ಮುಂದೊಂದು ದಿನ ಪ್ರಧಾನಿ ಮೋದಿ ಅವರ ಸ್ಮಾರ್ಟ್‍ಸಿಟಿಗಳು ದೇಶವನ್ನೇ ಆಕ್ರಮಿಸಿ ಎಲ್ಲೆಡೆ ಹಿಂದಿ ಹೇರಿಕೆಯಾಗಬಹುದು
ಮೈಸೂರು

ಮುಂದೊಂದು ದಿನ ಪ್ರಧಾನಿ ಮೋದಿ ಅವರ ಸ್ಮಾರ್ಟ್‍ಸಿಟಿಗಳು ದೇಶವನ್ನೇ ಆಕ್ರಮಿಸಿ ಎಲ್ಲೆಡೆ ಹಿಂದಿ ಹೇರಿಕೆಯಾಗಬಹುದು

July 29, 2018
  • ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಕಳವಳ
  • ಬಿ.ಎಂ.ರಾಮಚಂದ್ರ ಅಭಿನಂದನಾ ಸಮಾರಂಭ

ಮೈಸೂರು: ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರಮೋದಿರವರ ಸ್ಮಾರ್ಟ್‍ಸಿಟಿಗಳು ಭಾರತವನ್ನು ಆಕ್ರಮಿಸಿಕೊಂಡು ಎಲ್ಲೆಡೆ ಹಿಂದಿಯೇ ಎಲ್ಲರ ಭಾಷೆಯಾಗುವ ಅಪಾಯವಿದೆ ಎಂದು ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಡಾ.ಹಂಸಲೇಖ ಕಳವಳ ವ್ಯಕ್ತಪಡಿಸಿದರು.

ಕಲಾಮಂದಿರದ ಆವರಣದ ಕಿರುರಂಗ ಮಂದಿರದಲ್ಲಿ ಬಿ.ಎಂ.ರಾಮಚಂದ್ರ ಅಭಿನಂದನಾ ಬಳಗ ಶನಿವಾರ ಆಯೋಜಿಸಿದ್ದ ಅಭಿನಂದನೆ ಹಾಗೂ `ಬಣ್ಣದವಾಡಿ’ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಏಕ ಭಾಷೆಯೆಂದರೆ ಹಿಟ್ಲರ್ ಭಾಷೆ, ಏಕದೈವ ಎಂದರೆ ಹಿಟ್ಲರ್ ದೈವ, ಏಕಮತ ಎಂದರೆ ಹಿಟ್ಲರ್ ಮತ. ಬಹುತ್ವ ತುಂಬಿದ ರಾಷ್ಟ್ರವೇ ಈ ದೇಶದ ಮುಖ್ಯ ಅಂಗ. ಹಾಗಾಗಿ ಸಹ್ಯಾದ್ರಿ ಕಾಡಿನಂತೆ ಬಹುತ್ವ ತುಂಬಿದ ಸರ್ಕಾರವಾಗಬೇಕು ಎಂದರು.
ಅಂದರೆ, ಸಹ್ಯಾದ್ರಿ ಕಾಡಿನಲ್ಲಿ ಎಲ್ಲಾ ಮರಗಳು ಭಿನ್ನ. ಆದರೆ ಎಲ್ಲವೂ ಸ್ವತಂತ್ರವಾಗಿವೆ. ಒಂದನ್ನೊಂದು ಹೊಂದಿಕೊಂಡಿದ್ದಾವೆ. ಇಂಥ ಬಹುತ್ವದ ಭಾರತದಲ್ಲಿ ಭಾಷೆಗಳನ್ನು ಕಾಪಾಡಲು ಕರ್ನಾಟಕದಲ್ಲಿ ಕನ್ನಡ ನಾಟಕ, ಭಾಷೆಯನ್ನು ಕಾಪಾಡಿ ಬೆಳೆಸಬೇಕು ಎಂದು ಹೇಳಿದರು.

ಮೈಸೂರಿನಲ್ಲಿ ಮಕ್ಕಳಿಗಾಗಿ ರಂಗಮಂದಿರ ನಿರ್ಮಿಸಿ, ನಿರಂತರವಾಗಿ ಮಕ್ಕಳಿಗೆ ನಾಟಕಗಳನ್ನು ಹೇಳಿಕೊಡಬೇಕೆಂಬುದು ರಾಮಣ್ಣನ ಕನಸ್ಸು. ಇದನ್ನು ನನಸ್ಸು ಮಾಡಲು ನಾವೆಲ್ಲರೂ ಒಕ್ಕೊರಲಿನಿಂದ ಜಾಗವನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಬೇಕು. ಜತೆಗೆ ಮೈಸೂರಿನ ಎಲ್ಲಾ ಕಲಾ ಸಂಘಗಳು ಸೇರಿದಂತೆ ನಾವೆಲ್ಲರೂ ಈ ಬಾರಿ ರಾಮಚಂದ್ರ ಅವರಿಗೆ ‘ರಾಜ್ಯೋತ್ಸವ ಪ್ರಶಸ್ತಿ’ ನೀಡುವಂತೆ ಒತ್ತಾಯಿಸೋಣ. ಆ ಮೂಲಕ ಕನ್ನಡ, ಕಲೆ ಉಳಿಸೋಣ. ಕಲೆ ಉಳಿದರೆ ಕನ್ನಡ ಉಳಿಯುತ್ತದೆ. ಸಂಗೀತ ಮತ್ತು ಕಲೆಯನ್ನು ಶ್ರೀಮಂತಗೊಳಿಸೋಣ ಎಂದು ತಿಳಿಸಿದರು.

ಸೂಪರ್ ಸ್ಟಾರ್ ಆಗಿರುತ್ತಿದ್ದ: ರಾಮಣ್ಣ ಹ್ಯಾಂಡ್‍ಸಮ್ ಆಗಿದ್ದು, ಚಲನಚಿತ್ರ ರಂಗಕ್ಕೆ ಬೇಕಾದ ಹೀರೋ. ಅವನಲ್ಲಿ ಆ ಎಲ್ಲಾ ಅಂಶಗಳಿವೆ. ನಾನು ಚಿತ್ರರಂಗಕ್ಕೆ ಹೋದಾಗ ರಾಮಣ್ಣ ನನ್ನೊಂದಿಗೆ ಬಂದಿದ್ದರೆ ಸೂಪರ್ ಸ್ಟಾರ್ ಆಗಿರುತ್ತಿದ್ದ. ಅಷ್ಟೆಲ್ಲಾ ಕ್ವಾಲಿಟಿಗಳಿದ್ದರೂ ನಾನು ನೇಪಥ್ಯದಲ್ಲೇ ಇದ್ದು, ನಾಟಕಕ್ಕೆ ದುಡಿಯುತ್ತೇನೆಂದು ಮೈಸೂರಿಗೆ ಬಂದ. ಇಲ್ಲಿಗೆ ಬರಲು ಅವನ ಪ್ರೀತಿಯ ಪತ್ನಿ ಯಶೋಧರವರೇ ಕಾರಣ ಎಂದು ಹಾಸ್ಯಭರಿತ ಮಾತುಗಳಲ್ಲಿ ರಾಮಣ್ಣನನ್ನು ಛೇಡಿಸಿದ ಅವರು, ರಾಮಣ್ಣ ಇಷ್ಟು ಎತ್ತರಕ್ಕೆ ಬೆಳೆಯಲು ಪತ್ನಿಯ ಪ್ರೇರಣೆ ಮತ್ತು ಶಕ್ತಿಯೇ ಮುಖ್ಯ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಲ್ಯದ ನೆನಪಿಗೆ ಜಾರಿದ ನಾದಬ್ರಹ್ಮ: ನಾನು ಸಂಗೀತ ಕುಟುಂಬದಲ್ಲಿ ಬೆಳೆದವನು. ಅಂದಿನ ನವೋದಯ ಸಾಹಿತ್ಯ, ಸ್ವಾತಂತ್ರ್ಯ ಬಂದ ಸಂಭ್ರಮದ ಕಾಲ. ನಾನು ಎಲ್ಲವನ್ನೂ ವಿರೋಧಿಸುತ್ತಿದ್ದೆ. ನನ್ನೊಂದಿಗೆ ಚಂದ್ರ, ಮೂರ್ತಿ, ಜಯದೇವ್, ರಾಮಚಂದ್ರ, ಸೇಲ್ವ, ದೇವಿಪ್ರಸಾದ್ ಈ 7 ಮಂದಿಯೂ ಎಲ್ಲವನ್ನು ವಿರೋಧಿಸುತ್ತಿದ್ದೆವು. ಒಂದು ರೀತಿ ಪೋಲಿ ಹುಡುಗರಂತೆ. ಯಾರನ್ನೇ ನೋಡಿದರೂ ಸುಮ್ಮನೇ ನಗುತ್ತಿದ್ದೆವು. ಯಾಕೆ ನಗುತ್ತೇವೆಂದು ಗೊತ್ತಿರುತ್ತಿರಲಿಲ್ಲ. ಉಮಾಶ್ರೀರವರು ಯಾಕ್ರಣ್ಣ ಕಾರಣ ಇಲ್ಲದೆ ನಗುತ್ತೀರಾ ಎಂದು ಕೇಳುತ್ತಿದ್ದರು. ನಾವು ಮಾಡದ ತರಲೆ, ತಮಾಷೆಯಿಲ್ಲ ಎಂದು ನಗು-ನಗುತ್ತಲೇ ಹೇಳಿದಾಗ ಸಭಾಂಗಣವೆಲ್ಲಾ ನಗೆಗಡಲಿನಲ್ಲಿ ತೇಲಿತು.

ಮ್ಯಾಗ್ನಿಫಿಸೆಂಟ್ 7: ನಮ್ಮಣ್ಣ ನಮಗೆ ಮ್ಯಾಗ್ನಿಫಿಸೆಂಟ್ 7 ಎಂದು ಹೆಸರಿಟ್ಟಿದ್ದರು. ಕೊನೆಗೆ ನಾವೆಲ್ಲರೂ ಒಬ್ಬೊಬ್ಬರಾಗಿ ಪ್ರೇಮವಿವಾಹ ಆದೆವು. ಅದರಲ್ಲಿ ಮೊದಲಿನವನು ನಾನೇ. ನಂತರ ಇನ್ನೊಬ್ಬ ಪ್ರೀತಿ ಮಾಡಿದ. ಆಗ ನಾವೆಲ್ಲರೂ ಅಕ್ಕಿ, ರಾಗಿ ಮೂಟೆ ಕಳಿಸಿಕೊಡಬೇಕಾ ಎಂದು ರೇಗಿಸುತ್ತಿದ್ದೊ. ಹಾಗೆ ಜಯದೇವ, ಮೂರ್ತಿ, ರಾಮಣ್ಣ ಅವರೂ ಪ್ರೇಮ ವಿವಾಹವಾದರು ಎಂದರು.

ಈ ಮಟ್ಟಕ್ಕೆ ಬೆಳೆಯಲು ಪತ್ನಿಯೇ ಕಾರಣ: ನಮ್ಮಂಥ ಪೋಲಿ ಹುಡುಗರು ಈ ಮಟ್ಟಕ್ಕೆ ಬೆಳೆಯಲು ಪತ್ನಿಯರೇ ಮುಖ್ಯ ಕಾರಣ. ಅವರು ಪ್ರತಿಭಟಿಸದೆ ನಮ್ಮೆಲ್ಲಾ ತಪ್ಪುಗಳನ್ನು ತಿದ್ದಿ ಸರಿದಾರಿಗೆ ತಂದಿದ್ದಾರೆ. ಹಾಗಾಗಿ ಒಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂದು ಮೆಚ್ಚುಗೆ ನುಡಿಗಳನ್ನಾಡಿದರು.

ಅಜಾತ ಶತ್ರು: ರಾಮಣ್ಣ ಮೈಸೂರಿನ ಅಜಾತ ಶತ್ರು. ಇವರನ್ನು ಪ್ರೀತಿಸದ ಜನರಿಲ್ಲ. ಅವರೊಬ್ಬ ಕರ್ಮಯೋಗಿ, ವರ್ಣಯೋಗಿ. ಅವರಿಗೆ ಇಂದು ಸನ್ಮಾನಿಸಿರುವುದು ಇಡೀ ಮೈಸೂರು ನಗರವೇ ಬಂದು ಸನ್ಮಾನಿಸಿದಂತಿದೆ. ಇದು ಮೈಸೂರು ಅರಸರು, ಮೈಸೂರು ಸಂಸ್ಕøತಿ ಮಾಡಿದ ಸನ್ಮಾನ. ಈ ಸನ್ಮಾನದಲ್ಲಿ ಆನಂದ, ಅರ್ಥವಿದೆ. ಶ್ರೀರಾಜೇಶ್ವರಿ ವಸ್ತ್ರಾಲಂಕಾರವನ್ನು ರಾಮಣ್ಣರವರ ಇಬ್ಬರು ಪುತ್ರರು ಮುನ್ನೆಡೆಸಿಕೊಂಡು ಹೋಗಲಿ ಎಂದು ಹಾರೈಸಿದರು.

ಇದಕ್ಕೂ ಮುನ್ನ ಹಿರಿಯ ರಂಗಭೂಮಿ ಹಾಗೂ ಜಾನಪದ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಶ್ರೀರಾಜೇಶ್ವರಿ ವಸ್ತ್ರಾಲಂಕಾರದ ಬಿ.ಎಂ.ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು. ನಂತರ ಇವರ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶೇಖ ಮಾಸ್ತರ, ನೃತ್ಯಾಲಯ ಟ್ರಸ್ಟ್ ನಿರ್ದೇಶಕರಾದ ಡಾ.ತುಳಸಿ ರಾಮಚಂದ್ರ, ಬಿ.ಎಂ.ರಾಮಚಂದ್ರರವರ ಪತ್ನಿ ಯಶೋಧ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Translate »