ಕೆಆರ್‍ಎಸ್, ಕಬಿನಿ, ಹೇಮಾವತಿ ಜಲಾಶಯದ ಒಳಹರಿವು ಹೆಚ್ಚಳ
ಮೈಸೂರು

ಕೆಆರ್‍ಎಸ್, ಕಬಿನಿ, ಹೇಮಾವತಿ ಜಲಾಶಯದ ಒಳಹರಿವು ಹೆಚ್ಚಳ

August 8, 2019

ಮೈಸೂರು: ಕೇರಳದ ವೈನಾಡು ಮತ್ತು ಕೊಡಗಿನಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಬಿನಿ, ಹೇಮಾವತಿ ಮತ್ತು ಕೆಆರ್‍ಎಸ್ ಜಲಾ ಶಯದ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದೆ.

ಕಬಿನಿಗೆ 25 ಸಾವಿರ ಕ್ಯೂಸೆಕ್ ನೀರು: ಕೇರಳದ ವೈನಾಡು ಹಾಗೂ ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾ ಗುತ್ತಿದ್ದು, ಜಲಾಶಯಕ್ಕೆ ಪ್ರಸ್ತುತ 25,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳಿದ್ದು, ಸದ್ಯ 2281 ಅಡಿಗಳ ನೀರು ಸಂಗ್ರಹವಿದೆ. ಜಲಾಶಯ ಭರ್ತಿಗೆ ಕೇವಲ 3 ಅಡಿಯಷ್ಟೇ ಬಾಕಿ ಇದೆ. ಒಳ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವುದರಿಂದ ಸುಭಾಷ್ ಕಬಿನಿ ಪವರ್ ಪ್ರಾಜೆಕ್ಟ್‍ನಿಂದ ಸದ್ಯ 5 ಸಾವಿರ ಕ್ಯೂಸೆಕ್, ಜಲಾಶಯದ ಮುಖ್ಯ ಕ್ರೆಸ್ಟ್ ಗೇಟ್ ಗಳಿಂದ 10 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ರಾತ್ರಿ ವೇಳೆ ಒಳಹರಿವು ಇನ್ನು ಹೆಚ್ಚಳವಾಗುವ
ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚು ನೀರನ್ನು ಯಾವುದೇ ಕ್ಷಣದಲ್ಲಾದರೂ ನದಿಗೆ ಬಿಡಲಾಗುತ್ತದೆ ಎಂದು ಎಇಇ ಎನ್.ಸುಜಾತಾ ಪ್ರಕಟಣೆಯಲ್ಲಿ ತಿಳಿಸಿದ್ದು, ಕಬಿನಿ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.

ಕೆಆರ್‍ಎಸ್‍ಗೆ 26,522 ಕ್ಯೂಸೆಕ್ ನೀರು: ಕೆಆರ್‍ಎಸ್‍ಗೆ ಬರುತ್ತಿರುವ ಒಳಹರಿವಿನ ಪ್ರಮಾಣ ಒಂದೇ ದಿನದಲ್ಲಿ ಭಾರೀ ಹೆಚ್ಚಳ ಕಂಡಿದೆ. ಮಂಗಳವಾರ ಬೆಳಿಗ್ಗೆ 12 ಸಾವಿರ ಕ್ಯೂಸೆಕ್ ಇದ್ದ ಒಳ ಹರಿವು. ಸಂಜೆ ವೇಳೆಗೆ 17,745 ಕ್ಯೂಸೆಕ್‍ಗೆ ಏರಿಕೆ ಕಂಡಿತ್ತು. ಬುಧÀವಾರ ಬೆಳಿಗ್ಗೆ 22,719 ಕ್ಯೂಸೆಕ್ ಇದ್ದ ಒಳಹರಿವು ಸಂಜೆ ವೇಳೆಗೆ 26,522 ಕ್ಯೂಸೆಕ್‍ಗೆ ಏರಿಕೆಯಾಗಿದೆ. 6,149 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 88.60 ಅಡಿ ನೀರು ಸಂಗ್ರಹವಾಗಿದೆ.

ಭರ್ತಿಯಾಗದ ಜಲಾಶಯ: ಜುಲೈ ತಿಂಗಳು ಕಳೆಯುತ್ತಾ ಬಂದಿದ್ದರೂ ಈ ತಿಂಗಳು ಪೂರ್ತಿ ಉತ್ತಮ ಮಳೆಯಾಗಿಲ್ಲ. ಹೀಗಾಗಿ ಕಾವೇರಿ ಕೊಳ್ಳದ ವ್ಯಾಪ್ತಿಯ ಜಲಾಶಯಗಳ ಒಡಲು ಬರಿದಾಗಿದ್ದು, ತಮಿಳುನಾಡಿಗೆ ಬಿಡುಗಡೆ ಮಾಡಬೇಕಿದ್ದ ನೀರನ್ನೂ ಬಿಡುಗಡೆ ಮಾಡಿಲ್ಲ ಅನ್ನೋ ಆರೋಪವಿದೆ. ಕಾವೇರಿಯ 4 ಜಲಾಶಯ ಗಳಲ್ಲಿ ಕಳೆದ ವರ್ಷ ಜೂ. 26ರ ವೇಳೆಗೆ 59 ಟಿಎಂಸಿಯಷ್ಟಿದ್ದ ನೀರಿನ ಸಂಗ್ರಹ ಪ್ರಸ್ತುತ 16.53 ಟಿಎಂಸಿಯಷ್ಟು ಮಾತ್ರ ಇದೆ. ಆದರೆ, ಕಳೆದ ನಾಲ್ಕೈದು ದಿನಗಳಿಂದ ಭಾಗಮಂಡಲದಲ್ಲಿ ಬೀಳುತ್ತಿರುವ ನಿರಂತರ ಮಳೆಯಿಂದ ಜಲಾಶಯಗಳು ತುಂಬುವ ಆಶಾಭಾವನೆ ಮೂಡಿದೆ. ಹೇಮಾವತಿಗೆ ಒಳ ಹರಿವು ಹೆಚ್ಚಳ: ಚಿಕ್ಕಮಗಳೂರು, ಸಕಲೇಶ ಪುರ, ಹಾಸನ ಸುತ್ತಮುತ್ತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹೇಮಾವತಿ ಜಲಾಶಯಕ್ಕೆ 28,317 ಕ್ಯೂಸೆಕ್ ನೀರು ಒಳಹರಿವಿದೆ. ಕಳೆದ 24 ಗಂಟೆಗಳಲ್ಲಿ ಹಾಸನ ಜಿಲ್ಲಾದ್ಯಂತ 591 ಮಿಲಿ ಮೀಟರ್ ದಾಖಲೆ ಮಳೆಯಾಗಿದೆ.

Translate »