ಸುಷ್ಮಾ ಸ್ವರಾಜ್ ಪಂಚಭೂತಗಳಲ್ಲಿ ಲೀನ
ಮೈಸೂರು

ಸುಷ್ಮಾ ಸ್ವರಾಜ್ ಪಂಚಭೂತಗಳಲ್ಲಿ ಲೀನ

August 8, 2019

ನವದೆಹಲಿ: ಬಿಜೆಪಿಯ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ, ಅತ್ಯುತ್ತಮ ವಾಗ್ಮಿಯಾಗಿದ್ದ ಸುಷ್ಮಾ ಸ್ವರಾಜ್ ಅವರು ಬುಧವಾರ ಸಂಜೆ ಪಂಚಭೂತಗಳಲ್ಲಿ ಲೀನವಾದರು. ಹೃದಯಾಘಾತದಿಂದ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ 67 ವರ್ಷದ ಸುಷ್ಮಾ ಸ್ವರಾಜ್ ನಿನ್ನೆ ರಾತ್ರಿ ವಿಧಿವಶರಾಗಿದ್ದರು.

ದೆಹಲಿಯ ಲೋಧಿ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸುಷ್ಮಾ ಸ್ವರಾಜ್ ಅವರ ಅಂತ್ಯಸಂಸ್ಕಾರ ನೆರವೇರಿತು. ಪತಿ ಸ್ವರಾಜ್ ಕೌಶಲ್ ಅಂತಿಮ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಕಂಬನಿ ಮಿಡಿಯುತ್ತಿದ್ದ ಪುತ್ರಿ ಬಾನ್ಸುರಿ ತಂದೆಯ ಜತೆಗಿದ್ದರು.

ಸುಷ್ಮಾ ಅಂತ್ಯಕ್ರಿಯೆ ಸಂದರ್ಭ ಪ್ರಧಾನಿ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಸೇರಿ ದಂತೆ ವಿವಿಧ ಪಕ್ಷಗಳ ಹಲವು ಗಣ್ಯರು ಉಪಸ್ಥಿತ ರಿದ್ದರು. ಭೂತಾನ್‍ನ ಮಾಜಿ ಪ್ರಧಾನಿ ಸೇರಿ ದಂತೆ ಹಲವು ದೇಶಗಳ ಮುಖಂಡರು ಹಾಜ ರಿದ್ದು ಸಂತಾಪ ಸೂಚಿಸಿದರು.

ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಹಠಾತ್ ನಿಧನ, ದೇಶಾದ್ಯಂತ ಜನರಿಗೆ ಆಘಾತವನ್ನುಂಟು ಮಾಡಿದೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಅಪಾರ ಸಂಖ್ಯೆಯಲ್ಲಿ ಕಂಬನಿ ಮಿಡಿಯುತ್ತಿದ್ದಾರೆ.

ಇಂದು ಬೆಳಿಗ್ಗೆ ಸುಷ್ಮಾ ಅವರ ನಿವಾಸಕ್ಕೆ ತೆರಳಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅಗಲಿದ ನಾಯಕಿಗೆ ಗೌರವ ನಮನ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಲೋಕಸಭಾಧ್ಯಕ್ಷರು, ಕೇಂದ್ರದ ಸಚಿವರು, ಸಂಸದರು, ಪಕ್ಷಾತೀತವಾಗಿ ರಾಜ ಕೀಯ ನಾಯಕರು,  ಗಣ್ಯರು ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಬುಧವಾರ ಬೆಳಿಗ್ಗೆ ಸುಷ್ಮಾ ಅವರ ಪಾರ್ಥಿವ ಶರೀರವನ್ನು ಮೊದಲು ದೆಹಲಿಯ ಜನಪತ್ ರಸ್ತೆಯ ಅವರ ನಿವಾಸ ಧವನ್ ದೀಪ್ ಬಿಲ್ಡಿಂಗ್‍ನಲ್ಲಿ, ನಂತರ ಮಧ್ಯಾಹ್ನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ರಾಜಕೀಯ ನಾಯಕರು, ಗಣ್ಯರು, ಸುಷ್ಮಾ ಅಭಿಮಾನಿಗಳು, ಸಾರ್ವಜನಿಕರು ಸಾವಿರ ಸಂಖ್ಯೆ ಯಲ್ಲಿ ಧಾವಿಸಿ ಅಂತಿಮ ದರ್ಶನ ಪಡೆದರು.

ಶೋಕಾಚರಣೆ: ಸುಷ್ಮಾ ಸ್ವರಾಜ್ ನಿಧನ ಹಿನ್ನಲೆಯಲ್ಲಿ ಬಿಜೆಪಿಯ ಇಂದಿನ ಎಲ್ಲಾ ನಿಗದಿತ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿತ್ತು. ಸುಷ್ಮಾ ಅವರು ಮುಖ್ಯಮಂತ್ರಿಯಾಗಿದ್ದ ದೆಹಲಿಯಲ್ಲಿ 2 ದಿನಗಳ ಶೋಕಾಚರಣೆ ಘೋಷಿಸಲಾಗಿತ್ತು.

70 ನಿಮಿಷ ವೈದ್ಯರ ಹೋರಾಟ: ಲೋಕ ಸಭೆಯಲ್ಲಿ ಜಮ್ಮು-ಕಾಶ್ಮೀರ ಪುನಾರಚನಾ ಮಸೂದೆ ಅಂಗೀಕಾರವಾಗುತ್ತಿದ್ದಂತೆಯೇ ಇತ್ತ ಪ್ರಧಾನಿ ಮೋದಿಗೆ

ಅಭಿನಂದನೆ ಸಲ್ಲಿಸಿ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದರು. ಆಗ ಅವರ ಆರೋಗ್ಯದಲ್ಲಿ ವ್ಯತ್ಯಯದ ಸಣ್ಣ ಸುಳಿವೂ ಇರಲಿಲ್ಲ. ರಾತ್ರಿ 9ರ ವೇಳೆಗೆ ಹೃದಯಾಘಾತವಾಯಿತು. ತಕ್ಷಣ 9.30ಕ್ಕೆಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಕ್ಷಣವೇ ಅವರನ್ನು ತುರ್ತು ಚಿಕಿತ್ಸೆ ನೀಡುವ ವಾರ್ಡ್‍ಗೆ ದಾಖಲಿಸಿ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ಪ್ರಾರಂಭಿಸಲಾಯಿತು. ಸುಷ್ಮಾ ಅವರನ್ನು ಉಳಿಸಿಕೊಳ್ಳುವುದಕ್ಕೆ ಸತತ 70 ನಿಮಿಷಗಳ ಕಾಲ ವೈದ್ಯರು ಹೋರಾಡಿ ದರು. ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳನ್ನೂ ಬಳಸಲಾಯಿತು. ಆದರೆ ಅದಾವುದೂ ಫಲ ನೀಡಲಿಲ್ಲ. ರಾತ್ರಿ 10.50ರ ವೇಳೆಗೆಲ್ಲಾ ಸುಷ್ಮಾ ಇಹಲೋಕ ತ್ಯಜಿಸಿದರು. ಬಳಿಕ ತಡರಾತ್ರಿ 12.15ರ ವೇಳೆಗೆ ಪಾರ್ಥಿವ ಶರೀರವನ್ನು ಜನ್‍ಪತ್ ರಸ್ತೆಯಲ್ಲಿರುವ ಧವನ್ ದೀಪ್ ಬಿಲ್ಡಿಂಗ್‍ನ ಸುಷ್ಮಾ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು.

ಸುಷ್ಮಾರನ್ನು ಸ್ಮರಿಸಿದ ವಿಶ್ವಸಂಸ್ಥೆ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗಾಗಿ ವಿಶ್ವದ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಭಾರತದ ಯುಎನ್ ಶಾಶ್ವತ ರಾಯಭಾರಿ, ಯುಎನ್ ಜನರಲ್ ಅಸೆಂಬ್ಲಿ ಅಧ್ಯಕ್ಷೆ ಮರಿಯಾ ಫೆರ್ನೆಂಡಾ ಎಸ್ಪಿನೋಸ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸುಷ್ಮಾ ಅಪ್ರತಿಮ ನಾಯಕಿ. ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಜನರಿಗಾಗಿಯೇ ಜೀವನ ನಡೆಸಿದ, ನಾಯಕಿಯ ಸಾವಿನ ಸುದ್ಧಿ ಅತ್ಯಂತ ದುಃಖಕರ. ಭಾರತಕ್ಕೆ ಭೇಟಿ ನೀಡಿದಾಗಲೆಲ್ಲಾ ಅವರನ್ನು ಕಾಣುತ್ತಿದ್ದೆ. ಅವರು ಎಲ್ಲರ ಮನದಲ್ಲಿ ಅಜರಾಮರರು ಎಂದು ಟ್ವೀಟ್ ಮಾಡಿದ್ದಾರೆ.

ಯುಎನ್‍ನ ಭಾರತದ ಶಾಶ್ವತ ರಾಯಭಾರಿ ಸಯ್ಯದ್ ಅಕ್ಬರುದ್ದೀನ್, ಸುಷ್ಮಾ ಸ್ವರಾಜ್ ಯುಎನ್‍ನಲ್ಲಿ ಮಾಡಿದ ಭಾಷಣದ ತುಣುಕುಗಳನ್ನು ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ‘2015 ರಿಂದ 2018ರ ವರೆಗಿನ ಎಲ್ಲ ಚರ್ಚೆಗಳ ವೀಡಿಯೋ ತುಣುಕುಗಳ ಶೇರ್ ಮಾಡಿದ್ದಾರೆ. ನಿಮ್ಮ ನೆನಪುಗಳು ಸದಾ ಹಸಿರಾಗಿರುತ್ತದೆ. ಕೃತಜ್ಞತೆಗಳು ಮೇಡಮ್ ಸುಷ್ಮಾ ಸ್ವರಾಜ್’ ಎಂದು ಅವರು ಟ್ವೀಟರ್‍ನಲ್ಲಿ ತಿಳಿಸಿದ್ದಾರೆ. ವಿಶ್ವದ ವಿವಿಧ ಭಾಗಗಳಿಂದ ಸುಷ್ಮಾ ಸ್ವರಾಜ್ ನಿಧನಕ್ಕೆ ಶೋಕ ಸಂದೇಶಗಳು ಬಂದಿವೆ.

ಜನಸಾಮಾನ್ಯರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದ ಸುಷ್ಮಾ ಸ್ವರಾಜ್ ಅವರ ಕಷ್ಟಕ್ಕೆ ಸ್ಪಂದಿಸಲು ಜನರೂ ಹಾತೊರೆಯುತ್ತಿದ್ದರು. 2016ರಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಸುಷ್ಮಾ ಸ್ವರಾಜ್ ಅವರಿಗೆ ತಮ್ಮ ಮೂತ್ರಪಿಂಡವನ್ನು ದಾನ ಮಾಡಲು ಹತ್ತಾರು ಮಂದಿ ಮುಂದೆ ಬಂದಿದ್ದರು.

Translate »