ಕ್ರಿಮಿನಲ್‍ಗಳಿಗೆ ಟಿಕೆಟ್ ನಿರಾಕರಣೆ; ಸುಪ್ರೀಂಗೆ ಆಯೋಗದ ವರದಿ
ಮೈಸೂರು

ಕ್ರಿಮಿನಲ್‍ಗಳಿಗೆ ಟಿಕೆಟ್ ನಿರಾಕರಣೆ; ಸುಪ್ರೀಂಗೆ ಆಯೋಗದ ವರದಿ

January 26, 2020

ನವದೆಹಲಿ: ಕ್ರಿಮಿನಲ್ ಹಿನ್ನೆಲೆ ಯುಳ್ಳ ವ್ಯಕ್ತಿಗಳನ್ನು ರಾಜಕಾರಣ ಹಾಗೂ ಶಾಸನ ರಚನೆಯಿಂದ ದೂರವಿಡುವ ಸಲು ವಾಗಿ ಚುನಾವಣಾ ಆಯೋಗ ಮತ್ತು ಸುಪ್ರೀಂಕೋರ್ಟ್ ಸರ್ಕಾ ರಗಳಿಗೆ ಎಷ್ಟೇ ಸೂಚನೆ, ನಿರ್ದೇಶನ ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕ್ರಿಮಿನಲ್ ಗಳು ಆಡಳಿತದ ಕೇಂದ್ರ ಭಾಗ ಪ್ರವೇಶಿಸದಂತೆ ನಿರ್ಬಂಧ ಹಾಕುವ ಆಯೋಗದ ಯತ್ನಕ್ಕೆ ಫಲ ಸಿಗದ ಹಿನ್ನೆಲೆಯಲ್ಲಿ, ಕ್ರಿಮಿನಲ್ ಹಿನ್ನೆಲೆ ಯುಳ್ಳವರಿಗೆ ಚುನಾವಣಾ ಟಿಕೆಟ್ ನೀಡ ದಂತೆ ನಿರ್ದೆ ಶನ ಜಾರಿ ಮಾಡಬೇಕೆಂದು ಕೋರಿ ಕೇಂದ್ರ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‍ಗೆ ವರದಿ ನೀಡಿರು ವುದು ಮಹತ್ವ ಪಡೆದುಕೊಂಡಿದೆ.

ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳು ಟಿಕೆಟ್ ಸಿಕ್ಕ ನಂತರ ತಮ್ಮ ಮೇಲಿರುವ ಕೇಸುಗಳ ಬಗ್ಗೆ ವಿದ್ಯುನ್ಮಾನ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಜಾಹೀರಾತಿನ ಮೂಲಕ ಮಾಹಿತಿ ನೀಡಬೇಕು ಎಂದು ಆಯೋಗ ನಿಯಮ ಜಾರಿ ಮಾಡಿದೆ. ಆದರೆ, ಈ ಕ್ರಮ ದಿಂದ ರಾಜಕೀಯದಲ್ಲಿನ ಅಪರಾಧೀಕರಣ ತಡೆಯಲು ಸಾಧ್ಯವಾಗಿಲ್ಲ ಎಂದು ಸುಪ್ರೀಂ ಕೋರ್ಟ್‍ಗೆ ತಿಳಿಸಿರುವ ಆಯೋಗ, ರಾಜ ಕೀಯ ಪಕ್ಷಗಳ ಮೂ ಕವೇ ಕ್ರಿಮಿನಲ್, ಭ್ರಷ್ಟರಿಗೆ ಟಿಕೆಟ್ ತಪ್ಪಿಸುವ ತಂತ್ರಗಾರಿಕೆ ಅನುಸರಿಸಲು ಮುಂದಾಗಿದೆ. ಈ ಸಲಹೆಗೆ ಸುಪ್ರೀಂ ಸಮ್ಮತಿಸುವುದೇ ಇಲ್ಲವೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ರಾಜಕೀಯದಲ್ಲಿನ ಅಪರಾಧೀಕರಣ ನಿಯಂತ್ರಿಸಲು ವಾರದ ಒಳ ಗಾಗಿ ಸೂಕ್ತ ನಿಯಮಾವಳಿ ರೂಪಿಸಿ ವರದಿ ಸಲ್ಲಿಸಬೇಕು ಎಂದು ಆಯೋಗ ಮತ್ತು ಅರ್ಜಿ ದಾರರಿಗೆ ನ್ಯಾ.ರೋಹಿಂಟನ್ ನಾರಿಮನ್ ಮತ್ತು ನ್ಯಾ.ರವೀಂದ್ರ ಭಟ್ ಒಳಗೊಂಡ ವಿಭಾಗೀಯ ಪೀಠ ಸೂಚನೆ ನೀಡಿದೆ.

ಕ್ರಿಮಿನಲ್ ರಾಜಕಾರಣಿಗಳನ್ನು ಚುನಾ ವಣೆ ಸ್ಪರ್ಧೆಯಿಂದ ನಿಷೇಧಿಸಬೇಕು ಎಂದು ವಕೀಲ ಅಶ್ವಿನಿ ಉಪಾಧ್ಯಾಯ ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಆದರೆ, ರಾಜಕೀಯ ದಲ್ಲಿನ ಈ ಪಿಡುಗನ್ನು ನಿವಾರಿಸುವ ಅಧಿಕಾರ ಇರುವುದು ಸಂಸತ್ ಮತ್ತು ವಿಧಾನಸಭೆ ಗಳಿಗೆ ಮಾತ್ರ. ರಾಜಕಾರಣಿಗಳೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ನಾವು ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ನಿವೃತ್ತ ಮುಖ್ಯ ನ್ಯಾಯ ಮೂರ್ತಿ ದೀಪಕ್ ಮಿಶ್ರಾ ಈ ಹಿಂದೆ ಅಭಿ ಪ್ರಾಯ ನೀಡಿದ್ದರು. ಅಲ್ಲದೆ, ಭ್ರಷ್ಟಾಚಾರ, ಅಕ್ರಮಗಳ ಬಗ್ಗೆ ಮತದಾರನಿಗೆ ಮಾಹಿತಿ ಇರಬೇಕು. ಅದಾದ ಮೇಲೆ ತನಗೆ ಯಾರು ಸೂಕ್ತ ಎಂಬುದನ್ನು ಆತನೇ ನಿರ್ಧರಿಸುತ್ತಾನೆ ಎಂದು ಕೋರ್ಟ್ ಹೇಳಿತ್ತು. ಇದಾದ ಬಳಿಕ, ಕೆಲ ನಿಯಮಗಳನ್ನು ರೂಪಿಸಿದ್ದ ಚುನಾವಣಾ ಆಯೋಗ, ಕೇಸುಗಳ ಕುರಿತ ಸಂಪೂರ್ಣ ಮಾಹಿತಿ ಬಹಿರಂಗಪಡಿಸ ಬೇಕು ಎಂದು ಅಭ್ಯರ್ಥಿಗಳಿಗೆ ಸೂಚಿಸಿತ್ತು. ಆದರೆ, ಕ್ರಿಮಿನಲ್ ಹಿನ್ನೆಲೆ ಬಗ್ಗೆ ಅಭ್ಯರ್ಥಿ ಗಳು ಮಾಧ್ಯಮದಲ್ಲಿ ಮಾಹಿತಿ ನೀಡಿ ದರೂ ನಮ್ಮ ಮೂಲ ಉದ್ದೇಶ ಈಡೇರು ತ್ತಿಲ್ಲ. ಕ್ರಿಮಿನಲ್‍ಗಳ ಪ್ರವೇಶ ತಡೆಯಲು ಸಾಧ್ಯವಾಗುತ್ತಿಲ್ಲ. ವ್ಯವಸ್ಥೆಯಲ್ಲಿ ಪಾರದರ್ಶ ಕತೆ ಬರಬೇಕೆಂದರೆ ಅವರಿಗೆ ಟಿಕೆಟನ್ನೇ ನೀಡಬಾರದು ಎಂದು ಆಯೋಗ ದೃಢ ನಿಲುವು ಹೊರಹಾಕಿದೆ.

ಪಕ್ಷೇತರನಾಗಿ ನಿಂತರೆ?: ಅಪರಾಧ ಸಾಬೀ ತಾದ ವ್ಯಕ್ತಿಯನ್ನು ಚುನಾವಣೆ ಸ್ಪರ್ಧೆ ಯಿಂದ ಹೊರಗಿಡುವ ಕಾನೂನು ಈಗಾ ಗಲೇ ಚಾಲ್ತಿಯಲ್ಲಿದೆ. ಇದೇ ಕಾರಣಕ್ಕೆ ಬಿಹಾ ರದ ಲಾಲೂ ಪ್ರಸಾದ್ ಯಾದವ್‍ರಂತಹ ಹಲವು ಮಂದಿಗೆ ಚುನಾವಣಾ ರಾಜಕೀಯಕ್ಕೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ಆದರೆ, ಗಂಭೀರ ಕ್ರಿಮಿನಲ್ ಆರೋಪಗಳಿದ್ದರೂ, ಅಪರಾಧ ಸಾಬೀತಾಗದ, ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಗಳು ಚುನಾವ ಣೆಗೆ ಸ್ಪರ್ಧಿಸುವುದನ್ನು ತಡೆಯಲು ಆಯೋ ಗಕ್ಕೆ ಸಾಧ್ಯವಾಗುತ್ತಿಲ್ಲ. ಅಲ್ಲದೆ, ರಾಜಕೀಯ ಪಕ್ಷಗಳೂ ಕ್ರಿಮಿನಲ್‍ಗಳ ಜನಪ್ರಿಯತೆಗೆ ಮಾರುಹೋಗಿ ಅಂಥವರನ್ನೇ ಪ್ರೇರೇಪಿಸು ತ್ತಿರುವುದು ಆಯೋಗಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಒಂದು ವೇಳೆ ರಾಜಕೀಯ ಪಕ್ಷಗಳು ಕ್ರಿಮಿನಲ್‍ಗಳಿಗೆ ಟಿಕೆಟ್ ನೀಡ ಬಾರದು ಎಂದು ನಿಯಮ ರೂಪಿಸಿದರೂ, ಆತ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಸಾಧ್ಯತೆಗಳಿರುತ್ತವೆ. ಅಪರಾಧ ಸಾಬೀತಾ ಗದ ವ್ಯಕ್ತಿಗೆ ತನ್ನ ಹಕ್ಕನ್ನು ಆಚರಿಸುವ ಸಂವಿಧಾನಬದ್ಧ ಅಧಿಕಾರ ವಿರುವುದನ್ನು ತಡೆಯುವುದು ಹೇಗೆ ಎಂಬ ಪ್ರಶ್ನೆಗೆ ಕೋರ್ಟ್ ಮತ್ತು ಆಯೋಗ ಹೇಗೆ ಉತ್ತರ ಕಂಡುಕೊಳ್ಳಲಿದೆ ಎಂಬುದು ಕುತೂಹಲ.

ಕೋಟ್ಸ್…

ಅಪರಾಧಿಗಳ ರಾಜಕೀಯ ಪ್ರವೇಶಕ್ಕೆ ತಡೆ ಹಾಕಲು ಸಂಸತ್ತಿನ ತಿದ್ದುಪಡಿ ಕಾನೂನಿಂದಷ್ಟೇ ಸಾಧ್ಯ. ಇದನ್ನು ಕಾನೂನು ನಿರೂಪಕರು (ಸಂಸದರು, ಶಾಸಕರು) ಮಾಡಬೇಕು. ಹೀಗೆ ಮಾಡಿ ಎಂದು ಸುಪ್ರೀಂಕೋರ್ಟ್ ಶಾಸಕಾಂಗಕ್ಕೆ ಸಲಹೆ ನೀಡಬಹುದೇ ವಿನಃ ಸೂಚನೆ ನೀಡಲಾಗುವುದಿಲ್ಲ. – ಕೆ.ಎನ್.ಭಟ್, ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್

ರಾಜಕೀಯದ ಅಪರಾಧೀಕರಣ ತಡೆಯಲು ಶಾಸಕಾಂಗ ಯಾವುದೇ ಯತ್ನ ಮಾಡದಿದ್ದಾಗ ಸುಪ್ರೀಂ ಹಸ್ತಕ್ಷೇಪ ಅನಿವಾರ್ಯ. ಈ ಹಿನ್ನೆಲೆಯಲ್ಲಿ ನೋಡಿದಾಗ ಆಯೋಗದ ಅಭಿಪ್ರಾಯ ಸರಿಯಾಗಿದೆ. ಆದರೆ, ಭ್ರಷ್ಟಾಚಾರ, ಅಕ್ರಮ, ಕ್ರಿಮಿನಲ್ ಕೃತ್ಯಗಳ ಬಗ್ಗೆ ಮಾಹಿತಿ ಇದ್ದ ಮೇಲೂ ಅಂಥ ಅಭ್ಯರ್ಥಿಗಳು ಆಯ್ಕೆಯಾಗುತ್ತಿರು ವುದೇಕೆ? ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಿರುವುದು ಯಾರು? ಕ್ರಿಮಿನಲ್‍ಗಳನ್ನು ಒಪ್ಪಿಕೊಳ್ಳುವ ಮತದಾರನ ತೀರ್ಮಾನವೂ ಪ್ರಶ್ನಾರ್ಹವಲ್ಲವೇ? – ಶೈಲೇಶ್ ಮಡಿಯಾಳ್, ಸುಪ್ರೀಂಕೋರ್ಟ್ ವಕೀಲರು

ಕ್ರಿಮಿನಲ್‍ಗಳಿಗೆ ಕಡಿವಾಣ ಹಾಕಲು ಆಯೋಗ ನೀಡಿದ ಅಭಿಪ್ರಾಯ ಸ್ವಾಗತಾರ್ಹ. ಆದರೆ, ಚುನಾವಣೆ ಟಿಕೆಟ್‍ಗಾಗಿ ಪಕ್ಷಗಳಲ್ಲಿ ಆಕಾಂಕ್ಷಿಗಳು ಹೇಗೆ ಕಿತ್ತಾಡುತ್ತಾರೆಂಬುದು ಗೊತ್ತಿದೆ. ಬೇರೆಯವರ ಕೈಯಿಂದ ಬೋಗಸ್ ಕ್ರಿಮಿನಲ್ ಕೇಸುಗಳನ್ನು ಹಾಕಿಸಿ, ಮತ್ತೋರ್ವ ಆಕಾಂಕ್ಷಿ ಟಿಕೆಟ್ ತಪ್ಪಿಸಿದರೆ ಏನು ಮಾಡುವುದು? ಷಡ್ಯಂತ್ರದಿಂದಾಗಿ ವ್ಯಕ್ತಿಯ ಸಾಂವಿ ಧಾನಿಕ ಹಕ್ಕನ್ನು ಕಸಿದುಕೊಂಡಂತಾಗುವುದಿಲ್ಲವೇ? ಹೀಗಾಗಿ, ಆಯೋಗವೂ ಬೇರೆ ಬೇರೆ ಆಯಾಮಗಳಲ್ಲಿ ಯೋಚಿಸಿ, ಕೇಸುಗಳ ಗಂಭೀರತೆ ಪರಿಶೀಲಿಸುವ ಅಗತ್ಯವೂ ಇದೆ. – ಅನಿತಾ ಶೆಣೈ, ಹಿರಿಯ ವಕೀಲರು, ಸುಪ್ರೀಂಕೋರ್ಟ್

Translate »