆಗಿದೆ. ಸಂಪುಟ ವಿಸ್ತರಣೆ ಕುರಿತು ರಾಹುಲ್ ಗಾಂಧಿ ಜೊತೆ ಚರ್ಚಿಸುವುದಾಗಿ ವೇಣುಗೋಪಾಲ್ ತಿಳಿಸಿದ್ದಾರೆ, ಆದರೆ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಬೇಕೆಂದರೆ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ರಾಜ್ಯಗಳಿಗೇ ತೆರಳಬೇಕಾಗುತ್ತದೆ ಎಂದರು.
ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿ ಹಾಗೂ ಸಂಪುಟ ವಿಸ್ತರಣೆ ಅನಿವಾರ್ಯತೆಯನ್ನು ವೇಣುಗೋಪಾಲ್ ಅವರು ರಾಹುಲ್ ಗಾಂಧಿ ಅವರ ಗಮನಕ್ಕೆ ತರುವ ಭರವಸೆ ಇತ್ತಿದ್ದಾರೆ. ರಾಹುಲ್ ಅವರೊಂದಿಗೆ ಚರ್ಚಿಸಿದ ನಂತರ ಸಂಪುಟ ವಿಸ್ತರಣೆ ಯಾವಾಗ ಮಾಡಬೇಕೆಂಬುದನ್ನು ತಿಳಿಸುತ್ತಾರೆ. ರಾಹುಲ್ ಗಾಂಧಿ ಸದ್ಯ ಪ್ರಚಾರದಲ್ಲಿ ತೊಡಗಿದ್ದು, ಅವರನ್ನು ಭೇಟಿಯಾಗಲು ವೇಣುಗೋಪಾಲ್ ಅವರಿಂದ ಇದುವರೆಗೂ ಸಾಧ್ಯವಾಗಿಲ್ಲ. ಎಐಸಿಸಿ ಅಧ್ಯಕ್ಷರ ಭೇಟಿ ನಂತರ ಏನು ಸಂದೇಶ ಬರುತ್ತದೆ ಎಂಬುದನ್ನು ನಾವೂ ಕಾಯುತ್ತಿದ್ದೇವೆ. ಹೈಕಮಾಂಡ್ ನಿರ್ದೇಶನಕ್ಕೆ ಕಾಯುವುದು ಅನಿವಾರ್ಯ.
ರಾಜ್ಯ ಸಂಪುಟ ವಿಸ್ತರಣೆಗೆ ರಾಹುಲ್ ಗಾಂಧಿ ಅನುಮತಿ ನೀಡಿದರೆ ತಕ್ಷಣವೇ, ಅಂದರೆ ಈ ತಿಂಗಳೇ ವಿಸ್ತರಣೆ ಆಗಲಿದೆ. ಅನುಮತಿ ಸಿಗದಿದ್ದರೆ ಸಂಪುಟ ವಿಸ್ತರಣೆ ಅನುಮಾನ, ಸದ್ಯದ ಪರಿಸ್ಥಿತಿ ಗಮನಿಸಿದರೆ ವಿಸ್ತರಣೆ ಸದ್ಯಕ್ಕಿಲ್ಲ ಎಂದರು.