ಆರು ಸಾಧಕರಿಗೆ `ಯೋಗಭೂಷಣ’ ಪ್ರಶಸ್ತಿ ಪ್ರದಾನ
ಮೈಸೂರು

ಆರು ಸಾಧಕರಿಗೆ `ಯೋಗಭೂಷಣ’ ಪ್ರಶಸ್ತಿ ಪ್ರದಾನ

January 26, 2020

ಮೈಸೂರು: ಯೋಗ ಮತ್ತು ಇತರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ 6 ಮಂದಿ ಗಣ್ಯರಿಗೆ `ಯೋಗ ಭೂಷಣ’ ಪ್ರಶಸ್ತಿಯನ್ನು ಸುಯೋಗ ಆಸ್ಪತ್ರೆಯ ಸಂಸ್ಥಾಪಕ ಡಾ.ಎಸ್.ಪಿ.ಯೋಗಣ್ಣ ಶನಿವಾರ ಪ್ರದಾನ ಮಾಡಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ಹಿಮಾಲಯ ಫೌಂಡೇಷನ್ ವತಿ ಯಿಂದ ನಡೆದ ಕಾರ್ಯಕ್ರಮದಲ್ಲಿ ಯೋಗ ಕ್ಷೇತ್ರದ ಸಾಧಕ ರಾದ ವಿ.ಶ್ರೀಕಂಠಸ್ವಾಮಿ ದೀಕ್ಷಿತ್, ಕೆ.ಆರ್. ಯೋಗಾನರಸಿಂಹನ್, ಎಂ.ಪಿ.ರಮೇಶ್‍ಬಾಬು, ಬಿ.ರವಿ, ಅಜಯ್‍ಕುಮಾರ್, ಪ್ರೇಮಾ ಮಂಜುನಾಥ್ ಅವರಿಗೆ ಈ ಸಾಲಿನ `ಯೋಗ ಭೂಷಣ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ನಂತರ ಮಾತನಾಡಿದ ಡಾ.ಯೋಗಣ್ಣ, ಪ್ರಸ್ತುತ ಯೋಗ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಆಚರಣೆಯಾಗುತ್ತಿದೆ. ಯೋಗ ದಿಂದ ಮನುಷ್ಯ ತನ್ನ ಆರೋಗ್ಯವನ್ನು ಕಾಪಾಡಿ ಕೊಳ್ಳ ಬಹುದು. ಮನುಷ್ಯ ಎಲ್ಲಿಯವರೆಗೆ ಹಸ್ಮುಖಿಯಾಗಿರುತ್ತಾನೋ ಅಲ್ಲಿಯವರೆಗೆ ಆತ ಆರೋಗ್ಯವಾಗಿರುತ್ತಾನೆ. ಈ ಅಂಶ ನಿತ್ಯ ಯೋಗಾಭ್ಯಾಸ ಮಾಡಿರುವವರಿಗೆ ಅರಿವಿದೆ ಎಂದರು.

ವಿಶ್ವಸಂಸ್ಥೆಯಲ್ಲಿ ಮಾನಸಿಕ, ಶಾರೀರಿಕ ಹಾಗೂ ಆಧ್ಯಾತ್ಮ ಆರೋಗ್ಯಗಳ ಬಗ್ಗೆ ಉಲ್ಲೇಖವಾಗಿದೆ. ಈ ಅಂಶ ಸನಾತನ ಧರ್ಮದಲ್ಲೂ ಉಲ್ಲೇಖವಾಗಿದೆ. ವೇದ, ಉಪನಿಷತ್ ಗ್ರಂಥಗಳಲ್ಲಿ ಆರೋಗ್ಯ ಚಿಕಿತ್ಸಾ ವಿಧಾನಗಳ ಬಗ್ಗೆ ಉಲ್ಲೇಖ ವಾಗಿದೆ. ಸನಾತನ ಧರ್ಮದ ಬಗ್ಗೆ ಸಂಶೋಧನೆ ನಡೆಸು ತ್ತಿರುವ ದೇಶಗಳು ಗಾಯಿತ್ರಿ ಮಂತ್ರ, ಓಂಕಾರ, ವಿಷ್ಣು ಸಹಸ್ತ್ರ ನಾಮ ಪಠಣ, ಪಂಚಾಕ್ಷರಿ ಮಂತ್ರ ಪಠಣ ಸೇರಿದಂತೆ ಇತರೆ ಮಂತ್ರಗಳಿಗೆ ವೈಜ್ಞಾನಿಕ ಹಿನ್ನೆಲೆಯಿದೆ ಎಂದು ಸಂಶೋಧನೆಯಿಂದ ದೃಢಪಡಿಸಿವೆ ಎಂದರು.

ಹಿಂದೂ ಧರ್ಮ ನಿರ್ದೀಷ್ಟ ವ್ಯಕ್ತಿಗಳಿಂದ ಸ್ಥಾಪನೆಯಾಗಿಲ್ಲ. ಪ್ರಕೃತಿದತ್ತವಾಗಿ ಅಥವಾ ಸಾಮೂಹಿಕ ಹಿನ್ನೆಲೆಯಲ್ಲಿ ಉದಯವಾಗಿರಬಹುದು ಎಂದು ನಮ್ಮ ಅನೇಕ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಬೇರೆ ಧರ್ಮಗಳು ಮಾನವ ನಿರ್ಮಿತ ಹಿನ್ನೆಲೆಯಲ್ಲಿ ಉದಯವಾಗಿದೆ. ಆದ್ದರಿಂದಲೇ ನಮ್ಮ ಧರ್ಮ ವಿಶಿಷ್ಟ, ವಿಭಿನ್ನವಾಗಿದೆ. ಈ ಧರ್ಮದಲ್ಲಿ ಪ್ರಕೃತಿಗೆ ಹತ್ತಿರವಾದ ಮಾನವನಿಗೆ ಅರ್ಥವಾಗದ ಎಷ್ಟು ಕಟುಸತ್ಯ ಗಳು ಅಡಗಿವೆ. ಈ ಅಂಶಗಳನ್ನು ಸಂಶೋಧನೆಗಳ ಮೂಲಕ ಹೊರತರಬೇಕು ಎಂದು ಅಭಿಪ್ರಾಯಪಟ್ಟರು.

ಯೋಗದಿಂದ ನಮ್ಮ ದೇಹದ ಬೇಕು-ಬೇಡಗಳನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಜಗತ್ತಿನಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಯೋಗಾಭ್ಯಾಸ ಪರಿಣಾಮಕಾರಿಯಾಗಲಿದೆ. ಈ ಅಂಶವನ್ನೇ ವಿಶ್ವಸಂಸ್ಥೆ ಜಗತ್ತಿನ ಇತರೆ ರಾಷ್ಟ್ರಗಳ ಮುಂದಿಟ್ಟು `ವಿಶ್ವ ಯೋಗ ದಿನಾಚರಣೆ’ ಮಾಡಲು ಒಪ್ಪಿಗೆ ನೀಡಿದೆ. ಈ ಅಂಶ ಭಾರತೀಯರಿಗೆ ಹೆಮ್ಮೆಯ ವಿಷಯ ಎಂದರು.

ತಂತ್ರಜ್ಞಾನ ಬೆಳದಂತೆ ಸಮಾಜದಲ್ಲಿ ಪ್ರತಿಯೊಬ್ಬರ ಆರೋಗ್ಯ ಸಮಸ್ಯೆ ಉಲ್ಭಣಿಸುತ್ತಿದೆ. ಆಧುನಿಕ ಯುಗದ ಕೆಲಸದ ಒತ್ತಡದಿಂದಾಗಿ ನಾನಾ ಕಾಯಿಲೆಗಳು ಕಾಣಿಸಿ ಕೊಳ್ಳುತ್ತಿದೆ. ಇದರಿಂದ ಮುಕ್ತಿ ಹೊಂದಬೇಕಾದರೆ, ಯೋಗಾಭ್ಯಾಸ ಸೂಕ್ತ ಎಂದು ತಿಳಿಸಿದರು. ವೇದಿಕೆ ಯಲ್ಲಿ ವಿಪ್ರ ಮುಖಂಡ ಕೆ.ರಘುರಾಂ, ಸಮಾಜ ಸೇವಕ ಬಿ.ಆರ್. ನಟರಾಜ್ ಜೋಯಿಸ್, ಚುಟುಕು ಸಾಹಿತ್ಯ ಪರಿಷತ್ ಡಾ.ಎಂ.ಜಿ.ಆರ್.ಅರಸ್, ಹಿಮಾಲಯ ಫೌಂಡೇಶನ್‍ನ ಎನ್.ಅನಂತ, ಸಂಚಾಲಕ ಎಂ.ವಿ. ಎನ್.ಬಾಬು ಉಪಸ್ಥಿತರಿದ್ದರು.

Translate »