ಕೋಮುವಾದಿಗಳಿಗೆ ಹೆದರಿ ನಾಲ್ಕು ಗೋಡೆಗಳ ಮಧ್ಯೆ ಟಿಪ್ಪು ಜಯಂತಿ ಶಾಸಕ ಎನ್.ಮಹೇಶ್ ವಿಷಾದ
ಕೊಡಗು

ಕೋಮುವಾದಿಗಳಿಗೆ ಹೆದರಿ ನಾಲ್ಕು ಗೋಡೆಗಳ ಮಧ್ಯೆ ಟಿಪ್ಪು ಜಯಂತಿ ಶಾಸಕ ಎನ್.ಮಹೇಶ್ ವಿಷಾದ

November 11, 2018

ಯಳಂದೂರು:  ಕೋಮು ವಾದಿಗಳಿಗೆ ಹೆದರಿ ಪೊಲೀಸರ ರಕ್ಷಣೆಯೊಂದಿಗೆ ನಾಲ್ಕು ಗೋಡೆಗಳ ಮಧ್ಯೆ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಿ ಸುತ್ತಿರುವುದು ವಿಷಾದನೀಯ ಎಂದು ಶಾಸಕ ಎನ್.ಮಹೇಶ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಮತ್ತು ತಾಲೂಕು ಆಡಳಿತದ ವತಿ ಯಿಂದ ಹಮ್ಮಿಕೊಂಡಿದ್ದ ಟಿಪ್ಪು ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಹಿರಂಗವಾಗಿ ಆಚರಿಸಬೇಕಾದ ಟಿಪ್ಪು ಜಯಂತಿಯನ್ನು ಕೋಮುವಾದಿಗಳಿಗೆ ಹೆದರಿ ನಾಲ್ಕು ಗೋಡೆಗಳ ಮಧ್ಯೆ ಆಚರಿಸಲಾಗುತ್ತಿದೆ. ಮುಂದಿನ ವರ್ಷ ಏನೇ ಆದರೂ ಟಿಪ್ಪು ಜಯಂತಿಯನ್ನು ಬಹಿರಂಗವಾಗಿ ಆಚರಿಸಲು ಸಿದ್ದನಿದ್ದೇನೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಎಷ್ಟೇ ವಿರೋಧ ಎದುರಿಸಿದರೂ, ಯಾವುದಕ್ಕೂ ಧೃತಿಗೇಡದೆ ಸರ್ಕಾರದ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುವ ಧೃಡ ನಿರ್ಧಾರ ತೆಗೆದುಕೊಂಡರು. ಆದರೆ ಟಿಪ್ಪು ಜಯಂತಿ ಬಹಿರಂಗ ಆಚರಣೆ ಮಾಡುವ ನಿರ್ಧಾರದಲ್ಲಿ ವಿಫಲರಾದರು. ಇದರಿಂದ ಟಿಪ್ಪು ಸುಲ್ತಾನ್ ಜಯಂತಿ ಇಂದು ನಾಲ್ಕು ಗೋಡೆಗಳ ನಡುವೆ ಸಿಸಿಟಿವಿ ಕಣ್ಗಾವಲಿನಲ್ಲಿ ಪೊಲೀಸರ ರಕ್ಷಣೆಯೊಂದಿಗೆ ಆಚರಿಸುತ್ತಿರುವುದು ದುರಾದೃಷ್ಟಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಮಹಾನ್ ಕನ್ನಡ ಪ್ರೇಮಿಯಾಗಿದ್ದ ಟಿಪ್ಪು ತನ್ನ ಆಡಳಿತಾವಧಿಯಲ್ಲಿ ದಲಿತರಿಗೆ ಬೇಸಾಯ ಮಾಡಲು ಭೂಮಿ, ಕೃಷಿಗೆ ಬೇಕಾದ ಅಗತ್ಯ ನೀರಾವರಿ ಯೋಜನೆ ಜಾರಿಗೊಳಿಸಿದ್ದ. ಯುದ್ಧದಲ್ಲಿ ರಾಕೆಟ್ ತಂತ್ರಜ್ಞಾನ ಬಳಸಿ ಯುದ್ದ ಮಾಡುವ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ ಎಂದರು. ಜಿಪಂ ಉಪಾಧ್ಯಕ್ಷ ಜೆ.ಯೋಗೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾ ರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಶಾಸಕ ಎಸ್. ಬಾಲರಾಜು, ತಾಪಂ ಅಧ್ಯಕ್ಷ ನಿರಂಜನ್, ಉಪಾಧ್ಯಕ್ಷೆ ಮಲ್ಲಾಜಮ್ಮ, ತಾಪಂ ಸದಸ್ಯರಾದ ಪಲ್ಲವಿ, ನಾಗರಾಜು, ಟೌನ್ ಪಂಚಾಯಿತಿ ಅಧ್ಯಕ್ಷ ನಿಂಗರಾಜು, ಕಾಂಗ್ರೆಸ್ ಮುಖಂಡ ಕಿನಕಹಳ್ಳಿ ಬಿ.ರಾಚಯ್ಯ ಸೇರಿದಂತೆ ಇತರರಿದ್ದರು.

Translate »