ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಶಾಂತ
ಮೈಸೂರು

ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಶಾಂತ

August 8, 2019

ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ಮತ್ತು ವಿಶೇಷ ಸ್ಥಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಕಣಿವೆ ರಾಜ್ಯದಲ್ಲಿ ಬುಧವಾರ ಪರಿಸ್ಥಿತಿ ಶಾಂತವಾಗಿತ್ತು.

ಕೆಲವೆಡೆ ಮಾತ್ರ ಸಣ್ಣ ಪ್ರಮಾಣದಲ್ಲಿ ಕಲ್ಲು ತೂರಾ ಟದ ಪ್ರಕರಣಗಳು ವರದಿಯಾಗಿವೆ. ಕಲ್ಲು ತೂರಾಟ ದಲ್ಲಿ ಓರ್ವ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ. ಉಳಿದಂತೆ ರಾಜಧಾನಿ ಶ್ರೀನಗರದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಜನರು ದ್ವಿಚಕ್ರ ವಾಹನ ಮತ್ತು ಕಾರುಗಳಲ್ಲಿ ನಿರ್ಭೀತಿಯಿಂದ ಓಡಾಡುತ್ತಿದ್ದಾರೆ. ಅಂಗಡಿ ಮುಂಗಟ್ಟುಗಳು ತೆರೆಯುತ್ತಿವೆ. ಭದ್ರತೆಯ ದೃಷ್ಟಿಯಿಂದ ಹಲವು ಹೋರಾಟಗಾರರು, ರಾಜಕೀಯ ಮುಖಂಡರು ಸೇರಿದಂತೆ 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀನಗರ ಮತ್ತು ಜಮ್ಮು ನಡುವೆ ವಾಹನ ಸಂಚಾರ ಸಹಜ ಸ್ಥಿತಿಗೆ ಮರಳಿದೆ. ಪೂಂಚ್ ಜಿಲ್ಲೆಯಲ್ಲಿ ಕೆಲವೆಡೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆದಿವೆ. ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆದಿದ್ದು, ಭದ್ರತಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ಕಾರ್ಗಿಲ್ ಪಟ್ಟಣದಲ್ಲಿ ಪ್ರತಿಭಟನೆ ನಡೆದಿದೆ. ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಧೋವಲ್ ಭೇಟಿ: ಇದೇ ವೇಳೆ ಎನ್‍ಎಸ್‍ಎ ಮುಖ್ಯಸ್ಥ, ಪ್ರಧಾನ ಮಂತ್ರಿಗಳ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಕಣಿವೆ ರಾಜ್ಯಕ್ಕೆ ಭೇಟಿ ಬುಧವಾರ ನೀಡಿದ್ದು, ಪರಿಸ್ಥಿತಿ ಅವಲೋಕಿಸಿದರು. ಸೇನೆಯ ಹಿರಿಯ ಅಧಿಕಾರಿಗಳು, ಜಮ್ಮು-ಕಾಶ್ಮೀರದ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ದಕ್ಷಿಣ ಕಾಶ್ಮೀರದ ಶೋಪಿಯಾನ್ ನಗರದಲ್ಲಿ ಸ್ಥಳೀಯರ ಜತೆ ಮಾತನಾಡಿ ಅಭಿಪ್ರಾಯ ಸಂಗ್ರಹಿಸಿದರು. ಜನರ ಜತೆಗೇ ರಸ್ತೆಬದಿಯಲ್ಲೇ ಉಪಾಹಾರ ಸೇವಿಸಿದರು.

ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿ ಮತ್ತು 35 ಎ ವಿಧಿಯನ್ನು ರದ್ದುಗೊಳಿಸಿತ್ತು. ಜತೆಗೆ ಜಮ್ಮು-ಕಾಶ್ಮೀರ ಪುನರ್ ರಚನೆ ಮಸೂದೆ-2019 ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರ ಪಡೆದಿತ್ತು. ಕೇಂದ್ರ ಸರ್ಕಾರದ ನಿರ್ಧಾರದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಶಾಂತವಾಗಿದೆ.

Translate »