ಜಿ.ಡಿ.ಹರೀಶ್‍ಗೌಡ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ?
ಮೈಸೂರು

ಜಿ.ಡಿ.ಹರೀಶ್‍ಗೌಡ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ?

November 21, 2018

ಮೈಸೂರು:  ಮೈಸೂರು ಮತ್ತು ಚಾಮರಾಜನಗರ ಸಹಕಾರ ಕೇಂದ್ರ(ಎಂಸಿಡಿಸಿಸಿ) ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನ.22 ರಂದು ಚುನಾವಣೆ ನಿಗದಿಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್‍ಗೌಡ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಬ್ಯಾಂಕ್‍ನ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ನ.12ರಂದು ನಡೆದ ಚುನಾವಣೆಯಲ್ಲಿ ಜಿ.ಡಿ.ಹರೀಶ್‍ಗೌಡರ ಬಣ ಜಯಭೇರಿ ಭಾರಿಸಿದ್ದು, ಒಟ್ಟು 17ರಲ್ಲಿ 15 ನಿರ್ದೇಶಕರು ಒಟ್ಟಿಗಿದ್ದಾರೆ. ಜಿ.ಡಿ. ಹರೀಶ್‍ಗೌಡ ಸೇರಿದಂತೆ ಬ್ಯಾಂಕ್‍ನ ಮಾಜಿ ಅಧ್ಯಕ್ಷರೂ ಆದ ಹಿರಿಯ ಸಹಕಾರಿ ಸಿ.ಬಸವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್ ಅವರ ಪುತ್ರ ಅಮಿತ್ ವಿ.ದೇವರಹಟ್ಟಿ, ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಎನ್.ಸದಾನಂದ, ಜಿಪಂ ಮಾಜಿ ಉಪಾಧ್ಯಕ್ಷ ಹೆಚ್.ಸುಬ್ಬಯ್ಯ, ಎಂ. ಕುಮಾರ್, ಜಿ.ಸಿ.ಸಿಂಗೇಗೌಡ, ಎಂ.ಪಿ. ಸುನೀಲ್, ಸಿ.ಎನ್.ರವಿ, ಬಿ.ಜಿ.ನಾಗೇಂದ್ರ ಕುಮಾರ್, ಕೆ.ಜಿ.ಮಹೇಶ್, ಡಾ.ಎಂ.ಬಿ. ಮಂಜೇಗೌಡ, ಹೆಚ್.ಜೆ.ನಾಗಪ್ರಸಾದ್, ಕೆ.ಎಸ್.ಕುಮಾರ್ ಹಾಗೂ ಎಸ್.ಎಂ. ಕೆಂಪಣ್ಣ ಒಂದು ಬಣವಾದರೆ, ಮತ್ತೊಂದು ಬಣದಲ್ಲಿರುವುದು ಶಾಸಕ ಆರ್.ನರೇಂದ್ರ ಹಾಗೂ ವೈ.ಎಂ.ಜಯರಾಮು ಮಾತ್ರ.

ಐವರು ನಿರ್ದೇಶಕರು ಅವಿರೋಧ ವಾಗಿ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ 12 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಸಚಿವ ಜಿ.ಟಿ.ದೇವೇಗೌಡರ ಮಾರ್ಗದರ್ಶನದಲ್ಲಿ ಅವರ ಪುತ್ರ ಜಿ.ಡಿ.ಹರೀಶ್‍ಗೌಡ ಹಾಗೂ ಹಿರಿಯ ಸಹಕಾರಿ ಸಿ.ಬಸವೇಗೌಡರು ಚುನಾವಣೆಯಉಸ್ತುವಾರಿಗಳಂತೆ ಕೆಲಸ ಮಾಡಿದ್ದರು. ಪರಿಣಾಮ ಚುನಾವಣೆ ನಡೆದ 12 ಕ್ಷೇತ್ರಗಳಲ್ಲೂ ಜಿ.ಡಿ.ಹರೀಶ್‍ಗೌಡರ ಬಣದವರೇ ಜಯಭೇರಿ ಭಾರಿಸಿದರು. ಇದರಲ್ಲಿ 2 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೆ ಸಮಾನ ಮತ ಬಂದಿದ್ದರಿಂದ ಲಾಟರಿಯಲ್ಲಿ ಆಯ್ಕೆ ಮಾಡಲಾಯಿತು. ಈ ಅದೃಷ್ಟ ಪರೀಕ್ಷೆಯಲ್ಲೂ ಜಿ.ಡಿ.ಹರೀಶ್‍ಗೌಡರ ಬೆಂಬಲಿಗರೇ ಗೆದ್ದರು. ಇದರೊಂದಿಗೆ ಸಹಕಾರಿ ಚುನಾವಣೆಯಲ್ಲಿ ಮುಂದಾಳತ್ವ ವಹಿಸಿ, ಭಾರೀ ಬಹುಮತದೊಂದಿಗೆ ತಂಡವನ್ನು ಭದ್ರಪಡಿಸಿಕೊಳ್ಳುವಲ್ಲಿ ಹರೀಶ್‍ಗೌಡ ಯಶಸ್ವಿಯಾಗಿದ್ದಾರೆ. ಕಳೆದ ಆಡಳಿತ ಮಂಡಳಿಯಲ್ಲೂ ನಿರ್ದೇಶಕರಾಗಿ ಕೆಲಸ ಮಾಡಿರುವ ಜಿ.ಟಿ.ಹರೀಶ್‍ಗೌಡ, 2ನೇ ಬಾರಿಗೂ ಗೆದ್ದು, ಯಶಸ್ವಿ ಸಹಕಾರಿ ಪಯಣ ಮುಂದುವರಿಸಿದ್ದಾರೆ. ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿ.ಬಸವೇಗೌಡರು ಸೇರಿದಂತೆ ತಂಡದಲ್ಲಿರುವ ಎಲ್ಲಾ ನಿರ್ದೇಶಕರೂ ಹರೀಶ್‍ಗೌಡರನ್ನು ಬೆಂಬಲಿಸುತ್ತಾರೆಂದು ಹೇಳಲಾಗುತ್ತಿದೆ. ಆದರೆ ಈ ಸಂಬಂಧ ಪ್ರತಿಕ್ರಿಯಿಸಿದ ಜಿ.ಡಿ.ಹರೀಶ್‍ಗೌಡ, ಯಾರು ಅಧ್ಯಕ್ಷರಾಗಬೇಕೆಂಬುದನ್ನು ನಾಳೆ(ನ.21) ಎಲ್ಲಾ ನಿರ್ದೇಶಕರು ಸಭೆ ನಡೆಸಿ, ತೀರ್ಮಾನಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ನ.22ಕ್ಕೆ ಅಧ್ಯಕ್ಷರ ಆಯ್ಕೆ: ಎಂಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನೂತನ ಪದಾಧಿಕಾರಿಗಳ ಆಯ್ಕೆಗೆ ನ.22ರಂದು ಚುನಾವಣೆ ನಿಗಧಿಯಾಗಿದೆ. ಬ್ಯಾಂಕ್ ಆವರಣದಲ್ಲಿ ಚುನಾವಣೆ ನಡೆಯಲಿದ್ದು, ಅಂದು ಬೆಳಿಗ್ಗೆ 8ರಿಂದ 9ರವರೆಗೆ ನಾಮಪತ್ರ ಸಲ್ಲಿಸಲು, ನಂತರದ ಅರ್ಧ ಗಂಟೆ ನಾಮಪತ್ರ ಹಿಂಪಡೆಯಲು ಸಮಯಾವಕಾಶ ನೀಡಲಾಗುತ್ತದೆ. ಮಧ್ಯಾಹ್ನ 12 ಗಂಟೆಗೆ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿಯೂ ಆದ ಮೈಸೂರು ಉಪವಿಭಾಗಾಧಿಕಾರಿ ಹೆಚ್.ಎನ್.ಶಿವೇಗೌಡ ತಿಳಿಸಿದ್ದಾರೆ.

Translate »