ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಕಲಾ ವೈಭವ, ವಸ್ತ್ರ ಉತ್ಸವ
ಮೈಸೂರು

ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಕಲಾ ವೈಭವ, ವಸ್ತ್ರ ಉತ್ಸವ

August 11, 2018

ಮೈಸೂರು: ಮೈಸೂರಿನ ಹೆಬ್ಬಾಳು ಕೈಗಾರಿಕಾ ವಲಯ ರಿಂಗ್ ರಸ್ತೆಯಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ `ಕಲಾ ವೈಭವ’ದೊಂದಿಗೆ `ವಸ್ತ್ರ ಉತ್ಸವ’ ಮೈದಳೆದಿದೆ.

ಅರ್ಬನ್ ಹಾತ್ ವತಿಯಿಂದ ವರ ಮಹಾಲಕ್ಷ್ಮೀ ಹಬ್ಬದ ಅಂಗವಾಗಿ `ವಸ್ತ್ರ ಉತ್ಸವ’ವನ್ನು ಹಾಗೂ ರಾಜ್ಯ ಸರ್ಕಾರದ ಬೃಹತ್ ಹಾಗೂ ಮೆಗಾ ಕೈಗಾರಿಕಾ ನಿರ್ದೇಶನಾಲಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದೊಂದಿಗೆ `ಕಲಾ ವೈಭವ’ ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ. ಇಂದಿನಿಂದ ಆ.9ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೂ ಭೇಟಿ ನೀಡಬಹುದಾಗಿದೆ. ಸಣ್ಣ ಕೈಗಾರಿಕೆಗಳು, ಸ್ವಸಹಾಯ ಗುಂಪುಗಳು, ಖಾದಿ ಗ್ರಾಮೋದ್ಯೋಗ, ಸ್ವಯಂ ಉದ್ಯೋಗಿಗಳು, ಕರಕುಶಲಕರ್ಮಿಗಳು, ಕೈಮಗ್ಗ ನೇಕಾರರ ಸಹಕಾರ ಸಂಘಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮೂಲಕ ತಯಾರಿಸಲಾಗಿರುವ ಉತ್ತಮ ಗುಣಮಟ್ಟದ ವಸ್ತುಗಳನ್ನು ಕೊಳ್ಳುವ ಸದಾವಕಾಶವಿದೆ.

ಆಕರ್ಷಣೀಯ ಕರಕುಶಲ ವಸ್ತುಗಳು, ಕೈಮಗ್ಗದ ರೇಷ್ಮೆ ಹಾಗೂ ಕಾಟನ್ ಸೀರೆಗಳು, ಹೊದಿಕೆಗಳು, ವಿವಿಧ ಲೋಹ, ಜರಿ ಕಸೂತಿ ವಸ್ತ್ರಗಳು, ಸಿದ್ದ ಉಡುಪುಗಳು, ಶಿಲ್ಪಗಳು, ಕುಂಬಾರಿಕೆ ವಸ್ತುಗಳು, ಚರ್ಮ ಮತ್ತು ಮರದಿಂದ ಮಾಡಿದ ಆಟಿಕೆಗಳು, ಅಲಂಕಾರಿಕಾ ಬೊಂಬೆಗಳು, ಗೃಹೋಪಯೋಗಿ ವಸ್ತುಗಳು, ಕಸೂತಿಯುಳ್ಳ ಬ್ಯಾಗುಗಳು, ಕೃತಕ ಆಭರಣ, ರುದ್ರಾಕ್ಷಿ, ಮಣಿಗಳು, ಬುಡಕಟ್ಟು ಆಭರಣಗಳು, ಬಿದ್ರಿ, ಕುಂದಣ ಕಲೆ, ಕಂಚಿನ ವಿಗ್ರಹ, ಕಸೂತಿ ಸೀರೆಗಳು, ಮೇಲು ಹಾಸುಗಳು, ಚನ್ನಪಟ್ಟಣ ಗೊಂಬೆಗಳು, ಮಣ್ಣಿನ ಹೂಜಿಗಳು, ಹೂ-ಕುಂದಗಳು ಹೀಗೆ ವಿಭಿನ್ನ, ಅತ್ಯಾಕರ್ಷಕವಾದ ವಸ್ತುಗಳ ಜೊತೆಗೆ, ಆಯುರ್ವೇದ ಹಾಗೂ ಗಿಡಮೂಲಿಕೆ ಔಷಧಿಗಳು, ಉತ್ತರ ಕರ್ನಾಟಕ ಭಾಗದ ರುಚಿಕರವಾದ ತಿಂಡಿ ತಿನಿಸುಗಳೂ ಮಾರಾಟಕ್ಕಿವೆ. ಅರ್ಬನ್ ಹಾತ್‍ಗೆ ಭೇಟಿ ನೀಡಿ, ಒಂದು ಸುತ್ತು ಹಾಕಿದರೆ ಸಾಕು ಬೇಕಾದ ಎಲ್ಲಾ ವಸ್ತುಗಳನ್ನೂ ನೋಡಿ, ಬೇಕಾದ್ದನ್ನು ಕೊಳ್ಳಬಹುದು. ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ಎಲ್ಲಾ ವಸ್ತುಗಳ ಬೆಲೆಯಲ್ಲೂ ವಿಶೇಷ ರಿಯಾಯಿತಿ ನೀಡಲಾಗಿದೆ. ಇನ್ನೂ 9 ದಿನ, ಪರಿಸರ ಸ್ನೇಹಿ ಹಾಗೂ ಆರೋಗ್ಯ ಸ್ನೇಹಿ ವಸ್ತುಗಳನ್ನು ಕೊಳ್ಳಬಹುದಾಗಿದೆ.

ಗಣ್ಯರಿಂದ ಉದ್ಘಾಟನೆ: ಗಣ್ಯರೊಡಗೂಡಿ ಶುಕ್ರವಾರ ಕಲಾ ವೈಭವ ಹಾಗೂ ವಸ್ತ್ರ ಉತ್ಸವಕ್ಕೆ ಚಾಲನೆ ನೀಡಿದ ಜೆಎಸ್‍ಎಸ್ ಮಹಾವಿದ್ಯಾಪೀಠದ ಮುಖ್ಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟ್ಸೂರಮಠ ಮಾತನಾಡಿ, ವರ ಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಕೈಮಗ್ಗದ ವಿಭಿನ್ನ ವಸ್ತ್ರಗಳು ಹಾಗೂ ಕರಕುಶಲ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಕೊಳ್ಳಬಹುದಾಗಿದೆ. ಮೈಸೂರಿನ ಜನತೆ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ತ್ರಿಪುರ ಹ್ಯಾಂಡ್‍ಲೂಮ್ಸ್‍ನ ಅಧಿಕಾರಿ ಪ್ರಹ್ಲಾದ್ ದೇಬ್ನಾಥ್, ಬಿ.ದೇಬ್, ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗ(ಯೋಜನೆ)ದ ನಿರ್ದೇಶಕ ಡಾ.ಸಿ.ರಂಗನಾಥಯಯ್ಯ, ಜಂಟಿ ನಿರ್ದೇಶಕ ಬಿ.ಆರ್.ಉಮಾಕಾಂತ್, ಜೆಎಸ್‍ಎಸ್ ಅರ್ಬನ್ ಹಾತ್‍ನ ಸಂಚಾಲಕ ರಾಕೇಶ್ ರೈ ಮತ್ತಿತರರು ಉಪಸ್ಥಿತರಿದ್ದರು.

Translate »