ಜು.29ರಂದು ಸುಯೋಗ ಡಯಾಬಿಟಿಕ್ಸ್ ಹೆಲ್ತ್ ಕ್ಲಬ್‍ನ ಉದ್ಘಾಟನಾ ಸಮಾರಂಭ
ಮೈಸೂರು

ಜು.29ರಂದು ಸುಯೋಗ ಡಯಾಬಿಟಿಕ್ಸ್ ಹೆಲ್ತ್ ಕ್ಲಬ್‍ನ ಉದ್ಘಾಟನಾ ಸಮಾರಂಭ

July 29, 2018

ಮೈಸೂರು: ಸುಯೋಗ ಆಸ್ಪತ್ರೆ ವತಿಯಿಂದ ಮಧುಮೇಹಿ ರೋಗಿಗಳಿಗಾಗಿ ಆರಂಭಿಸಿರುವ ‘ಸುಯೋಗ ಡಯಾ ಬಿಟಿಕ್ಸ್ ಹೆಲ್ತ್ ಕ್ಲಬ್’ನ ಉದ್ಘಾಟನಾ ಸಮಾರಂಭ ಹಾಗೂ ಸಕ್ಕರೆ ಕಾಯಿಲೆ ಬಗ್ಗೆ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಜು.29ರಂದು ಏರ್ಪಡಿಸಲಾಗಿದೆ ಎಂದು ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಆವರಣದಲ್ಲಿ ಅಂದು ಬೆಳಿಗ್ಗೆ 10ಕ್ಕೆ ಕ್ಲಬ್ ಅನ್ನು ಸಚಿವ ಸಾ.ರಾ.ಮಹೇಶ್ ಉದ್ಘಾಟಿಸಲಿದ್ದು, ಸಕ್ಕರೆ ಕಾಯಿಲೆಯ ಹಿರಿಯ ತಜ್ಞವೈದ್ಯ ವಿ.ಲಕ್ಷ್ಮೀನಾರಾಯಣ, ಶಿಕ್ಷಣ ತಜ್ಞ ಡಾ.ವಿ.ಜಿ.ಜೋಸೆಫ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಕ್ಕರೆ ಕಾಯಿಲೆ ಮತ್ತು ಅದರ ವಿಧಗಳು, ಸಕ್ಕರೆ ಕಾಯಿಲೆಗೆ ಕಾರಣಗಳು ಮತ್ತು ಜಟಿಲತೆಗಳು, ಸಕ್ಕರೆ ಕಾಯಿಲೆ ಮತ್ತು ಹೃದ್ರೋಗ, ಸಕ್ಕರೆ ಕಾಯಿಲೆಯ ಚಿಕಿತ್ಸಾ ವಿಧಾನಗಳು, ಆಹಾರ ಮತ್ತು ಸಕ್ಕರೆ ಕಾಯಿಲೆ, ಸಕ್ಕರೆ ಮತ್ತು ಮೂತ್ರ ಜನಕಾಂಗದ ಕಾಯಿಲೆ ವಿಷಯಗಳ ಕುರಿತಂತೆ ತಜ್ಞವೈದ್ಯರು ಉಪನ್ಯಾಸ ನೀಡಲಿದ್ದಾರೆ. ನಂತರ ವೈದ್ಯರೊಂದಿಗೆ ಸಂವಾದ ನಡೆಯಲಿದೆ ಎಂದು ಹೇಳಿದರು.

ಸುಮಾರು 150 ಮಧುಮೇಹಿಗಳು ಕ್ಲಬ್‍ನ ಸದಸ್ಯರಾಗಿದ್ದು, ಇವರಿಗೆ ರಿಯಾಯಿತಿ ದರದಲ್ಲಿ ಔಷಧೋಪಚಾರ ಸೇರಿದಂತೆ ತಿಂಗಳಿಗೊಮ್ಮೆ ವಿಶೇಷ ಉಪನ್ಯಾಸ ಕಾರ್ಯಕ್ರಮ, ಜೀವನ ಶೈಲಿ, ವ್ಯಾಯಾಮ, ಆಹಾರ ಪದ್ಧತಿ ಬಗ್ಗೆ ತಿಳಿಸಲಾಗುವುದು. ಆಸಕ್ತರು ಕೇವಲ 250 ರೂ. ಶುಲ್ಕ ಪಾವತಿಸುವ ಮೂಲಕ ಆಜೀವ ಸದಸ್ಯತ್ವ ಪಡೆಯಬಹುದಾಗಿದೆ ಎಂದು ತಿಳಿಸಿದರು. ಕ್ಲಬ್‍ನ ಅಧ್ಯಕ್ಷ ಎಸ್.ಕೆ.ನಂಜಪ್ಪ, ಕಾರ್ಯದರ್ಶಿ ಕೆ.ಎಸ್.ಕೃಷ್ಣ, ಖಜಾಂಚಿ ಎಂ.ಶಿವಕುಮಾರ್ ಗೋಷ್ಠಿಯಲ್ಲಿದ್ದರು.

Translate »