54ನೇ ವಾರ್ಡ್‍ನಲ್ಲಿ ಶಾಸಕ ರಾಮದಾಸ್ ಪಾದಯಾತ್ರೆ: ಬೆಟ್ಟದ ಪಾದದ ಬಳಿ ಅನಧಿಕೃತ ಶೆಡ್ ತೆರವಿಗೆ ಸೂಚನೆ
ಮೈಸೂರು

54ನೇ ವಾರ್ಡ್‍ನಲ್ಲಿ ಶಾಸಕ ರಾಮದಾಸ್ ಪಾದಯಾತ್ರೆ: ಬೆಟ್ಟದ ಪಾದದ ಬಳಿ ಅನಧಿಕೃತ ಶೆಡ್ ತೆರವಿಗೆ ಸೂಚನೆ

July 29, 2018

ಮೈಸೂರು:  ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಶನಿವಾರ, 54ನೇ ವಾರ್ಡ್‍ನಲ್ಲಿ ಪಾದಯಾತ್ರೆ ನಡೆಸಿ, ಸಾರ್ವಜನಿಕ ಕುಂದು-ಕೊರತೆ ಪರಿಶೀಲಿಸಿದರು.

ಚಾಮುಂಡಿ ಬೆಟ್ಟದ ಪಾದದಿಂದ ಪಾದಯಾತ್ರೆ ಆರಂಭಿಸಿದ ಅವರು, ಅಲ್ಲಿ ಅಕ್ರಮವಾಗಿ ಶೆಡ್ ಹಾಕಿಕೊಂಡು ವಾಹನ ನಿಲುಗಡೆಗೆ ಬಾಡಿಗೆ ನೀಡಿದ್ದಾರೆಂದು ಸಾರ್ವಜನಿಕರಿಂದ ದೂರು ಕೇಳಿ ಬಂದಿದ್ದು, ಕೂಡಲೇ ಅನಧಿಕೃತ ಶೆಡ್ ತೆರವುಗೊಳಿಸಿ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಹಾಗೂ ಶೌಚಾಲಯ ನಿರ್ಮಾಣ ಮಾಡಿಸಬೇಕು. ಮಳೆ ನೀರು ಚರಂಡಿಯನ್ನು ಮುಚ್ಚಿ, ಅದರ ಮೇಲೆಯೇ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಮುಡಾ ಹಾಗೂ ನಗರ ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಗೌರಿಶಂಕರ ನಗರಕ್ಕೆ ಭೇಟಿ ನೀಡಿದಾಗ, ಅಲ್ಲಿನ ನಿವಾಸಿಗಳು, ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿ ಕೆಲವರು ಅಕ್ರಮವಾಗಿ ಬಡಾವಣೆ ನಿರ್ಮಾಣ ಮಾಡುತ್ತಿದ್ದಾರೆಂದು ದೂರಿದರು.

ಇದಕ್ಕೆ ಸ್ಪಂಧಿಸಿದ ಶಾಸಕ ಎಸ್.ಎ.ರಾಮದಾಸ್, ಈ ಬಗ್ಗೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಉದ್ಯಾನ ನಿರ್ಮಾಣ, ವಿದ್ಯುತ್ ಸರಬರಾಜು, ಬೀದಿ ದೀಪಗಳ ವ್ಯವಸ್ಥೆ, ಚರಂಡಿ ನಿರ್ಮಾಣ ಸೇರಿದಂತೆ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಗುಂಡೂರಾವ್ ನಗರ, ಮುನೇಶ್ವರ ನಗರ ಈ ಭಾಗದಲ್ಲಿ ಕಳ್ಳತನದ ಪ್ರಕರಣಗಳು, ಗೂಂಡ ವರ್ತನೆಗಳು ಜಾಸ್ತಿಯಾಗಿದೆ ಎಂದು ಸಾರ್ವಜನಿಕರು ದೂರಿದರು. ಈ ರೀತಿಯ ದುಷ್ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ರಸ್ತೆ ಮಧ್ಯದಲ್ಲೇ ದನಗಳನ್ನು ಕಟ್ಟಿಕೊಂಡು, ಇದನ್ನು ಪ್ರಶ್ನಿಸುವ ಸಾರ್ವಜನಿಕರನ್ನು ಬೆದರಿಸಿ, ತೊಂದರೆ ಕೊಡುವವರಿಗೂ ನೊಟೀಸ್ ನೀಡಿ ಎಚ್ಚರಿಕೆ ನೀಡಬೇಕೆಂದು ಸೂಚಿಸಿದರು.

ಪಾದಯಾತ್ರೆ ನಡುವೆ ಶಾಸಕ ರಾಮದಾಸ್, ಮುನೇಶ್ವರ ನಗರದ ಮಾತಾ ಬಸವಾಂಜಲಿ ಮಠದಲ್ಲಿ ನಡೆದ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲೂ ಪಾಲ್ಗೊಂಡು, ಸ್ಥಳೀಯರೊಂದಿಗೆ ಸಂವಾದ ನಡೆಸಿ, ದೂರು ಆಲಿಸಿದರು.

ಸ್ಟ್ರಾಂಗ್ ಇಂಡಿಯಾ- ಗ್ರೀನ್ ಇಂಡಿಯಾ: `ಸ್ಟ್ರಾಂಗ್ ಇಂಡಿಯಾ- ಗ್ರೀನ್ ಇಂಡಿಯಾ’ ಪರಿಕಲ್ಪನೆಯೊಂದಿಗೆ ಪ್ರತಿ ಶನಿವಾರ ಶಾಲಾ ಮಕ್ಕಳಿಗೆ ವಿವಿಧ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುತ್ತಾ ಬಂದಿರುವ ರಾಮದಾಸ್ ಅವರು, ಇಂದು ನಳಂದ ಶಾಲಾ ಆವರಣದಲ್ಲಿ ಗಿಡ ನೆಟ್ಟು, ಬಳಿಕ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಸಂಘಟಿತ ವಲಯದ ಕಾರ್ಮಿಕರ ಮಕ್ಕಳಿಗೆ, ಸಾಮಾಜಿಕ ಭದ್ರತಾ ಯೋಜನೆಯಡಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ವಿದ್ಯಾರ್ಥಿಗಳ ಗುರಿಯ ಸಾಧನೆಗೆ ಅಗತ್ಯವಾದ ತರಬೇತಿ ನೀಡಲಾಗುವುದು. ಎಲ್ಲರೂ ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕೆಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಮಕ್ಕಳು, ನಾವೆಲ್ಲಾ ಚೆನ್ನಾಗಿ ಕಲಿತು, ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿಕೊಳ್ಳುತ್ತೇವೆ. ಸ್ಟ್ರಾಂಗ್ ಇಂಡಿಯಾ ಕಾರ್ಯಕ್ರಮದಡಿ ನೀಡಲಾಗುವ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ನಮ್ಮ ಗುರಿ ಸಾಧನೆಗೆ ತಯಾರಾಗುತ್ತೇವೆಂದು ಪ್ರತಿಕ್ರಿಯಿಸಿದರು. ಜಿಎಸ್‍ಎಸ್ ಸಂಸ್ಥೆಯ ಶ್ರೀಹರಿ ಉಪಸ್ಥಿತರಿದ್ದರು.

ನ್ಯಾಪ್ಕಿನ್ಸ್ ವಿತರಣೆ: ಕೇಂದ್ರ ಸರ್ಕಾರ ಜನೌಷಧ ಯೋಜನೆಯಡಿ ಕಡಿಮೆ ಬೆಲೆಗೆ ಔಷಧಗಳು ಲಭ್ಯವಾಗುವುದು ಹಾಗೂ ಸುವಿಧಾ ಕಾರ್ಯಕ್ರಮದಡಿ ಕಡಿಮೆ ದರದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಕಲ್ಪಿಸುತ್ತಿರುವ ಬಗ್ಗೆ ಮಹಿಳಾ ಸಂಘಗಳಿಗೆ ತಿಳುವಳಿಕೆ ನೀಡಿದ ಶಾಸಕ ರಾಮದಾಸ್, ಸಂಸದ ಪ್ರತಾಪ್‍ಸಿಂಹ ಅವರೊಂದಿಗೆ ಉಚಿತವಾಗಿ ನ್ಯಾಪ್ಕಿನ್ಸ್ ವಿತರಣೆ ಮಾಡಿದರು.

ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮುಖಂಡರಾದ ವಿ.ಎನ್.ಕೃಷ್ಣ , ವಿದ್ಯಾ ಅರಸ್, ನೂರ್ ಫಾತಿಮಾ, ಜನೌಷಧಿ ಕೇಂದ್ರದ ಲೋಕೇಶ್, ರೇವಣ್ಣ ಆರಾಧ್ಯ, ಕಾರ್ತಿಕ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »