ಸೇವೆಯಿಂದ ನಿವೃತ್ತಿ: ಪ್ರೊ.ಅರವಿಂದ ಮಾಲಗತ್ತಿ ಅವರಿಗೆ ಅಭಿನಂದನೆ
ಮೈಸೂರು

ಸೇವೆಯಿಂದ ನಿವೃತ್ತಿ: ಪ್ರೊ.ಅರವಿಂದ ಮಾಲಗತ್ತಿ ಅವರಿಗೆ ಅಭಿನಂದನೆ

August 11, 2018

ಮೈಸೂರು: ಮಂಗಳೂರು ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 34 ವರ್ಷಗಳ ಕಾಲ ಅಧ್ಯಾಪಕ, ಪ್ರಾಧ್ಯಾಪಕರಾಗಿ ಸಾರ್ಥಕ ಸೇವೆ ಸಲ್ಲಿಸಿ, ಜು.31ರಂದು ನಿವೃತ್ತರಾದ ಹಿರಿಯ ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಅವರಿಗೆ ಅವರ ಗೆಳೆಯರು, ಅಭಿಮಾನಿಗಳು ಮೈಸೂರು ವಿವಿ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶುಕ್ರವಾರ ಆತ್ಮೀಯವಾಗಿ ಅಭಿನಂದಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್, ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ, ಹಿರಿಯ ಸಾಹಿತಿ ಡಾ..ಸಿ.ಪಿ.ಕೃಷ್ಣಕುಮಾರ್, ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಟಿ.ಕೆ.ಉಮೇಶ್, ಕುಲಸಚಿವ ಪ್ರೊ.ಆರ್.ರಾಜಣ್ಣ, ಚಲನಚಿತ್ರ ಸಾಹಿತಿ, ಸಂಗೀತ ನಿರ್ದೇಶಕ ಹಂಸಲೇಖ, ಅಭಿನಂದನಾ ಸಮಿತಿ ಕಾರ್ಯಾಧ್ಯಕ್ಷ ಪ್ರೊ.ಎನ್.ಎಂ.ತಳವಾರ ಇನ್ನಿತರ ಅನೇಕರು ಈ ಸಂದರ್ಭದಲ್ಲಿ ಪ್ರೊ.ಅರವಿಂದ ಮಾಲಗತ್ತಿ ಅವರನ್ನು ಅಬಿನಂದಿಸಿದರು.

ಇಡೀ ದಿನದ ಕಾರ್ಯಕ್ರಮಕ್ಕೆ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಹಂಸಲೇಖ ಅವರು ಸಂಗೀತ ನೀಡಿರುವ ಮಾಲಗತ್ತಿಯವರ ಸಾಹಿತ್ಯಗಳನ್ನು ಆಧರಿಸಿದ `ಗಿಳಿ ಕುಂತು ಕೇಳ್ಯಾವೋ’ ಧ್ವನಿಮುದ್ರಿಕೆಯನ್ನು ಸಚಿವ ಎನ್.ಮಹೇಶ್ ಬಿಡುಗಡೆ ಮಾಡಿದರು. ನಂತರ `ಗಿಳಿ ಕುಂತು ಕೇಳ್ಯಾವೋ’ ಗಾಯನ, ನೃತ್ಯ ರೂಪಕವನ್ನು ಹಂಸಲೇಖ ನಡೆಸಿಕೊಟ್ಟರು.

ಡಾ.ಚ.ಸರ್ವಮಂಗಳಾ ಅವರು `ಮಾಲಗತ್ತಿಯವರೊಂದಿಗೆ ಸಂವಾದ’ ಕಾರ್ಯಕ್ರಮ ನಡೆಸಿಕೊಟ್ಟರು. ಸಂವಾದದಲ್ಲಿ ಪ್ರೊ.ಎನ್.ಎಸ್.ತಾರಾನಾಥ್, ಪ್ರೊ.ಶಿವರಾಮಶೆಟ್ಟಿ, ಪ್ರೊ.ಬಸವರಾಜ ಸಬರದ, ಪ್ರೊ.ಪ್ರಶಾಂತ್ ಜಿ.ನಾಯಕ್, ಬಿ.ಎಂ.ಹನೀಫ್, ಪ್ರೊ.ಪಟ್ಟಾಭಿರಾಮ ಸೋಮಯಾಜಿ ಇನ್ನಿತರರು ಭಾಗವಹಿಸಿದ್ದರು.

ಮಧ್ಯಾಹ್ನ `ಸೀಮಾತೀತ’ ಅಭಿನಂದನಾ ಗ್ರಂಥವನ್ನು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಬಿಡುಗಡೆ ಮಾಡಿ ಅಭಿನಂದಿಸಿ ಮಾತನಾಡಿದರು. `ಮಾ ಕಾವ್ಯ ವೈಜ್ಞಾನಿಕ ವಿಮರ್ಶೆ’ ಮತ್ತು `ಮಾ ಕಾವ್ಯ ವಿಮರ್ಶೆ’ ಕೃತಿಗಳ ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಮತ್ತು ಪೊಲೀಸ್ ಅಧಿಕಾರಿ ಡಾ.ಧರಣೀದೇವಿ ಮಾಲಗತ್ತಿ ಅವರನ್ನು ಅಭಿನಂದಿಸಲಾಯಿತು.

ಇಂದಿಗೂ ದಲಿತರದ್ದು ಕೇರಿಗಳಲ್ಲಿ ಪ್ರತ್ಯೇಕ ಬದುಕು ಸಚಿವ ಎನ್.ಮಹೇಶ್ ಕಳವಳ

ಮೈಸೂರು: 21ನೇ ಶತಮಾನದಲ್ಲೂ ಊರುಗಳಲ್ಲಿ ಕೇರಿಗಳಿವೆ. ಇಂದಿಗೂ ದಲಿತರು ಕೇರಿಗಳಲ್ಲಿ ಪ್ರತ್ಯೇಕವಾಗಿ ಬದುಕುವ ಸ್ಥಿತಿಯಲ್ಲಿದ್ದು, ಇದು ಮಾನಸಿಕವಾಗಿ ದೇಶದ ಐಕ್ಯತೆಗೆ ಕೊಟ್ಟ ದೊಡ್ಡ ಪೆಟ್ಟಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ತೀವ್ರ ಕಳವಳ ವ್ಯಕ್ತಪಡಿಸಿದರು.

ಪ್ರೊ.ಅರವಿಂದ ಮಾಲಗತ್ತಿಯವರ `ಗಿಳಿ ಕುಂತು ಕೇಳ್ಯಾವೋ’ ಧ್ವನಿಮುದ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ದಲಿತರು ಇಂದಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ, ಮತ್ತು ಧಾರ್ಮಿಕವಾಗಿ ಪ್ರತ್ಯೇಕತೆಗೆ ಒಳಗಾಗಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪಾಯಕಾರಿ ಬೆಳವಣಿಗೆ ಎಂದು ಬೇಸರ ವ್ಯಕ್ತಪಡಿಸಿದರು.

ಊರಿನ ಅನೇಕ ಪ್ರತಿಭಾವಂತರು ಕೇರಿಗಳಲ್ಲಿದ್ದಾರೆ. ಈ ಯುವಕರು ಕೇರಿಯಲ್ಲಿ ನಿಂತು ಮಾತನಾಡಿದರೆ, ಹಿಂದೆ ಅದನ್ನು ಊರು ಗಂಭೀರವಾಗಿ ತೆಗೆದುಕೊಳ್ಳುತ್ತಿತ್ತು. ಈಗ ಆ ಗಂಭೀರತೆ ಕಾಣುತ್ತಿಲ್ಲ. ಜಾಗತೀಕರಣದಲ್ಲಿ ಅದು ಉತ್ತಮ ಬೆಳವಣಿಗೆ. ಊರು ತನ್ನ ಅಸ್ತಿತ್ವ ಕಳೆದುಕೊಳ್ಳುವಾಗ ಪ್ರಜ್ಞಾವಂತರು ಕೇರಿಯನ್ನು ದಾಟಿ ಊರಿನ ಮಧ್ಯೆ ಹೋಗಿ ಅದನ್ನು ಬದಲಾಯಿಸಬೇಕು. ಊರಿನ ಮಧ್ಯೆ ನಿಂತು ಭಾರತದ ಸಮಗ್ರತೆ ಮತ್ತು ಐಕ್ಯತೆಯನ್ನು ಎತ್ತಿ ತೋರಿಸಬೇಕು. ಆ ನಿಟ್ಟಿನಲ್ಲಿ ಚಳವಳಿ ಆಗುತ್ತಿದೆ. ಅಂಥ ಶಕ್ತಿಯಿಂದ ಕೇರಿ, ಊರು, ದೇಶವನ್ನು ಬದಲಾಯಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಪ್ರೊ.ಅರವಿಂದ ಮಾಲಗತ್ತಿ ಅವರನ್ನು ಕುರಿತು ಮಾತನಾಡಿದ ಅವರು, ಚಳವಳಿಯಿಂದ ನನಗೆ ಪರಿಚಿತರಾದ ಮಾಲಗತ್ತಿ, ಮಂಗಳೂರಿನಲ್ಲಿ ಚಳವಳಿ ರೂಪಿಸುತ್ತಿದ್ದಾಗ ನಮ್ಮೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಸರ್ಕಾರಿ ಹುದ್ದೆಯಲ್ಲಿ ನಿವೃತ್ತಿ ಹೊಂದಿದ ಕಾರಣಕ್ಕೆ ಇಂದು ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ. ಆದರೆ, ಸಾಹಿತಿ, ಚಳವಳಿಗಾರರಿಗೆ ನಿವೃತ್ತಿ ಎಂಬುದೇ ಇಲ್ಲ ಎಂದರು.

ಇದಕ್ಕೂ ಮುನ್ನ ಅಭಿನಂದನಾ ಸಮಾ ರಂಭಕ್ಕೆ ಚಾಲನೆ ನೀಡಿದ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ಅರವಿಂದ ಮಾಲಗತ್ತಿ, ಕನ್ನಡ ದಲಿತ ಸಾಹಿತ್ಯದ ದೈತ್ಯ. ದಲಿತ ಸಾಹಿತ್ಯ ಹೊರತುಪಡಿಸಿದರೂ ಇವರ ಸಾಹಿತ್ಯ ದೈತ್ಯವಾದದ್ದು. ಲಲಿತ ಮತ್ತು ದಲಿತ ಎರಡನ್ನೂ ಮೀರಿ ಬೆಳೆದ ಬಹುಮುಖ ಪ್ರತಿಭೆ. ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರದಲ್ಲೂ ಇವರ ಸಾಧನೆ ಅಪಾರ ಎಂದು ಬಣ್ಣಿಸಿದರು. ಮಾಲಗತ್ತಿ ನೊಂದ ಕವಿ, ನೊಂದವರ ನೋವು ನೋಯದವರತ್ತ.

ಆತ್ಮ ಇದ್ದವರು ಬರೆದ ಸಾಹಿತ್ಯ ಅತ್ಮಕಥೆಯಾಗುತ್ತದೆ. ಮಾಲಗತ್ತಿಯವರು ಆತ್ಮ ಇದ್ದು ಬರೆದಿದ್ದಕ್ಕೆ ಅವರ ಆತ್ಮಕಥೆ `ಗೌರ್ಮೆಂಟ್ ಬ್ರಾಹ್ಮಣ’ ಉತ್ತಮ ಕೃತಿ ಎನಿಸಿಕೊಂಡಿತು ಎಂದ ಅವರು, ನೋವಿನ ದಾಖಲೆಗಳನ್ನು ಇವರ ಕೃತಿಗಳಲ್ಲಿ ಗುರುತಿಸಬಹುದು ಎಂದು ಅಭಿಪ್ರಾಯಪಟ್ಟರು.

Translate »