ಚಂದ್ರಗ್ರಹಣ ಹಿನ್ನೆಲೆ: ದೋಷಮುಕ್ತಿಗೆ ಮೈಸೂರಲ್ಲಿ ಹೋಮ, ಶಾಂತಿ ಪೂಜೆ
ಮೈಸೂರು

ಚಂದ್ರಗ್ರಹಣ ಹಿನ್ನೆಲೆ: ದೋಷಮುಕ್ತಿಗೆ ಮೈಸೂರಲ್ಲಿ ಹೋಮ, ಶಾಂತಿ ಪೂಜೆ

July 29, 2018

ಮೈಸೂರು: ಖಗ್ರಾಸ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಶನಿವಾರ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಕೆಲವು ದೇವಾಲಯಗಳಲ್ಲಿ ಭಕ್ತರು ಸಾಮೂಹಿಕ ಹೋಮ, ಹವನ ಹಾಗೂ ಶಾಂತಿ ಪೂಜೆಯಲ್ಲಿ ಪಾಲ್ಗೊಂಡರು.

ಶತಮಾನದ ಕೇತುಗ್ರಸ್ಥ ರಕ್ತ ಚಂದ್ರ ಗ್ರಹಣದ ದೃಶ್ಯವನ್ನು ಕಳೆದ ರಾತ್ರಿ ಕಣ್ತುಂಬಿಕೊಡಿದ್ದ ಜನ, ಇಂದು ಬೆಳಿಗ್ಗೆ ದೇವಾಲಯಗಳ ಮೊರೆ ಹೋದರು. ಬಹುತೇಕ ದೇವಾಲಯಗಳಲ್ಲಿ ಗ್ರಹಣ ನಂತರ ಮುಂಜಾನೆಯಿಂದಲೇ ಶುದ್ಧಿಗೊಳಿಸಲಾಗಿತ್ತು. ದೇವರಿಗೆ ವಿವಿಧ ಅಭಿಷೇಕ, ಅರ್ಚನೆ ನೆರವೇರಿಸಿ ಮಹಾಮಂಗಳಾರತಿ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯ, ಕೆ.ಜಿ.ಕೊಪ್ಪಲಿನ ಬಂದಂತಮ್ಮ ದೇವಾಲಯ, ಕುರುಬಾರಹಳ್ಳಿ ಬನ್ನಿಮಹಾಕಾಳೇಶ್ವರಿ, ಮಹಾದೇಶ್ವರ ದೇವಾಲಯ, ಯೋಗನರಸಿಂಹಸ್ವಾಮಿ ದೇವಾಲಯ, ಅಮೃತೇಶ್ವರ ದೇವಾಲಯ, ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಮೈಸೂರಿನ ವಿವಿಧ ದೇವಾಲಯಗಳಲ್ಲಿ ಬೆಳಿಗ್ಗೆ ಶುದ್ಧಿ ಕಾರ್ಯ ನಡೆಸಲಾಯಿತು. ನಂತರ ದೇವರಿಗೆ ಅಲಂಕಾರ ಮಾಡಲಾಯಿತು.

ದೇವಾಲಯದತ್ತ ಭಕ್ತರು: ಬೆಳಿಗ್ಗೆ ಕುಟುಂಬ ಸದಸ್ಯರೊಂದಿಗೆ ಜನರು ವಿವಿಧ ದೇವಾಲಗಳಿಗೆ ಭೇಟಿ ನೀಡಿದರು. ಹಾಗಾಗಿ ಎಲ್ಲಾ ದೇವಾಲಯಗಳಲ್ಲೂ ಭಕ್ತರ ದಂಡೇ ಕಂಡು ಬಂದಿತು. ಕೆಲವು ದೇವಾಲಯಗಳು ಬೆಳಿಗ್ಗೆ 8ರವರೆಗೂ ಬಾಗಿಲು ಮುಚ್ಚಿದ್ದರೆ, ಮತ್ತೆ ಕೆಲವು ದೇವಾಲಯಗಳನ್ನು ಬೆಳಿಗ್ಗೆ 7ಕ್ಕೆ ತೆರೆಯಲಾಯಿತು. ಇದರಿಂದ ಬೆಳಗಿನಿಂದ ಸಂಜೆಯವರೆಗೂ ದೇವಾಲಯಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಈ ನಡುವೆ ಇಂದು ಶನಿವಾರವಾಗಿದ್ದರಿಂದ ಶಾಲಾ ಮಕ್ಕಳಿಗೆ ಮನೆಗಳಲ್ಲಿ ಉಪಹಾರ ಮಾಡಿಕೊಡಲಾಗದ ಪೋಷಕರು, ಹೊಟೇಲ್‍ಗಳಲ್ಲಿ ತಮ್ಮ ಮಕ್ಕಳಿಗೆ ತಿಂಡಿ ಕೊಡಿಸಿ, ಶಾಲೆಗೆ ಕರೆದೊಯ್ಯುತ್ತಿದ್ದ ದೃಶ್ಯ ಕಂಡು ಬಂದಿತು.

ಹೋಮ-ಹವನ: ಕಳೆದ ರಾತ್ರಿ ಸಂಭವಿಸಿದ ಚಂದ್ರ ಗ್ರಹಣ ಕೆಲವು ರಾಶಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಕೆಲವು ಜ್ಯೋತಿಷಿಗಳು ಹೇಳಿದ್ದರಿಂದ ಆಸ್ತಿಕರು ಹೋಮ-ಹವನದ ಮೊರೆ ಹೋದರು. ಶಾಂತಿ ಮಾಡಿಸಿದರೆ ಒಳಿತಾಗಲಿದೆ ಎಂಬ ನಂಬಿಕೆಯಿಂದ ಹೋಮದಲ್ಲಿ ಪಾಲ್ಗೊಂಡರು. ಮೈಸೂರಿನ ದಿವಾನ್ಸ್ ರಸ್ತೆಯ ಅಮೃತೇಶ್ವರ ದೇವಾಲಯದಲ್ಲಿ ಚಂದ್ರ ಗ್ರಹಣದಿಂದ ದೋಷವಿರುವವರಿಗೆ ಹೋಮ ಮತ್ತು ಹವನದೊಂದಿಗೆ ಶಾಂತಿ ಪೂಜೆ ನಡೆಸಲಾಯಿತು. ಕೆಲವರು ಪ್ರತ್ಯೇಕವಾಗಿ ಹೋಮದಲ್ಲಿ ಪಾಲ್ಗೊಂಡರೆ, ಮತ್ತೆ ಕೆಲವರು ಸಾಮೂಹಿಕ ಹೋಮದಲ್ಲಿ ಪಾಲ್ಗೊಂಡು, ಶಾಂತಿ ಮಾಡಿಸಿ ಸಮಾಧಾನ ತಂದು ಕೊಂಡರು.

Translate »