ಕೊಡಗು, ಹಾಸನದಲ್ಲಿ ಮಳೆ ಆರ್ಭಟ
ಮೈಸೂರು

ಕೊಡಗು, ಹಾಸನದಲ್ಲಿ ಮಳೆ ಆರ್ಭಟ

August 8, 2019

ಮಡಿಕೇರಿ/ಹಾಸನ: ಕೊಡಗು ಹಾಗೂ ಜಿಲ್ಲೆಯಲ್ಲಿ ಭಾರೀ ಗಾಳಿ ಸಹಿತ ರಣಭೀಕರ ಮಳೆ ಮುಂದುವರಿದ್ದು, ಕೊಡಗಿನಲ್ಲಿ ಒಂದೇ ದಿನದಲ್ಲಿ 200 ಮಿ.ಮೀ. ಮಳೆ ಸುರಿದಿದೆ. ಭಾರತೀಯ ಹವಾಮಾನ ಇಲಾಖೆ ಕೂಡ ಈ ಪ್ರಮಾಣದ ಮಳೆ ಯಾಗಲಿದೆ ಎಂದು ಮುನ್ಸೂಚನೆ ನೀಡಿದ್ದು, ಉಭಯ ಜಿಲ್ಲೆಯಾದ್ಯಂತ ಆ.9ರ ಮಧ್ಯ ರಾತ್ರಿಯವರೆಗೂ “ರೆಡ್ ಅಲರ್ಟ್” ಘೋಷಿಸಲಾಗಿದೆ. ಹಾಸನದ ಸಕಲೇಶ ಪುರ, ಅರಕಲಗೂಡು, ಆಲೂರು ಹಾಗೂ ಬೇಲೂರು ತಾಲೂಕಿನ ಕೆಲವೆಡೆ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.

ಭಾರೀ ಗಾಳಿ ಮಳೆಗೆ ಮಡಿಕೇರಿ ಭಾಗ ಮಂಡಲದ ರಸ್ತೆಯ ಅಪ್ಪಂಗಾಳ ಎಂಬಲ್ಲಿ ಬೃಹತ್ ಗಾತ್ರದ ಮರ ರಸ್ತೆಗುರುಳಿ ಬಿದ್ದಿದ್ದು, ಸಾರ್ವಜನಿಕರು ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಗಾಳಿಬೀಡು ಜಂಕ್ಷನ್ ಬಳಿಯ ಕೋಳಿ ಗೂಡು ಎಂಬಲ್ಲಿ ಮನೆ ಮೇಲೆ ಮರ ಬಿದ್ದಿದ್ದು, ಮನೆ ಮಂದಿ ಅಪಾಯ ದಿಂದ ಪಾರಾಗಿದ್ದಾರೆ. ಮನೆಯ ಒಂದು ಭಾಗಕ್ಕೆ ಸ್ವಲ್ಪ ಮಟ್ಟಿನ ಹಾನಿಯಾಗಿದೆ. ತಂತಿಪಾಲ ದೇವಸ್ತೂರು ಸಂಪರ್ಕಿಸುವ ಗ್ರಾಮೀಣ ರಸ್ತೆಯಲ್ಲೂ ಭೂ ಕುಸಿತವಾಗಿದ್ದು, ರಸ್ತೆ ಸಂಚಾರ ಬಂದ್ ಆಗಿರುವ ಬಗ್ಗೆ ವರದಿ ಯಾಗಿದೆ. ಮಳೆಯ ಆರ್ಭಟಕ್ಕೆ ನದಿಗಳು ಮೈತುಂಬಿ ಹರಿಯುತ್ತಿದ್ದು, ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತವಾಗಿವೆ. ಭಾಗಮಂಡಲ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗು ತ್ತಿದ್ದು, ಮಡಿಕೇರಿ
ತಲಕಾವೇರಿ ಹಾಗೂ ಭಾಗಮಂಡಲ-ನಾಪೋಕ್ಲು ರಸ್ತೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಕಳೆದ 2 ದಿನಗಳಿಂದ ರಸ್ತೆ ಸಂಚಾರ ಬಂದ್ ಆಗಿದೆ. ಗ್ರಾಮಸ್ಥರ ಅನುಕೂಲಕ್ಕಾಗಿ ರ್ಯಾಫ್ಟ್ ಬೋಟ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ.

ತಂತಿಪಾಲ ನದಿ ಉಕ್ಕಿ ಹರಿಯುತ್ತಿದ್ದು, ಕಳೆದ ವರ್ಷ ಪ್ರಕೃತಿ ವಿಕೋಪದಲ್ಲಿ ಸಿಲುಕಿದ್ದ ನೂರಾರು ಮರಗಳು ಮಕ್ಕಂದೂರು ಗ್ರಾಮದ ಹೆಮ್ಮತ್ತಾಳು ಸೇತುವೆಗೆ ಕೊಚ್ಚಿ ಬಂದಿವೆ. ಮರಗಳ ಧಿಮ್ಮಿಗಳು ಸೇತುವೆಗೆ ಸಿಲುಕಿಕೊಂಡಿದ್ದು, ನದಿ ನೀರಿನಲ್ಲಿ ಭಾರೀ ಪ್ರಮಾಣದ ಮಣ್ಣು ಕೂಡ ಕೊಚ್ಚಿಕೊಂಡು ಬಂದಿದೆ. ಜೋಡುಪಾಲ ಭಾಗದಲ್ಲೂ ವ್ಯಾಪಕ ಮಳೆ ಸುರಿಯುತ್ತಿದ್ದು, ಪಯಸ್ವಿನಿ ನದಿಯಲ್ಲಿ ಬೃಹತ್ ಗಾತ್ರದ ಮರದ ಧಿಮ್ಮಿಗಳು ಕೊಚ್ಚಿಕೊಂಡು ಬಂದಿವೆ. ಈ ದೃಶ್ಯಗಳು ಪ್ರಾಕೃತಿಕ ವಿಕೋಪ ಘಟಿಸಿದ್ದಕ್ಕೆ ಇದೀಗ ಮೂಕ ಸಾಕ್ಷಿ ಹೇಳುತ್ತಿವೆ. ಮಾತ್ರವಲ್ಲದೇ, ತಂತಿಪಾಲ ಸೇತುವೆಯ ಒಂದು ಪಾಶ್ರ್ವದಲ್ಲಿ ತಡೆಗೋಡೆ ಪಕ್ಕದಲ್ಲೇ ಭೂ ಕುಸಿತವಾಗಿದ್ದು, ಸೇತುವೆ ಸಂಪರ್ಕ ಸ್ಥಗಿತವಾಗುವ ಹಂತಕ್ಕೆ ತಲುಪಿದೆ. ಕಳೆದ ವರ್ಷ ಭಾರೀ ಮರಗಳು ನದಿಯಲ್ಲಿ ತೇಲಿ ಬಂದು ಸೇತುವೆಗೆ ಅಪ್ಪಳಿಸಿದ್ದರಿಂದಾಗಿ ಸೇತುವೆಯ ಕಲ್ಲಿನ ತಡೆಗೋಡೆ ಕುಸಿತಗೊಂಡು ಸಂಪರ್ಕ ಬಂದ್ ಆಗಿತ್ತು. ಬಳಿಕ ಅದನ್ನು ದುರಸ್ಥಿ ಮಾಡಲಾಗಿತ್ತಾದರೂ, ಈ ಬಾರಿಯೂ ಅದೇ ಪರಿಸ್ಥಿತಿ ತಲೆದೋರುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ.

ಕಾಲೂರು ಗ್ರಾಮ ವ್ಯಾಪ್ತಿಯಲ್ಲೂ ರಣ ಭೀಕರ ಮಳೆ ಸುರಿಯುತ್ತಿದ್ದು, ಕಾಲೂರು ನದಿ ಪ್ರವಾಹ ಸ್ಥಿತಿಯ ಮಟ್ಟಕ್ಕೆ ಹರಿಯುತ್ತಿದೆ. ಕಾಲೂರು ಗ್ರಾಮದ ನದಿಯ ಒಂದು ಬದಿಯಲ್ಲಿ ವಾಸಿಸುತ್ತಿರುವ ಕೊಳುಮಾಡಂಡ ಕುಟಂಬಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗುವ ಸಾಧ್ಯತೆಯಿದ್ದ ಹಿನ್ನಲೆಯಲ್ಲಿ ಎನ್.ಡಿ.ಆರ್.ಎಫ್. ಯೋಧರು ಮತ್ತು ಮಡಿಕೇರಿ ಗ್ರಾಮಾಂತರ ಪೊಲೀಸರು ಕಾಲೂರಿಗೆ ತೆರಳಿ ಕೊಳುಮಾಡಂಡ ಕುಟುಂಬಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಬೇತ್ರಿನದಿ(ಕಾವೇರಿನದಿ)ಉಕ್ಕಿ ಹರಿಯುತ್ತಿದ್ದು, ಮಡಿಕೇರಿ-ವಿರಾಜಪೇಟೆ ಸಂಪರ್ಕಿಸುವ ಬೇತ್ರಿ ಸೇತುವೆ ಭರ್ತಿಯಾಗಲು ಕೇವಲ 2 ಅಡಿ ಮಾತ್ರವೇ ಬಾಕಿ ಉಳಿದಿದೆ. ಬೇತ್ರಿ ಸೇತುವೆಯ ಮೇಲೆ ನೀರು ಉಕ್ಕಿದರೆ ಕೊಡಗು ಜಿಲ್ಲೆಯಲ್ಲಿ ಜಲ ಪ್ರವಾಹ ನಿಶ್ಚಿತ ಎಂಬ ನಂಬಿಕೆಯೂ ಇದೆ. ಇದನ್ನು ಪುಷ್ಟೀಕರಿಸುವಂತೆ ಈಗಾಗಲೇ ಹೊದ್ದೂರು-ನಾಪೋಕ್ಲು, ಮೂರ್ನಾಡು-ಬಲಮುರಿ ಮುಖ್ಯ ರಸ್ತೆ ಸಂಪರ್ಕ ರಸ್ತೆ ಕಾವೇರಿ ನದಿ ನೀರಿನ ಪ್ರವಾಹದಿಂದ ಕಡಿತವಾಗಿದೆ.

ಸಿದ್ದಾಪುರ ಸಮೀಪದ ಅಭ್ಯತ್‍ಮಂಗಲ ಗ್ರಾಮದ ಸೇತುವೆ ಬ್ಲಾಕ್ ಆಗಿದ್ದು, ಸಂಪರ್ಕ ರಸ್ತೆ ಮೇಲೆ ನೀರು ಹರಿಯುತ್ತಿದೆ. ಕರಡಿಗೋಡು, ಬೆಟ್ಟದಕಾಡು, ಗುಹ್ಯ, ಹೊಳೆಕರೆ ಪೈಸಾರಿ ಪ್ರದೇಶಗಳಿಗೆ ಕಾವೇರಿ ನದಿಯ ನೀರು ನುಗ್ಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ 25 ಕುಟುಂಬಗಳನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಬೆಟ್ಟದಕಾಡು ಹಾಗೂ ಕರಡಿಗೋಡು ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಪುನರ್ವಸತಿ ಕೇಂದ್ರ ತೆರೆಯಲಾಗಿದ್ದು, ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮಾ, ಉಪ ವಿಭಾಗಾಧಿಕಾರಿ ಜವರೇಗೌಡ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬೆಟ್ಟದ ಕಾಡು ಹಾಗೂ ಕರಡಿಗೋಡು ಪ್ರವಾಹ ಪೀಡಿತ ಪ್ರದೇಶ ಹಾಗೂ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತರ ರಕ್ಷಣೆ ಮತ್ತು ನೆರವಿಗೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಇದೇ ಸಂದರ್ಭ ಅಧಿಕಾರಿಗಳಿಗೆ ಸೂಚನೆ ನೀಡಿದರು.

ದಕ್ಷಿಣ ಕೊಡಗಿನಲ್ಲೂ ಆಶ್ಲೇಷಾ ಮಳೆ ಅಬ್ಬರಿಸಿದ್ದು ವಿರಾಜಪೇಟೆಯ ಆರ್ಜಿ ಗ್ರಾಮದ ಸೇತುವೆ ಹಾಗೂ ರಸ್ತೆಯ ಮೇಲೆ ಭಾರೀ ನೀರು ಹರಿಯುತ್ತಿದ್ದು, ಇಲ್ಲಿ ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಕೆಲವು ವಾಹನಗಳನ್ನು ಸಾರ್ವಜನಿಕರು ಹಗ್ಗದ ಸಹಾಯದಿಂದ ಎಳೆದು ರಸ್ತೆಯ ಮತ್ತೊಂದು ಬದಿಗೆ ತಂದ ಬಗ್ಗೆಯೂ ವರದಿಯಾಗಿದೆ. ಹೈಸೊಡ್ಲೂರು-ಬಿರುನಾಣಿ ರಸ್ತೆಯ(ಮೃತ್ಯುಂಜಯ ದೇವಾಲಯ ರಸ್ತೆ) ಸೇತುವೆ ಬಳಿ ಭೂ ಕುಸಿತ ಆಗಿರುವುದರಿಂದ ಸದರಿ ರಸ್ತೆಯನ್ನು ಪ್ರಸ್ತುತ ಮುಚ್ಚಲಾಗಿದೆ. ನಾಳೆ ಬೆಳಿಗ್ಗೆ ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತಿದ್ದು, ಅಲ್ಲಿಯವರೆಗೆ ಸಾರ್ವಜನಿಕರು ಬದಲಿ ರಸ್ತೆಯನ್ನು ಉಪಯೋಗಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಬಿ.ಶೆಟ್ಟಿಗೇರಿ, ಕುಂದ, ಕೈಮುಡಿಕೆ ಸೇತುವೆಗಳ ಮೇಲೂ ನೀರು ಉಕ್ಕೇರಿದ್ದು, ಜನ ಮತ್ತು ವಾಹನ ಸಂಚಾರ ದುಸ್ಥರವಾಗಿ ಪರಿಣಮಿಸಿದೆ.

ಒಟ್ಟಿನಲ್ಲಿ ಕಾವೇರಿ ತವರು ಕೊಡಗು ಜಿಲ್ಲೆಯಲ್ಲೂ ನದಿ ತೊರೆಗಳು ಪ್ರವಾಹ ಮಟ್ಟ ಮೀರಿ ಹರಿದು, ಸಂಪರ್ಕ ರಸ್ತೆ, ಸೇತುವೆಗಳು ಹಾಗೂ ಗ್ರಾಮಗಳಿಗೆ ಜಲ ದಿಗ್ಬಂದನ ಹೇರಿದೆ. ಜಿಲ್ಲೆಯಾದ್ಯಂತ “ರೆಡ್‍ಅಲರ್ಟ್” ಘೋಷಿಸಿರುವ ನಡುವೆಯೇ ಆಶ್ಲೇಷ ಮಳೆ ಆರ್ಭಟ ಮುಂದುವರಿಸಿದ್ದು, ಜನ ತತ್ತರಿಸುವಂತಾಗಿದೆ.

Translate »