ಹುಣಸೂರು: ಮೈಸೂರು ಮತ್ತು ಚಾಮರಾಜ ನಗರ ಜಿಲ್ಲಾ ಸಹಕಾರ ಬ್ಯಾಂಕ್‍ನ (ಎಂಸಿ ಡಿಸಿಸಿ) ಹುಣಸೂರು ಮತ್ತು ಬಿಳಿಕೆರೆ ಶಾಖೆಗಳಲ್ಲಿ 40.75 ಕೋಟಿ ರೂ. ದುರುಪ ಯೋಗಪಡಿಸಿಕೊಂಡು ಕಳೆದ 11 ತಿಂಗಳಿಂದ ತಲೆ ಮರೆಸಿಕೊಂಡಿದ್ದ ಹುಣಸೂರು ಬ್ಯಾಂಕ್ ಶಾಖೆಯ ಹಿಂದಿನ ವ್ಯವಸ್ಥಾಪಕ ರಾಮಪ್ಪ ಪೂಜಾರ್‍ನನ್ನು ಸಿಐಡಿ ಪೊಲೀಸರು ಕಳೆದ ಮೂರು ದಿನಗಳ ಹಿಂದೆ ಬೆಂಗ ಳೂರಿನಲ್ಲಿ ಬಂಧಿಸಿದ್ದಾರೆ.
ಬಡ ರೈತರಿಗೆ ವಿತರಿಸಬೇಕಾಗಿದ್ದ ಕೋಟ್ಯಾಂತರ ರೂ. ಸಾಲದ ಹಣವನ್ನೇ ದುರುಪಯೋಗ ಪಡಿಸಿಕೊಂಡಿದ್ದ ರಾಮಪ್ಪ ಪೂಜಾರ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿ ಸುತ್ತಾ ಪದೇ ಪದೆ ತನ್ನ ವಾಸಸ್ಥಳವನ್ನು ಬದಲಾಯಿಸುತ್ತಿದ್ದರಿಂದ ಆತನ ಬಂಧನ ಪೊಲೀಸರಿಗೆ ಭಾರಿ ಸವಾಲಾಗಿ ಪರಿಣಮಿ ಸಿತ್ತು. ಈತ ಕರ್ನಾಟಕದ ವಿವಿಧ ನಗರ ಹಾಗೂ ಗ್ರಾಮಗಳು ಮಾತ್ರವಲ್ಲದೇ, ಹೊರ ರಾಜ್ಯ ಗಳಲ್ಲೂ ತಲೆಮರೆಸಿಕೊಂಡಿದ್ದ ಪರಿಣಾಮ ಪೊಲೀಸರು ಈತನ ಪತ್ತೆಗಾಗಿ ಹರಸಾಹಸ ಪಡಬೇಕಾಯಿತು. ಈತನ ಇರುವಿಕೆಯ ಮಾಹಿತಿ ಪಡೆದು ಪೊಲೀಸರು ಅಲ್ಲಿಗೆ ತೆರಳುವಷ್ಟ ರಲ್ಲೇ ಅಲ್ಲಿಂದ ಈತ ಜಾಗ ಖಾಲಿ ಮಾಡು ತ್ತಿದ್ದ ಎಂದು ಹೇಳಲಾಗಿದೆ. ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದಾಗ ಹಲವಾರು ಸವಾಲಿನ ಪ್ರಕರಣಗಳನ್ನು ಭೇದಿಸಿದ್ದ ದಕ್ಷ ಅಧಿಕಾರಿ ಸಂದೇಶ್ ಕುಮಾರ್ ಈಗ ಸಿಐಡಿ ಡಿವೈ ಎಸ್ಪಿಯಾಗಿದ್ದು, ಅವರ ನೇತೃತ್ವದ ತಂಡವು ರಾಮಪ್ಪ ಪೂಜಾರ್ ಬೆಂಗಳೂರಿನಲ್ಲಿದ್ದಾನೆ ಎಂಬುದರ ಮಾಹಿತಿಯನ್ನು ಕಲೆ ಹಾಕಿ ಸ್ವಲ್ಪವೂ ಸುಳಿವನ್ನು ಹೊರಬಿಡದೆ ಕ್ಷಿಪ್ರ ಕಾರ್ಯಾ ಚರಣೆ ನಡೆಸಿ ಆತನನ್ನು ಬಲೆಗೆ ಕೆಡುವುದರಲ್ಲಿ ಯಶಸ್ವಿಯಾಗಿದೆ. ರಾಮಪ್ಪ ಪೂಜಾರ್‍ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕೆಲವು ದಿನ ಸಿಐಡಿ ವಶಕ್ಕೆ ಪಡೆದಿರುವ ಅಧಿಕಾರಿ ಗಳು ಇಂದು ಆತನನ್ನು ಹುಣಸೂರು ಮತ್ತು ಬಿಳಿಕೆರೆ ಎಂಸಿಡಿಸಿಸಿ ಬ್ಯಾಂಕ್ ಶಾಖೆಗಳಿಗೆ ಕರೆದೊಯ್ದು ವಿಚಾರಣೆ ನಡೆಸಿದರು. ರೈತರ ಕೋಟ್ಯಾಂತರ ರೂ.ಗಳನ್ನು ದುರುಪಯೋಗ ಪಡಿಸಿಕೊಂಡಿರುವ ರಾಮಪ್ಪ ಪೂಜಾರ್‍ನನ್ನು ಸಿಐಡಿ ಪೊಲೀಸರು ಕರೆತಂದಿದ್ದಾರೆ ಎಂಬ ಮಾಹಿತಿ ಹರಡುತ್ತಿದ್ದಂತೆಯೇ ನೂರಾರು ರೈತರು ಬ್ಯಾಂಕ್ ಮುಂದೆ ಜಮಾಯಿಸಿದ್ದರು. ಕೆಲವರು ಆತನ ಬಳಿ ತೆರಳಲು ಯತ್ನಿಸಿದ್ದರಾ ದರೂ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಈ ವೇಳೆ ಹುಣಸೂರು ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ವಿಚಾರಣೆಯನ್ನು ತೀವ್ರಗೊಳಿಸಿರುವ ಡಿವೈಎಸ್ಪಿ ಸಂದೇಶ್ ಕುಮಾರ್ ನೇತೃತ್ವದ ಸಿಐಡಿ ತಂಡ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದು, ಹುಣಸೂರು ಎಂಸಿಡಿಸಿಸಿ ಬ್ಯಾಂಕಿಗೆ ಒಳಪಟ್ಟ ಸಹಕಾರ ಸಂಘಗಳ ಸಿಇಓಗಳನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏನಿದು ಪ್ರಕರಣ: ಎಂಸಿಡಿಸಿಸಿ ಬ್ಯಾಂಕ್‍ನಿಂದ ರೈತರಿಗೆ ಸಾಲ ನೀಡುವ ಸಲುವಾಗಿ ಅದರ ಶಾಖೆಗಳಿಗೆ ಹಣ ರವಾನಿಸಲಾಗುತ್ತದೆ. ಈ ಶಾಖೆಗಳು ತಮ್ಮ ವ್ಯಾಪ್ತಿಗೆ ಒಳಪಟ್ಟ ಸಹಕಾರಿ ಸಂಘಗಳ ಮೂಲಕ ರೈತರಿಗೆ ಸಾಲ ನೀಡುತ್ತದೆ. ಹಾಗೆ ಎಂಸಿಡಿಸಿಸಿ ಬ್ಯಾಂಕ್‍ನಿಂದ ಹುಣಸೂರು ಮತ್ತು ಬಿಳಿಕೆರೆ ಶಾಖೆಗೆ ರವಾನೆಯಾಗಿದ್ದ ಹಣದಲ್ಲಿ ಹುಣಸೂರು ಶಾಖೆಯ ವ್ಯವಸ್ಥಾಪಕನಾಗಿದ್ದ ರಾಮಪ್ಪ ಪೂಜಾರ್ ಹುಣಸೂರು ಶಾಖೆಯ 27 ಕೋಟಿ ಮತ್ತು ಬಿಳಿಕೆರೆ ಶಾಖೆಯ 13 ಕೋಟಿ ಸೇರಿದಂತೆ ಒಟ್ಟು 48,75,53,206 ರೂ.ಗಳನ್ನು ಅಕ್ರಮವಾಗಿ ತನ್ನ ಖಾತೆಗೆ ಜಮಾಮಾಡಿಕೊಂಡು ಹಣ ದುರುಪಯೋಗಪಡಿಸಿಕೊಂಡಿದ್ದ ಎಂದು ಹೇಳಲಾಗಿದೆ. ಹುಣಸೂರು ಶಾಖೆಯಲ್ಲಿನ ಖಾತೆ ಸಂಖ್ಯೆ 20313240ಕ್ಕೆ 27 ಕೋಟಿ ರೂ. ಬಿಳಿಕೆರೆ ಶಾಖೆಯಲ್ಲಿನ ಖಾತೆ ಸಂಖ್ಯೆ 66412ಕ್ಕೆ 13 ಕೋಟಿ ರೂ. ಅದೇ ಶಾಖೆಯ ಮತ್ತೊಂದು ಖಾತೆ ಸಂಖ್ಯೆ 2032ಕ್ಕೆ 25 ಲಕ್ಷ ರೂ. ಪ್ರಧಾನ ಕಚೇರಿಯ ಖಾತೆ ಸಂಖ್ಯೆ 20318930ಕ್ಕೆ 11 ಕೋಟಿ ರೂ. ಮತ್ತು ಬಂಡಿಪಾಳ್ಯ ಬ್ಯಾಂಕ್‍ನ ಖಾತೆ ಸಂಖ್ಯೆ 203625ಕ್ಕೆ 1 ಕೋಟಿ ರೂ. ಜಮಾ ಮಾಡಿಕೊಂಡು ಈ ಎಲ್ಲಾ ಹಣವನ್ನು ಹುಣಸೂರಿನ ಆಕ್ಸಿಸ್ ಬ್ಯಾಂಕ್ ಹಾಗೂ ಬಿಳಿಕೆರೆಯ ಎಸ್‍ಬಿಐ ಶಾಖೆಗಳಲ್ಲಿದ್ದ ತನ್ನ ವೈಯಕ್ತಿಕ ಖಾತೆಗೆ ಜಮಾಮಾಡಿಕೊಂಡಿದ್ದ.
ಈತ ಕೋಟ್ಯಾಂತರ ರೂ. ಹಣ ದುರುಪಯೋಗಪಡಿಸಿಕೊಂಡಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಎಂಸಿಡಿಸಿಸಿ ಬ್ಯಾಂಕ್‍ನ ಅಂದಿನ ಜನರಲ್ ಮ್ಯಾನೇಜರ್‍ರವರು ತನಿಖಾ ತಂಡವನ್ನು ರಚಿಸಿ ತನಿಖೆ ಮಾಡಿದಾಗ ರಾಮಪ್ಪ ಪೂಜಾರ್‍ನ ಬಣ್ಣ ಬಯಲಾಗಿದೆ. ತಕ್ಷಣವೇ ಅವರು ಕಾರ್ಯಪ್ರವೃತ್ತರಾಗಿ ಈತನ ವಿರುದ್ಧ ಕ್ರಮಕ್ಕೆ ಮುಂದಾದರು. 2018ರ ಸೆಪ್ಟೆಂಬರ್ 17 ರಂದು ರಾಮಪ್ಪ ಪೂಜಾರ್, ಬಿಳಿಕೆರೆ ಶಾಖೆಯ ಮೇಲ್ವಿಚಾರಕರಾದ ಎ.ಜೆ.ನವೀನ್‍ಕುಮಾರ್ ಮತ್ತು ಬಿ.ಬಿ.ಕೃಷ್ಣ ವಿರುದ್ಧ ಹುಣಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿಚಿತ್ರವೆಂದರೆ ಹಗರಣವನ್ನು ಪತ್ತೆ ಹಚ್ಚಿದ್ದ ಎಂಸಿಡಿಸಿಸಿ ಬ್ಯಾಂಕ್‍ನ ಜನರಲ್ ಮ್ಯಾನೇಜರ್ ಅವರನ್ನೇ ಅಲ್ಲಿನ ಆಡಳಿತ ಮಂಡಳಿ ಸ್ಥಾನ ಪಲ್ಲಟ ಮಾಡಿತ್ತು. ಈ ಪ್ರಕರಣ ರಾಜಕೀಯ ತಿರುವುಗಳನ್ನು ಪಡೆದುಕೊಂಡಿತ್ತು. ರಾಮಪ್ಪ ಪೂಜಾರ್ ತನ್ನ ಪ್ರಭಾವ ಬಳಸಿ ಪೊಲೀಸರ ತನಿಖೆಗೆ ಅಡ್ಡಗಾಲು ಹಾಕಿದ್ದ ಎನ್ನಲಾಗಿದ್ದು, ಆ ವೇಳೆ 2018ರ ಸೆಪ್ಟೆಂಬರ್ 26 ರಂದು ನಡೆದ ಎಂಸಿಡಿಸಿಸಿ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ಭಾರೀ ಗದ್ದಲವೇ ಉಂಟಾಯಿತು. ಅಂದು ಬ್ಯಾಂಕ್‍ನ ನಿರ್ದೇಶಕರಾಗಿದ್ದ ಇಂದಿನ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಅವರು ಪ್ರಕರಣವನ್ನು ಸಿಐಡಿಗೆ ವಹಿಸಬೇಕು ಎಂದು ಪಟ್ಟು ಹಿಡಿದು ಅದರಲ್ಲಿ ಯಶಸ್ವಿಯೂ ಆದರು. ಪ್ರಕರಣ ಸಿಐಡಿಗೆ ಹಸ್ತಾಂತರಿಸಲ್ಪಟ್ಟು, ಆರೋಪಿಗಳ ಬಂಧನಕ್ಕೆ ಮುಂದಾದಾಗ ಉಳಿದ ಆರೋಪಿಗಳು ಸಿಕ್ಕಿ ಬಿದ್ದರೂ ಚಾಲಾಕಿ ರಾಮಪ್ಪ ಪೂಜಾರ್ ಅಂತೂ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸುತ್ತಲೇ ಇದ್ದ. ಕೊನೆಗೂ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದಾರೆ.