ಒಂದೇ ರಾತ್ರಿ 8 ಅಂಗಡಿಗಳಲ್ಲಿ ಸರಣಿ ಕಳವು
ಮೈಸೂರು

ಒಂದೇ ರಾತ್ರಿ 8 ಅಂಗಡಿಗಳಲ್ಲಿ ಸರಣಿ ಕಳವು

July 29, 2018
  • ಪೊಲೀಸ್ ಚೆಕ್‍ಪೋಸ್ಟ್ ಸಮೀಪ ಬೋಗಾದಿಯಲ್ಲೂ ಖದೀಮರ ಕೈಚಳಕ
  • ಕಳೆದ ವರ್ಷ ಮಂಚೇಗೌಡನ ಕೊಪ್ಪಲು ಮುಖ್ಯ ರಸ್ತೆ, ಮಹದೇಶ್ವರ ಬಡಾವಣೆಯಲ್ಲಿ ಒಂದೇ ರಾತ್ರಿ 8 ಅಂಗಡಿಯಲ್ಲಿ ಕಳ್ಳತನವಾಗಿತ್ತು
  • ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಅಮಾನತು ಆತಂಕ

ಮೈಸೂರು:  ಚಂದ್ರ ಗ್ರಹಣ ಎಂದು ಕತ್ತಲಾಗುತ್ತಿದ್ದಂತೆಯೇ ಜನರು ಮನೆ ಸೇರಿಕೊಳ್ಳುತ್ತಿದ್ದ ದಿನವನ್ನೇ ಟಾರ್ಗೆಟ್ ಮಾಡಿರುವ ಖದೀಮರ ತಂಡ ಶುಕ್ರವಾರ ಒಂದೇ ರಾತ್ರಿ ಮೈಸೂರಿನಲ್ಲಿ 8 ಅಂಗಡಿಗಳ ರೋಲಿಂಗ್ ಶೆಟರ್ ಮೀಟಿ, ನಗದು ದೋಚಿ ಪರಾರಿಯಾಗಿದ್ದಾರೆ.

ಚಂದ್ರಗ್ರಹಣ ಎಂದು ಜನ ಮನೆಯಲ್ಲಿ ಸುರಕ್ಷಿತವಾಗಿರೋಣ ಎಂದು ನಿರ್ಧರಿಸಿದರೆ, ಇತ್ತ ಪೊಲೀಸರು ಸಹ ಎರಡನೇ ಆಷಾಢ ಶುಕ್ರವಾರವಾದ ಕಾರಣ ಚಾಮುಂಡಿ ಬೆಟ್ಟದ ಬಂದೋಬಸ್ತ್‍ನಲ್ಲಿ ನಿರತರಾಗಿರುವುದನ್ನೇ ಗುರಿಯಾಗಿಸಿಕೊಂಡು ರಾತ್ರಿ ಖದೀಮರು ಕಾರ್ಯಾಚರಣೆ ನಡೆಸಿ, ಹಣ ದೋಚುವಲ್ಲಿ ಯಶಸ್ವಿಯಾಗಿದ್ದಾರೆ.

ಹೈಡ್ರಾಲಿಕ್ ಜಾಕ್ ಬಳಸಿ ಕೆಲ ಅಂಗಡಿ ಗಳ ರೋಲಿಂಗ್ ಶೆಟರ್ ಮೀಟಿ ತೆಗೆದಿದ್ದರೆ, ಮತ್ತೆ ಕೆಲ ಅಂಗಡಿಗಳ ರೋಲಿಂಗ್ ಶೆಟರ್ಗಳನ್ನು ವಾಹನಕ್ಕೆ ಸರಪಳಿಯಿಂದ ಕಟ್ಟಿ ಎಳೆಸಿ, ಬೆಂಡ್ ಮಾಡಿ ಒಳ ನುಸುಳಿರುವುದು ಮಹಜರು ನಡೆಸಿದಾಗ ಪೊಲೀಸರಿಗೆ ತಿಳಿದು ಬಂದಿದೆ.

ಮಧ್ಯರಾತ್ರಿ 1.30ರ ನಂತರ ಮುಂಜಾನೆ 4 ಗಂಟೆವರೆಗೆ ಈ ಕೃತ್ಯ ನಡೆದಿರಬಹುದೆಂದು ಶಂಕಿಸಲಾಗಿದ್ದು, ಕುವೆಂಪುನಗರ ಠಾಣಾ ವ್ಯಾಪ್ತಿಯ ದಟ್ಟಗಳ್ಳಿಯಲ್ಲಿ ನಾಲ್ಕು, ಸರಸ್ವತಿಪುರಂ ಠಾಣಾ ವ್ಯಾಪ್ತಿಯ ಬೋಗಾದಿ ರಿಂಗ್ ರಸ್ತೆ ಜಂಕ್ಷನ್ ಬಳಿ ಎರಡು ಹಾಗೂ ಜಯ ಪುರ ಠಾಣಾ ವ್ಯಾಪ್ತಿಯ ಸೋಮೇಶ್ವರಪುರ ದಲ್ಲಿ ಎರಡು ಅಂಗಡಿಗಳಲ್ಲಿ ಕಳ್ಳತನವಾಗಿದೆ.

ದಟ್ಟಗಳ್ಳಿ 3ನೇ ಹಂತದ ನೇತಾಜಿ ಸರ್ಕಲ್ ಬಳಿಯ ಮೆಡ್‍ಪ್ಲಸ್ ಔಷಧಿ ಅಂಗಡಿಯಲ್ಲಿ 30,000 ರೂ. ನಗದು ಕದ್ದಿರುವ ಖದೀಮರು, ಡ್ರಾಯರ್‍ನಲ್ಲಿದ್ದ 10 ರೂ. ಮುಖ ಬೆಲೆಯ 5000 ರೂ. ಇದ್ದರೂ ಇದನ್ನು ಮುಟ್ಟದೆ ಕೇವಲ 500 ಮತ್ತು 2000 ರೂ. ಮುಖ ಬೆಲೆಯ 30,000 ರೂ.ಗಳನ್ನು ಎಗರಿಸಿದ್ದಾರೆ.

ಅದರ ಪಕ್ಕದಲ್ಲಿರುವ ಅಶೋಕ ಭಂಡಾರ್ ದಿನಸಿ ಅಂಗಡಿ (ಶೆಟ್ಟಿ ಅಂಗಡಿ ಎಂದೇ ಖ್ಯಾತಿ), ಪತಂಜಲಿ ಆಯುರ್ವೇದ ಔಷಧಿ ಅಂಗಡಿ ಹಾಗೂ ಆರ್‍ಎಸ್ ಎಂಟರ್‍ಪ್ರೈಸಸ್ ಸ್ಟೇಷನರಿ ಅಂಗಡಿಗಳ ರೋಲಿಂಗ್ ಶೆಟರ್‍ಗಳನ್ನು ಮೀಟಿ ತೆಗೆದು ಒಳ ನುಗ್ಗಿರುವ ಕಳ್ಳರು, ಕೇವಲ ಹಣದ ಡ್ರಾಯರ್ ಶೋಧಿಸಿ ಸಿಕ್ಕಿದಷ್ಟು ಹಣ ಕದ್ದು ಪರಾರಿಯಾಗಿದ್ದಾರೆಯೇ ಹೊರತು ಇನ್ನಾವುದೇ ಪದಾರ್ಥ ಗಳನ್ನು ಮುಟ್ಟಿಲ್ಲ. ಹಾಗೆಯೇ ಬೋಗಾದಿ ಮುಖ್ಯ ರಸ್ತೆಯ ರಿಂಗ್ ರಸ್ತೆ ಸಮೀಪವೇ ಇರುವ ಶ್ರೀ ಕಂಠೇಶ್ವರ ಟಿವಿ ಶೋ ರೂಂ ರೋಲಿಂಗ್ ಶೆಟರ್ ಅನ್ನು ವಾಹನಕ್ಕೆ ಸರಪಳಿ ಕಟ್ಟಿ ಎಳೆಸಿ, ಬೆಂಡ್ ಮಾಡಿ ನುಸುಳಿ, ಕ್ಯಾಷ್ ಬಾಕ್ಸ್‍ನಲ್ಲಿದ್ದ 3000 ರೂ. ನಗದು ಕದ್ದಿದ್ದು, ಲಕ್ಷಾಂತರ ರೂ. ಎಲೆಕ್ಟ್ರಾನಿಕ್ಸ್ ಪದಾರ್ಥಗಳನ್ನು ಮಾತ್ರ ಮುಟ್ಟಿಲ್ಲ.

ಅಲ್ಲೇ ತುಸು ದೂರದಲ್ಲಿರುವ ರಾಮ್ ದೇವ್ ಟೆಕ್ಸ್‍ಟೈಲ್ಸ್ ಬಟ್ಟೆ ಅಂಗಡಿಗೂ ಅದೇ ಮಾದರಿ ದಾಳಿ ಮಾಡಿದ್ದು, ಆದರೆ ಅಲ್ಲಿ ಹಣ ಇಲ್ಲದಿದ್ದ ಕಾರಣ ಕಳ್ಳರು ಬರಿಗೈಲಿ ಹಿಂದಿರುಗಿರುವುದು ಬೆಳಿಗ್ಗೆ ಪರಿಶೀಲನೆ ವೇಳೆ ತಿಳಿಯಿತು.

ಬೋಗಾದಿ ರಸ್ತೆಯಲ್ಲಿ ಮುಂದೆ ಹೋದರೆ, ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಸೋಮೇಶ್ವರಪುರ ಕ್ರಾಸ್ ಸರ್ಕಲ್‍ನಲ್ಲಿ ಎರಡು ಅಂಗಡಿಗಳಲ್ಲಿಯೂ ತಲಾ ಐದೈದು ಸಾವಿರ ರೂ. ನಗದು ಕದ್ದಿದ್ದಾರೆ. ಬೋಗಾದಿ ರಿಂಗ್ ರಸ್ತೆ ಜಂಕ್ಷನ್‍ನಲ್ಲಿ ದಿನದ 24 ಗಂಟೆ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವ ಚೆಕ್‍ಪೋಸ್ಟ್‍ಗೆ ಅನತಿ ದೂರದಲ್ಲೇ ಇರುವ ಶ್ರೀಕಂಠೇಶ್ವರ ಟಿವಿ ಶೋ ರೂಂನಲ್ಲೇ ಕಳ್ಳತನವಾಗಿರುವುದು ಅಚ್ಚರಿ ಮೂಡಿಸಿದ್ದು, ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ.ವಿಕ್ರಂ ವಿ. ಅಮಟೆ, ಕೆಆರ್ ಉಪವಿಭಾಗದ ಎಸಿಪಿ ಧರ್ಮಪ್ಪ, ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಸಿಸಿಬಿ ಎಸಿಪಿ ಬಿ.ಆರ್. ಲಿಂಗಪ್ಪ, ಬೆರಳಚ್ಚು ಮುದ್ರ ನಗರ ಘಟಕದ ಎಸಿಪಿ ರಾಜಶೇಖರ್, ಸಬ್‍ಇನ್ಸ್‍ಪೆಕ್ಟರ್ ಅಪ್ಪಾಜಿಗೌಡ, ಶ್ವಾನದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕಳ್ಳತನವಾಗಿರುವ ಬಹುತೇಕ ಅಂಗಡಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿಲ್ಲ ವಾದರೂ ಅಕ್ಕಪಕ್ಕದ ಅಂಗಡಿಗಳು, ಸರ್ಕಲ್‍ಗಳಲ್ಲಿರುವ ಕ್ಯಾಮರಾಗಳಲ್ಲಿ ಖದೀಮರ ಕೈಚಳಕ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕುವೆಂಪುನಗರ, ಸರಸ್ವತಿಪುರಂ ಠಾಣೆ ಇನ್ಸ್‍ಪೆಕ್ಟರ್ ಮಂಜುನಾಥ್, ನಾಗೇಗೌಡ ಅವರು ಸಿಸಿ ಟಿವಿ ಫುಟೇಜ್‍ಗಳನ್ನು ಪಡೆದು, ಖದೀಮರ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಒಂದು ವರ್ಷದ ಹಿಂದೆ ಮೈಸೂರಿನ ಮಹದೇಶ್ವರ ಬಡಾವಣೆಯ ಮುಖ್ಯ ರಸ್ತೆ, ಮಂಚೇಗೌಡನಕೊಪ್ಪಲು ಮುಖ್ಯ ರಸ್ತೆಯಲ್ಲಿ ಒಂದೇ ರಾತ್ರಿ 8 ಅಂಗಡಿಗಳಲ್ಲಿ ಇದೇ ರೀತಿ ರೋಲಿಂಗ್ ಶೆಟರ್‍ಗಳನ್ನು ಮೀಟಿ, ನಗದು ಕಳವು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »